×
Ad

ಪತ್ರಿಕಾ ವರದಿಗಳನ್ನು ಪರಿಗಣಿಸಬಾರದು: ಕೆಪಿಎಸ್ಸಿ ಪರ ವಕೀಲರಿಂದ ಹೈಕೋರ್ಟ್‌ಗೆ ಮನವಿ

Update: 2017-11-07 21:41 IST

ಬೆಂಗಳೂರು, ನ.7: ಪತ್ರಿಕೆಗಳು ಸಿಐಡಿ ವರದಿ ಹೊರತುಪಡಿಸಿ ಬೇರೆ ಯಾವುದೇ ತನಿಖಾ ಅಂಶಗಳನ್ನು ಪ್ರಸ್ತಾಪಿಸಿಲ್ಲ. ಹೀಗಾಗಿ, ಕೋರ್ಟ್‌ಗಳು ಇಂತಹ ವರದಿಗಳನ್ನು ಪರಿಗಣಿಸಬಾರದು ಎಂದು ಕೆಪಿಎಸ್ಸಿ ಪರ ವಕೀಲ ಪಿ.ಎಸ್.ರಾಜಗೋಪಾಲ್ ಅವರು ಹೈಕೋರ್ಟ್‌ಗೆ ಮನವಿ ಮಾಡಿದರು.

2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕೆಪಿಎಸ್ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ಮುಂದುವರಿಸಿತು.

ಸಂದರ್ಶನದಲ್ಲಿ ನನಗೆ ಕಡಿಮೆ ಅಂಕ ಬಂದಿದೆ ಎಂಬ ಅರ್ಜಿದಾರ ಡಾ.ಮೈತ್ರಿ ಅವರ ದೂರನ್ನು ಹೊರತುಪಡಿಸಿ ಬೇರೆ ಯಾರೂ ಈ ಕುರಿತಂತೆ ಕೆಪಿಎಸ್ಸಿಗೆ ಆಕ್ಷೇಪಣೆ ಅಥವಾ ದೂರು ನೀಡಿಲ್ಲ ಎಂದು ರಾಜಗೋಪಾಲ್ ಅವರು ಪೀಠಕ್ಕೆ ತಿಳಿಸಿದರು.

ಲಿಖಿತ ಪರೀಕ್ಷೆಯಲ್ಲಿ ವ್ಯಕ್ತಿಯ ಜ್ಞಾನ ಪರೀಕ್ಷೆ ನಡೆಯುತ್ತದೆ. ಸಂದರ್ಶನದಲ್ಲಿ ವ್ಯಕ್ತಿಯ ಸಂಪೂರ್ಣ ಪರೀಕ್ಷೆ ನಡೆಯುತ್ತದೆ. ಇವರೆಡೂ ವಿಭಿನ್ನ. ಇವುಗಳ ಅಂಕಗಳನ್ನು ಒಂದಕ್ಕೊಂದು ಹೇಗೆ ತಾಳೆ ಮಾಡಿ ನೋಡುತ್ತೀರಿ ಎಂದು ಪ್ರಶ್ನಿಸಿದ ರಾಜಗೋಪಾಲ್, ಈ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತಲೂ ವೈಯಕ್ತಿಕ ಹಿತಾಸಕ್ತಿಯೇ ಅಡಗಿದೆ ಎಂದು ಆಕ್ಷೇಪಿಸಿದರು.

ಈ ಪಿಐಎಲ್ ವಿಚಾರಣೆಗೆ ಯೋಗ್ಯವಲ್ಲ ಎಂದು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಸುದೀರ್ಘವಾಗಿ ನ್ಯಾಯಪೀಠಕ್ಕೆ ವಿವರಿಸಿದರು. ವಿಚಾರಣೆಯನ್ನು ನ.8ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News