ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುವುದು ಹೇಗೆ....?

Update: 2017-11-07 10:40 GMT

ಶ್ವಾಸಕೋಶ ಕ್ಯಾನ್ಸರ್‌ನಿಂದ ನರಳುತ್ತಿರುವ ಹೆಚ್ಚಿನವರಿಗೆ ಉಸಿರಾಟದಂತಹ ಸರಳ ಕ್ರಿಯೆಯೂ ತುಂಬ ಪ್ರಯಾಸದ್ದಾಗುತ್ತದೆ. ಶ್ವಾಸಕೋಶ ಕ್ಯಾನ್ಸರ್ ಪುರುಷರು ಮತ್ತು ಮಹಿಳೆಯರಲ್ಲಿ ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುವ ಎರಡನೆಯ ಕ್ಯಾನ್ಸರ್ ರೂಪವಾಗಿದೆ. ಧೂಮ್ರಪಾನ ಶ್ವಾಸಕೋಶ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ, ಆದರೆ ಈ ರೋಗದ ಅಪಾಯವನ್ನು ಹೆಚ್ಚಿಸಬಲ್ಲ ಇತರ ಹಲವಾರು ಕಾರಣಗಳೂ ಇವೆ.

ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುವುದು ನಾವು ಭಾವಿಸಿರುವುದಕ್ಕಿಂತ ಸುಲಭವಾಗಿದೆ ಎನ್ನುವುದು ಗೊತ್ತೇ? ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳು, ಆರೋಗ್ಯಕರ ಆಹಾರ ಸೇವನೆ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ಪರಿಣಾಮಕಾರಿ ಯಾಗಿ ತಗ್ಗಿಸುವಲ್ಲಿ ನೆರವಾಗುತ್ತವೆ. ಈ ಬಗ್ಗೆ ಕೆಲವು ಟಿಪ್ಸ್‌ಗಳು ಇಲ್ಲಿವೆ.....

ಧೂಮ್ರಪಾನ ವರ್ಜಿಸಿ

ಶೇ.80ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಿಗೆ ಧೂಮ್ರಪಾನ ಕಾರಣವೆನ್ನುವುದನ್ನು ಅಧ್ಯಯನಗಳು ತೋರಿಸಿವೆ. ಧೂಮ್ರಪಾನವನ್ನು ವರ್ಜಿಸುವುದರಿಂದ ಭವಿಷ್ಯದಲ್ಲಿ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯದಿಂದ ದೂರವಾಗಲು ಸಾಧ್ಯ.

ನಿಮ್ಮ ಕುಟುಂಬದ ಇತಿಹಾಸ ಗೊತ್ತಿರಲಿ

ವಂಶವಾಹಿಗಳು ಶ್ವಾಸಕೋಶ ಕ್ಯಾನ್ಸರ್ ಮತ್ತು ಇತರ ಉಸಿರಾಟ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಹೀಗಾಗಿ ನಿಮ್ಮ ಕುಟುಂಬದಲ್ಲಿ ಈ ಹಿಂದೆ ಯಾರಿಗಾದರೂ ಶ್ವಾಸಕೋಶ ಕ್ಯಾನ್ಸರ್ ಇತ್ತೇ ಎನ್ನುವುದನ್ನು ತಿಳಿದುಕೊಳ್ಳಿ. ಅಂತಹ ನಿದರ್ಶನಗಳಿದ್ದರೆ ಸಂಭವನೀಯ ಅಪಾಯಗಳನ್ನು ತಪ್ಪಿಸಲು ಸೂಕ್ತ ಕ್ರಮಗಳಿಗಾಗಿ ವೈದ್ಯರ ಸಲಹೆ ಪಡೆದುಕೊಳ್ಳಿ.

ಪೂರಕ ವಿಟಾಮಿನ್‌ಗಳು ಬೇಡ

ಬಿ12 ಮತ್ತು ಬಿ6 ವಿಟಾಮಿನ್‌ಗಳನ್ನು ಪೂರಕವಾಗಿ ಸೇವಿಸುವದು ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಬಹಿರಂಗ ಗೊಂಡಿದೆ. ಇವುಗಳ ಸೇವನೆಯನ್ನು ನಿಲ್ಲಿಸುವುದು ಶ್ವಾಸಕೋಶ ಕ್ಯಾನ್ಸರ್‌ನ್ನು ತಡೆಯಲು ಉತ್ತಮ ಸಲಹೆಯಾಗಿದೆ.

ಸೇಬು ತಿನ್ನಿ

ಸೇಬುಹಣ್ಣು ಶ್ವಾಸಕೋಶಗಳ ಆರೋಗ್ಯಕ್ಕೆ ತುಂಬ ಲಾಭಕಾರಿಯಾಗಿದೆ. ಅದರಲ್ಲಿರುವ ಕ್ವರ್ಸೆಟಿನ್ ಎಂಬ ಫ್ಲಾವೊನಾಯ್ಡಾ ಶ್ವಾಸಕೋಶ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ.

