×
Ad

ಪುಸ್ತಕೋದ್ಯಮ ಬೆಳೆಸುವ ಪ್ರಕಾಶನ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ: ಎಸ್.ಜಿ.ಸಿದ್ದರಾಮಯ್ಯ

Update: 2017-11-07 20:03 IST

ಬೆಂಗಳೂರು, ನ.7: ಪುಸ್ತಕೋದ್ಯಮವನ್ನು ಉದ್ಯಮವಾಗಿ ನೋಡದೆ, ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಜವಾಬ್ದಾರಿ ಎಂದು ಭಾವಿಸಿ ಗುಣಾತ್ಮಕ ಪ್ರಕಟನೆ, ಗುಣಾತ್ಮಕ ವಿದ್ವಾಂಸರನ್ನು ಬೆಳೆಸುವ ಪ್ರಕಾಶನ ಸಂಸ್ಥೆಗಳನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಿಸಿದ್ದಾರೆ.

ಮಂಗಳವಾರ ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕೋದ್ಯಮ-ಇತ್ತೀಚಿನ ಬೆಳವಣಿಗೆಗಳು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಪ್ರಕಾಶಕರಿಗೆ ಸ್ಪರ್ಧೆಯನ್ನೊಡ್ಡಬೇಕು ಎಂಬ ಉದ್ದೇಶದಿಂದ ಪುಸ್ತಕ ಪ್ರಾಧಿಕಾರ ಪುಸ್ತಕ ಪ್ರಕಟನೆ ಮಾಡಬಾರದು ಎಂದು ಸಲಹೆ ನೀಡಿದರು.

ಪುಸ್ತಕ ಪ್ರಾಧಿಕಾರ ಪ್ರಕಾಶಕರಿಗೆ ಪೂರಕವಾದ ರೀತಿಯಲ್ಲಿ ಕೆಲಸ ಮಾಡಬೇಕು. ಹೆಚ್ಚು ಹೆಚ್ಚು ಕ್ಷೇತ್ರ ಅಧ್ಯಯನ, ಸಂಶೋಧನೆ ಕೃತಿಗಳನ್ನು ಪ್ರಕಟಿಸುವ ಕುರಿತು ಚಿಂತನೆ ಮಾಡಬೇಕು ಎಂದ ಅವರು, ಒಂದು ಸಮುದಾಯ, ಒಂದು ವಿಭಿನ್ನ ಸಂಸ್ಕೃತಿ ಕುರಿತು ಪ್ರಕಾಶನ ಸಂಸ್ಥೆಗಳೂ ಅಧ್ಯಯನ ನಡೆಸಿ ಪುಸ್ತಕ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಅಂತಹುದರಲ್ಲಿ ಅತ್ಯುತ್ತಮವಾದ ಪುಸ್ತಕಗಳನ್ನು ಪ್ರಾಧಿಕಾರ ಪ್ರಕಟಿಸಲು ಮುಂದಾಗಬೇಕು ಎಂದು ಹೇಳಿದರು.

