ಸುಪ್ರೀಂ ಕೋರ್ಟ್‌ನ ಆದೇಶ ಜಾರಿಗೆ ಆಗ್ರಹಿಸಿ ನ.10 ರಂದು ಪ್ರತಿಭಟನಾ ಸಮಾವೇಶ
ಬೆಂಗಳೂರು, ನ.7: ಭಡ್ತಿ ಮೀಸಲಾತಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿ ಅಹಿಂಸಾ ಸಂಘಟನೆ ವತಿಯಿಂದ ನ.10 ರಂದು ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ನಾಗರಾಜ್, ವಿವಿಧ ಇಲಾಖೆಗಳ, ನಿಗಮ ಮಂಡಳಿಗಳ ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗದ ನೌಕರರ ಹಿತ ರಕ್ಷಣಾ ವೇದಿಕೆ ವತಿಯಿಂದ ನ.10 ರಂದು ನಗರದ ಸ್ವಾತಂತ್ರ ಉದ್ಯಾನವನದಿಂದ ತ್ರಿಪುರವಾಸಿನಿ ಅರಮನೆವರೆಗೂ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಅನಂತರ ಸಮಾವೇಶ ನಡೆಯಲಿದೆ. ಈ ವೇಳೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯ ಹೈಕೋರ್ಟ್ ಸುಪ್ರೀಂಕೋರ್ಟ್‌ನ ಆದೇಶವನ್ನು ಪಾಲಿಸುವ ಸಂಬಂಧ ಕ್ರಮ ಕೈಗೊಂಡಿದ್ದು, ಈಗಾಗಲೇ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಿ 15 ದಿನಗಳ ಕಾಲಾವಕಾಶದೊಂದಿಗೆ ಆಕ್ಷಪಣೆ ಅರ್ಜಿ ಕರೆಯಬೇಕು ಎಂದು ತಿಳಿಸಿದೆ. ಆದರೆ, ರಾಜ್ಯ ಸರಕಾರ ಸುಪ್ರೀಂಕೋರ್ಟ್ ಆದೇಶ ಜಾರಿಗೆ ತಡೆಯೊಡ್ಡಲು ಮುಂದಾಗಿದೆ ಎಂದ ಅವರು, ಎಸ್ಸಿ-ಎಸ್ಟಿ ನೌಕರರಿಗೆ ಬಡ್ತಿ ಮೀಸಲಾತಿ ಮುಂದುವರಿಸಿದರೆ ಅಹಿಂಸಾ ವಲಯದ ನೌಕರರಿಗೆ ತೀವ್ರ ಅನ್ಯಾಯವಾಗಲಿದೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶ ಜಾರಿ ವಿರುದ್ಧ ಮೇಲ್ಮನವಿ ಸಲ್ಲಿಸಲು ನ.30 ರಂದು ಕೊನೆಯ ದಿನವಾಗಿದೆ. ಅನಂತರ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕಿದೆ. ಆದರೆ, ರಾಜ್ಯ ಸರಕಾರ ಭಡ್ತಿ ಮೀಸಲಾತಿಯನ್ನು ರಕ್ಷಿಸುವ ಸಲುವಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿ ರಾಜ್ಯಪಾಲರಿಗೆ ಕಳಿಸಲಾಗಿತ್ತು. ರಾಜ್ಯಪಾಲರು ಇದನ್ನು ತಿರಸ್ಕರಿಸಿದ್ದರಾದರೂ, ಇದೀಗ ಅದನ್ನು ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯಲು ಮುಂದಾಗಿದ್ದಾರೆ. ಈ ಮೂಲಕ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಲು ಮುಂದಾಗಿದ್ದಾರೆ ಎಂದರು.
ರಾಜ್ಯ ಸರಕಾರ ಒಂದು ವೇಳೆ ಸುಗ್ರೀವಾಜ್ಞೆ ಹೊರಡಿಸಿದರೆ 82 ವರ್ಗಗಳನ್ನು ಒಳಗೊಂಡ ಅಧಿಕಾರಿಗಳು, ನೌಕರರು ಮತ್ತೊಂದು ಬಾರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಬೇಕಾಗುತ್ತದೆ. ಆದುದರಿಂದ ರಾಜ್ಯ ಸರಕಾರ ಸರಿಯಾಗಿ ಯೋಚನೆ ಮಾಡಿ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಲ್.ರವಿ, ಲಕ್ಷ್ಮಿ ನಾರಾಯಣ, ದೇವರಾಜ್ ಪಾಟೀಲ್ ಉಪಸ್ಥಿತರಿದ್ದರು.