ಊರ್ವಶಿ ಚಿತ್ರಮಂದಿರಕ್ಕೆ ಪೊಲೀಸ್ ಭದ್ರತೆ
Update: 2017-11-06 20:13 IST
ಬೆಂಗಳೂರು, ನ.6: ಡಾ.ರಾಜ್‌ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನೆಮಾ ಪ್ರದರ್ಶನ ಸ್ಥಗಿತಕ್ಕೆ ಮಾಲಕರು ನಿರ್ಧರಿಸಿದ ಕಾರಣ ಕೆಲ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಲಾಲ್‌ಬಾಗ್ ಬಳಿಯ ಊರ್ವಶಿ ಚಿತ್ರಮಂದಿರಕ್ಕೆ ರವಿವಾರ ರಾತ್ರಿ ನುಗ್ಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.
ನ.1ರಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಸ್ತೂರಿ ನಿವಾಸ ಚಲನಚಿತ್ರವನ್ನು ಪ್ರದರ್ಶಿಸಲಾಗುತಿದ್ದು, ಈ ತಿಂಗಳ ಪೂರ್ತಿ ಸಿನಿಮಾ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಚಿತ್ರಮಂದಿರಕ್ಕೆ ಕಲ್ಲು ತೂರುತ್ತೇವೆ ಎಂದು ಅಪರಿಚಿತರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕಲಾಸಿಪಾಳ್ಯ ಪೊಲೀಸರ ಗಮನಕ್ಕೆ ತಂದಿದ್ದು, ಚಿತ್ರಮಂದಿರಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಒದಗಿಸಲಾಗಿದೆ ಎಂದು ತಿಳಿದು ಬಂದಿದೆ.