×
Ad

ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ತುರ್ತು ನೋಟಿಸ್

Update: 2017-11-07 21:34 IST

ಬೆಂಗಳೂರು, ನ.7: ಬೆಂಗಳೂರು ನಗರದಲ್ಲಿ ಪರಿಣಾಮಕಾರಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ವಿಫಲವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಹೈಕೊರ್ಟ್ ಮಂಗಳವಾರ ತುರ್ತು ನೋಟಿಸ್ ಜಾರಿ ಮಾಡಿದೆ.

ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ. ಇದರಿಂದ ಅಪಘಾತಗಳು ಏರ್ಪಟ್ಟು ವಾಹನ ಸವಾರರು ಸಾವನ್ನಪ್ಪಿದ್ದಾರೆ. ಇದರಿಂದ ಕೂಡಲೇ ಪರಿಣಾಮಕಾರಿಯಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು. ಸಂಚಾರ ಸೂಚನಾ ಫಲಕಗಳು, ವೇಗ ನಿಯಂತ್ರಕಗಳು ಮತ್ತು ಇಲ್ಯೂಮಿನಿಟೇರ್‌ಗಳನ್ನು ಅಳವಡಿಸಲು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಕೋರಿ ಡೌವ್ ಡ್ರೈವ್ ವಿಔಟ್ ಬಾರ್ಡರ್ಸ್‌ ಫೌಂಡೇಶನ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಮಂಗಳವಾರ ಈ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಬಿಬಿಎಂಪಿ ಆಯಕ್ತರಿಗೆ ತುರ್ತು ನೋಟಿಸ್ ಜಾರಿ ಮಾಡಿತು.

ಬೆಂಗಳೂರು ನಗರದಲ್ಲಿ 41.86 ಲಕ್ಷ ದ್ವಿಚಕ್ರ ವಾಹನಗಳು ಮತ್ತು 11.8 ಲಕ್ಷ ಕಾರುಗಳು ಮತ್ತು 5.91 ಲಕ್ಷ ಸಾರಿಗೆ ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿ ಗುಂಡಿಗಳು ಬಿದ್ದಿವೆ. ಈ ರಸ್ತೆ ಗುಂಡಿಗಳಿಂದ ವಾಹನಗಳ ಅಪಘಾತಕ್ಕೀಡಾಗಿ ಈಗಾಗಲೇ ನಾಲ್ವರು ಸಾವನ್ನಪ್ಪಿದ್ದು, ಹಲವು ಜನ ಗಂಭೀರ ಗಾಯಗಳಿಗೆ ತುತ್ತಾಗಿದ್ದಾರೆ.

ನಗರದಲ್ಲಿ ಒಟ್ಟು 15,935 ರಸ್ತೆ ಗುಂಡಿಗಳಿಗೆ ಎಂದು ಬಿಬಿಎಂಪಿ ಅಂದಾಜಿಸಿದೆ. ಇನ್ನು ಎಲ್ಲ ರಸ್ತೆ ಗುಂಡಿಗಳನ್ನು 15 ದಿನಗಳಲ್ಲಿ ಮುಚ್ಚುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.10ರಂದೇ ಆದೇಶಿಸಿದ್ದರು. ಆದರೆ, ಬಿಬಿಂಪಿಯು ಈವರೆಗೂ ಸಮರ್ಪಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News