ಗ್ರಂಥಾಲಯಗಳ ಕರವನ್ನು ನೇರವಾಗಿ ಗ್ರಂಥಾಲಯ ಖಾತೆಗೆ ಜಮಾ ಮಾಡಬೇಕೆಂದು ಕಾನೂನು ರೂಪಿಸಬೇಕು. ಪುಸ್ತಕ ಸಂಸ್ಕೃತಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಪುಸ್ತಕಗಳು ಜನರ ಮಧ್ಯೆ ಇರಬೇಕು. ಪುಸ್ತಕ ಖರೀದಿಸಲು ಸರಕಾರಗಳಿಗೆ ಬರ ಬರಬಾರದು. ಪುಸ್ತಕ ಖರೀದಿಯ ಬೆಲೆ ಅಂದಿನಿಂದ ಇಂದಿನವರೆಗೆ ಸ್ಥಿರವಾಗಿದೆ. ಮರುವೌಲ್ಯವನ್ನೊಳಗೊಂಡಂತೆ ಪುಸ್ತಕ ಖರೀದಿಯ ಬೆಲೆ ನಿರ್ಧರಿಸಬೇಕು. ಬೆಲೆ ಬದಲಾವಣೆ ಬಗ್ಗೆ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಆಲೋಚಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶಕುಮಾರ್.ಎಸ್ ಹೊಸಮನಿ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಗ್ರಂಥಾಲಯಗಳಿಗಾಗಿ ಕೋಟ್ಯಂತರ ರೂ.ಗಳಷ್ಟು ಹಣವನ್ನು ಮೀಸಲಿಡಲಾಗುತ್ತಿದೆ. ಆದರೆ, ಕೆಲವು ರಾಜ್ಯಗಳು ಕಳೆದ 2-3 ವರ್ಷಗಳಿಂದ ಒಂದು ಪುಸ್ತಕವೂ ಖರೀದಿ ಮಾಡಿಲ್ಲ. ಈ ವೇಳೆ ರಾಜ್ಯ ಸರಕಾರ ಸಾವಿರಾರು ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ 2017ರ ಮಾರ್ಚ್ ಅಂತ್ಯಕ್ಕೆ 252 ಕೋಟಿಗಿಂತಲೂ ಅಧಿಕ ತೆರಿಗೆ ಬರಬೇಕಿದೆ. ಗ್ರಂಥಾಲಯ ಇಲಾಖೆಗೆ ಸಕಾಲಕ್ಕೆ ತೆರಿಗೆ ಬಂದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಹೀಗಾಗಿ, ಕರ ವಸೂಲಿ ಹಾಗೂ ನಿರ್ದಿಷ್ಟ ಬೆಲೆ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಸಗಟು ಪುಸ್ತಕ ಖರೀದಿಗೆ ಸುಮಾರು 200 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದರು.

ಅಭಿನವ ಪ್ರಕಾಶನ ಸಂಸ್ಥೆಯ ಪ್ರಕಾಶಕ ರವಿ ಮಾತನಾಡಿ, ಗ್ರಂಥಾಲಯ ಇಲಾಖೆಯು ಅವೈಜ್ಞಾನಿಕ ರೀತಿಯಲ್ಲಿ ಪುಸ್ತಕ ಖರೀದಿ ಮಾಡುತ್ತಿದ್ದೆ. ಪುಸ್ತಕೋದ್ಯಮದ ಬಗ್ಗೆ ಯಾವುದೇ ನೀತಿಯನ್ನು ಇದುವರೆಗೂ ಸರಕಾರ ರೂಪಿಸಿಲ್ಲ ಎಂದ ಅವರು, ಬೇರೆ ಜಿಲ್ಲೆಗಳಲ್ಲಿ ಪುಸ್ತಕ ಪ್ರದರ್ಶನ ಮಾರಾಟ ಮಾಡಲು ಪ್ರಕಾಶಕರಿಗೆ ಹೆಚ್ಚು ಅವಕಾಶಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಆಡಳಿತಾಧಿಕಾರಿ ಸೌಭಾಗ್ಯ, ಕೇಂದ್ರೀಯ ತೆರಿಗೆ ಇಲಾಖೆ ಆಯುಕ್ತ ಜಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಪುಸ್ತಕ ನೀತಿಗಾಗಿ ಸರಕಾರ ಶಾಸನಬದ್ಧ ಸಮಿತಿ ರಚಿಸಬೇಕು ಎಂದು ಪ್ರಕಾಶಕರು ಸರಕಾರದ ಮೇಲೆ ಒತ್ತಡ ಹೇರಬೇಕು. ಪುಸ್ತಕೋದ್ಯಮ ಉದ್ಯಮವಾಗಿ ರೂಪಗೊಂಡ ನಂತರ ಹಲವು ಬದಲಾವಣೆಗಳು ನಡೆದಿವೆ. ಅದೇ ರೀತಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ಹೀಗಾಗಿ, ಇದನ್ನು ಪರಿಹಾರ ಮಾಡಿಕೊಳ್ಳಲು ಒಂದು ಪುಸ್ತಕ ನೀತಿ ಬೇಕಿದೆ.
-ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News