ಟಿಪ್ಪು ತನ್ನ ರಾಜ್ಯ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ, ದೇಶಕ್ಕಾಗಿ ಅಲ್ಲ: ಮುತಾಲಿಕ್
ಬೆಂಗಳೂರು, ನ.7: ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾನೆ ಎಂಬ ಕಾರಣಕ್ಕಾಗಿ ಆತನನ್ನು ಸ್ವಾತಂತ್ರ ಹೋರಾಟಗಾರರ ಸಾಲಿನಲ್ಲಿ ನೋಡುವುದು ಸರಿ ಅಲ್ಲ. ಆತ ಕೇವಲ ತನ್ನ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದಾನೆ ಹೊರತು ದೇಶಕ್ಕಾಗಿ ಅಲ್ಲ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಿದ್ದ ಹಿಂದು ವಿರೋಧಿ ಟಿಪ್ಪು ಸುಲ್ತಾನ್ ಎಂಬ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಬ್ಬ ಮುಸ್ಲಿಂ ಎಂದು ನಾವು ಟಿಪ್ಪು ಜಯಂತಿಯನ್ನು ವಿರೋಧ ಮಾಡುತ್ತಿಲ್ಲ. ದೇಶದಲ್ಲಿ ಹಿಂಸೆ, ಕ್ರೌರ್ಯದಿಂದ ಆಡಳಿತ ನಡೆಸಿದವರ ಆದರ್ಶ ನಮಗೆ ಬೇಡ ಎಂದು ತಿಳಿಸಿದರು.
ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, ಶೇ.90 ರಷ್ಟು ಇತಿಹಾಸಗಾರರು, ಸಾಹಿತಿಗಳು ಟಿಪ್ಪುವಿನ ಹಿಂಸಾತ್ಮಕ ಆಡಳಿತದ ಕುರಿತು ಸಾಕ್ಷಿಗಳ ಕುರಿತಾಗಿ ಬರೆದರು, ಲೆಕ್ಕಿಸದ ಸರಕಾರ ಕೇವಲ ಅಲ್ಪಜನರ ಮಾತಿಗೆ ಬೆಲೆ ನೀಡುತ್ತಿರುವುದು ವಿಪರ್ಯಾಸ. ಟಿಪ್ಪು ಏನು ಎಂಬುದು ಅವರು ಬರೆದ ಪತ್ರಗಳೇ ತಿಳಿಸುತ್ತಿವೆ. ಆದರೆ, ನಿಜವನ್ನು ಮರೆಮಾಚಿ ಸುಳ್ಳಿನ ಇತಿಹಾಸವನ್ನು ರಚಿಸುವ ಮೂಲಕ ರಾಜಕೀಯ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.