ಮಾನ್ಯತಾ ಟೆಕ್ ಪಾರ್ಕ್ ಬಳಿ ಸಂಚಾರದಟ್ಟಣೆ ಸಮಸ್ಯೆ ಬಗ್ಗೆ ಗೃಹ ಸಚಿವರಿಗೆ ಶಿವರಾಜ್ ಕುಮಾರ್ ದೂರು
ಬೆಂಗಳೂರು, ನ.7: ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಲನಚಿತ್ರ ನಟ ಡಾ.ಶಿವರಾಜ್ ಕುಮಾರ್, ಗೃಹ ಸಚಿವ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಚೇರಿಯಲ್ಲಿ ರಾಮಲಿಂಗಾರೆಡ್ಡಿಯನ್ನು ಭೇಟಿ ಮಾಡಿದ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್, ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಮೀತಿಮೀರಿದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವುದಿಂದ ಈ ಪ್ರದೇಶದಲ್ಲಿ ಸಂಚಾರದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಪ್ರತಿನಿತ್ಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ ಎಂದು ದೂರಿದರು.
ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ 1.50 ಲಕ್ಷಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಕೆಲಸಕ್ಕಾಗಿ ಬರುತ್ತಿದ್ದಾರೆ. ಇದರಿಂದಾಗಿ, ಸಂಚಾರ ದಟ್ಟಣೆ ಪ್ರಮಾಣ ಮಿತಿಮೀರಿದೆ. ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಶಿವರಾಜ್‌ಕುಮಾರ್ ದಂಪತಿ ರಾಮಲಿಂಗಾರೆಡ್ಡಿಗೆ ಮನವಿ ಮಾಡಿದರು.
ಸಚಿವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‌ಕುಮಾರ್, ಮಾನ್ಯತಾ ಟೆಕ್‌ಪಾರ್ಕ್ ಬಳಿ ಪ್ರತಿನಿತ್ಯ ಸಂಚಾರದಟ್ಟಣೆಯಿಂದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗೃಹ ಸಚಿವರ ಗಮನ ಸೆಳೆಯಲಾಗಿದೆ. ಗುರುವಾರ ಅವರು ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದರು.