×
Ad

ಸದನ ಸಮಿತಿಯ ಸಭೆಗಳು ಅಂತ್ಯ: ವರದಿ ಮಂಡನೆಗೆ ಸಿದ್ಧತೆ

Update: 2017-11-07 20:15 IST

ಬೆಂಗಳೂರು, ನ.7: ಇಂಧನ ಇಲಾಖೆಯಲ್ಲಿ ಕಳೆದ 10 ವರ್ಷಗಳಿಂದ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸದನ ಸಮಿತಿಯ ಅಂತಿಮ ಸಭೆ ಮಂಗಳವಾರ ವಿಧಾನಸೌಧದಲ್ಲಿ ನಡೆಯಿತು.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸದನ ಸಮಿತಿ ತನ್ನ ವರದಿಯನ್ನು ಮಂಡಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸಂಬಂಧ ಸಮಿತಿಯ ಸದಸ್ಯರ ಅಭಿಪ್ರಾಯವನ್ನು ಕ್ರೋಡೀಕರಿಸಲು ಅಂತಿಮ ಸಭೆಯನ್ನು ಕರೆಯಲಾಗಿತ್ತು.

ಈ ಸಮಿತಿಯಲ್ಲಿ ಕಾಂಗ್ರೆಸ್ ಶಾಸಕರಾದ ಕೆ.ಎನ್.ರಾಜಣ್ಣ, ಶಿವಾನಂದ ಪಾಟೀಲ್, ಪಿ.ಎಂ.ನರೇಂದ್ರಸ್ವಾಮಿ, ಬಿಜೆಪಿ ಶಾಸಕರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರಹೆಗಡೆ ಕಾಗೇರಿ, ಜೆಡಿಎಸ್ ಶಾಸಕರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡ ಸದಸ್ಯರಾಗಿದ್ದಾರೆ. ಆದರೆ, ಇಂದಿನ ಸಭೆಯಲ್ಲಿ ರಾಜಣ್ಣ, ಶಿವಾನಂದಪಾಟೀಲ್, ನರೇಂದ್ರಸ್ವಾಮಿ ಹೊರತುಪಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಗೈರು ಹಾಜರಾಗಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂಧನ ಇಲಾಖೆಯ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಲಾಗಿರುವ ಸದನ ಸಮಿತಿಯ ಸಭೆಗಳನ್ನು ಪೂರ್ಣಗೊಳಿಸಲಾಗಿದೆ. ಸಭೆಯಲ್ಲಿ ಸಮಿತಿಯ ಸದಸ್ಯರಾಗಿರುವ ಕೆ.ಎನ್.ರಾಜಣ್ಣ, ಶಿವಾನಂದಪಾಟೀಲ್, ಪಿ.ಎಂ.ನರೇಂದ್ರಸ್ವಾಮಿ ಮಾತ್ರ ಭಾಗವಹಿಸಿದ್ದರು ಎಂದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅನಾರೋಗ್ಯದ ಕಾರಣದಿಂದ ಹಿಂದಿನ ಸಭೆಗೆ ಬಂದಿರಲಿಲ್ಲ. ಇಂದು ಪತ್ರ ಕಳುಹಿಸಿದ್ದಾರೆ. ಅದರಲ್ಲಿ ಸ್ಪಷ್ಟೀಕರಣ, ವಿವರಣೆ ಹಾಗೂ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪತ್ರದಲ್ಲಿ ಕುಮಾರಸ್ವಾಮಿ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸಹಿ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಸದಸ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಎಲ್ಲ ಸದಸ್ಯರ ಅಭಿಪ್ರಾಯವನ್ನು ತೆಗೆದುಕೊಂಡಿದ್ದೇವೆ. ಕುಮಾರಸ್ವಾಮಿ ರಾಜಕಾರಣಕ್ಕಾಗಿ ಏನಾದರು ಹೇಳಿಕೊಳ್ಳಲಿ. ಆದರೆ, ಇಂದು ಪತ್ರ ಕಳುಹಿಸಿ ಅಭಿಪ್ರಾಯ ತಿಳಿಸಿದ್ದಾರೆ. ಕುಮಾರಸ್ವಾಮಿಗೆ ಪ್ರಭುತ್ವವಿದೆ. ದೂರದೃಷ್ಟಿಯಿದೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News