ನ.18 ರಂದು ಮಕ್ಕಳ ಮೇಲಿನ ದೌರ್ಜನ್ಯ ಜಾಗೃತಿ ಮೂಡಿಸಲು ರಾಷ್ಟ್ರಮಟ್ಟದ ಸಮ್ಮೇಳನ
ಬೆಂಗಳೂರು, ನ.7: ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಕ್ಷಣಾ ಮತ್ತು ವಿಫೋರ್ಸ್ ಮೀಡಿಯಾ ಸಂಸ್ಥೆಗಳ ವತಿಯಿಂದ ನ.18 ರಂದು ನಗರದ ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂನಲ್ಲಿ ರಾಷ್ಟ್ರಮಟ್ಟದ ಸಮ್ಮೇಳನ ಮತ್ತು ಬೃಹತ್ ಮಾನವ ಧ್ವಜ ನಿರ್ಮಾಣ ಮಾಡಲಾಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವಿಫೋರ್ಸ್ ಮೀಡಿಯಾ ಸಂಸ್ಥೆಯ ಸಂಸ್ಥಾಪಕ ಶರವನ ಕುಮಾರ್, ಮಕ್ಕಳ ಮೇಲಿನ ದೈಹಿಕ, ಮಾನಸಿಕ ದೌರ್ಜನ್ಯ ಹಾಗೂ ಮಕ್ಕಳ ಸಾಗಾಣಿಕೆ, ತಾರತಮ್ಯ, ಮಕ್ಕಳಿಂದ ಅನಗತ್ಯ ಕೆಲಸ ಮಾಡಿಸುವುದನ್ನು ವಿರೋಧಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಮಕ್ಕಳ ಸುರಕ್ಷತೆ ಮತ್ತು ಉತ್ತಮ ಭವಿಷ್ಯ ಕಲ್ಪಿಸುವ ಸಲುವಾಗಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ಈ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳಿಂದ 50 ಸಾವಿರಕ್ಕೂ ಅಧಿಕ ಮಕ್ಕಳು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಮಾನವ ಧ್ವಜ ನಿರ್ಮಾಣ ಮಾಡಲಿದ್ದಾರೆ. ಇದರಲ್ಲಿ 12 ರಿಂದ 15 ವರ್ಷದ ಶಾಲಾ ಮಕ್ಕಳು ಪಾಲ್ಗೊಳ್ಳಲಿದ್ದು, ಧ್ವಜದ ಜೊತೆಗೆ ರಾಷ್ಟ್ರಗೀತೆ ಹಾಡಲಿದ್ದಾರೆ ಎಂದರು.
ಸಂಸ್ಥೆಯ ಸದಸ್ಯೆ ಉಷಾ ಮೋಹನ್ ಮಾತನಾಡಿ, ದಿನದಿಂದ ದಿನಕ್ಕೆ ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇದೆ. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ ಪ್ರಕಾರ 2016 ರಲ್ಲಿ 94 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ದೇಶದ ರಾಜಧಾನಿ ದಿಲ್ಲಿಯಲ್ಲಿಯೇ 1500 ಕ್ಕೂ ಅಧಿಕ ಚಿಕ್ಕ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗಿದೆ ಎಂದು ತಿಳಿಸಿದೆ ಎಂದು ಹೇಳಿದರು.
ಮಕ್ಕಳ ಹಕ್ಕುಗಳ ಕುರಿತು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ನಡೆಯುತ್ತಿರುವ ಈ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ವೆಬ್‌ಸೈಟ್ www.raksana.orgಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವ ಮೂಲಕ ಈ ಅಭಿಯಾನವನ್ನು ಬೆಂಬಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 98804 75321 ಅಥವಾ 88617 16695 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಟಿ ರಾಗಿಣಿ ದ್ವಿವೇದಿ, ಪಾಲಿಕೆ ಸದಸ್ಯ ನಾಗರಾಜು, ಕಾಂಗ್ರೆಸ್ ಮುಖಂಡ ರಿಝ್ವಾನ್, ಟೆಕ್ನಾಲಿಜಿಸ್ಟ್ ರವಿಂದರ್ ಪೌಲ್‌ಸಿಂಗ್, ವಿಫೋರ್ಸ್ ಮೀಡಿಯಾದ ಸಿಎಫ್‌ಒ ವಾಣಿ ಕುಮಾರಿ ಗೌಡ, ರಕ್ಷಣಾದ ಎಚ್.ಎಸ್.ಮಧು ಸೇರಿದಂತೆ ಹಲವರು ಉಪಸ್ಥಿತರಿದ್ದರು.