ಕೆಂಪು ಈರುಳ್ಳಿ

ನೀವು ಕೆಂಪು ಈರುಳ್ಳಿಯನ್ನು ಪ್ರತಿಬಾರಿ ಕಚ್ಚಿದಾಗಲೂ ಅದು ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ಅಷ್ಟರ ಮಟ್ಟಿಗೆ ತಗ್ಗಿಸುತ್ತದೆ. ಸಾಮಾನ್ಯವಾಗಿ ದೊಡ್ಡ ಈರುಳ್ಳಿಯೊಂದರಲ್ಲಿ 60 ಮಿ.ಗ್ರಾಂ ಕ್ವರ್ಸೆಟಿನ್ ಇರುತ್ತದೆ. ಇದು ಶ್ವಾಸಕೋಶ ಕ್ಯಾನ್ಸರ್‌ನ ವಿರುದ್ಧ ಹೋರಾಡುವ ಉತ್ತಮ ಆ್ಯಂಟಿಆಕ್ಸಿಡಂಟ್ ಆಗಿದೆ.

ಪರಿಮಳಭರಿತ ಮೋಂಬತ್ತಿಗಳಿಂದ ದೂರವಿರಿ

ಮೋಂಬತ್ತಿಗಳನ್ನು ಬಳಸುವ ಸಂದರ್ಭ ಒದಗಿದರೆ ಪರಿಮಳಭರಿತದ ಬದಲು ಸಾದಾ ಮೋಂಬತ್ತಿಗಳನ್ನೇ ಹಚ್ಚಿ, ಇದಕ್ಕಾಗಿ ನಿಮ್ಮ ಶ್ವಾಸಕೋಶಗಳು ನಿಮಗೆ ಋಣಿಯಾಗಿರುತ್ತವೆ. ಪ್ಯಾರಾಫಿನ್ ಆಧರಿತ ಮೋಂಬತ್ತಿಗಳು ಮನೆಯ ಒಳಗೆ ವಾಯುಮಾಲಿನ್ಯವನ್ನು ಉಂಟು ಮಾಡುವ ಜೊತೆಗೆ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತವೆ.

ದೊಣ್ಣೆ ಮೆಣಸು ತಿನ್ನಿ

ದೊಣ್ಣೆ ಮೆಣಸು ಕ್ವರ್ಸೆಟಿನ್‌ನ ಉತ್ತಮ ಮೂಲವಾಗಿದ್ದು, ಹೇರಳ ವಿಟಾಮಿನ್ ಸಿ ಹೊಂದಿರುತ್ತದೆ. ದೊಣ್ಣೆ ಮೆಣಸು ತಿನ್ನುವುದರಿಂದ ಶ್ವಾಸಕೋಶ ಕ್ಯಾನ್ಸರ್‌ನ ಅಪಾಯವನ್ನು ತಡೆಯಬಹುದಾಗಿದೆ.

ಕಿತ್ತಳೆ ಹಣ್ಣುಗಳನ್ನು ಹೆಚ್ಚಾಗಿ ತಿನ್ನಿ

 ಕಿತ್ತಳೆ ಹಣ್ಣುಗಳು ಪುಷ್ಕಳ ವಿಟಾಮಿನ್ ಸಿ ಅನ್ನು ಒಳಗೊಂಡಿದ್ದು, ಇದು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಹೆಚ್ಚೇ ಕಿತ್ತಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಜೊತೆಗೆ ಅದು ವಯಸ್ಸಾಗುತ್ತಿದ್ದಂತೆ ಉಸಿರಾಟ ವನ್ನೂ ಸಲೀಸಾಗಿಸುತ್ತದೆ.

ಕಟ್ಟಿಗೆಯ ಹೊಗೆಯಿಂದ ದೂರವಿರಿ

 ಕಟ್ಟಿಗೆಯ ಒಲೆಯಿಂದ ಉಂಟಾಗುವ ಹೊಗೆಯು ಶ್ವಾಸಕೋಶ ಕ್ಯಾನ್ಸರ್‌ನ ಅಪಾಯ ವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಶೇ.38.7ರಷ್ಟು ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳಲ್ಲಿ ರೋಗಿಗಳು ಕಟ್ಟಿಗೆಯ ಹೊಗೆಯ ಹಾವಳಿಗೆ ಗುರಿಯಾಗಿರುತ್ತಾರೆ ಎನ್ನುವುದನ್ನು ಸಂಶೋಧನೆಗಳು ಬೆಟ್ಟು ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News