ಮೋದಿಯ ನೋಟ್ ಬ್ಯಾನ್: ಬದಲಾದದ್ದು ಏನು?

Update: 2017-11-08 05:41 GMT

ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ, ನಕಲಿ ಕರೆನ್ಸಿ ಇವೆಲ್ಲವನ್ನು ಒಂದೇ ಏಟಿನಲ್ಲಿ ತೊಲಗಿಸುತ್ತೇನೆ ಎಂದು ಹೇಳುತ್ತಲೇ ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ಮೋದಿ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ನೋಟು ಅಮಾನ್ಯೀಕರಣವನ್ನು ಘೋಷಿಸಿದ್ದರು.

 ಆದರೆ ಈ ಕ್ರಮದ ಅಲ್ಪಕಾಲೀನ ವೆಚ್ಚಗಳು ಅದರ ಲಾಭಕ್ಕಿಂತ ಹೆಚ್ಚು ಭಾರವಾಗಿವೆ. ನಗದು ಮತ್ತು ನಕಲಿ ರಶೀದಿಗಳ ಮೂಲಕ ಚಲಾವಣೆ ಮಾಡಲಾಗುವ ಕಪ್ಪುಹಣ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡಲು ಇದು ಅಗತ್ಯ ಕ್ರಮ ಎಂದು ತಿಳಿಸಿದ್ದ ಮೋದಿ ಚಲಾವಣೆಯಲ್ಲಿದ್ದ 86 ಶೇಕಡಾ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಅವರ ಈ ನಡೆ ಅಷ್ಟೊಂದು ಯಶಸ್ವಿಯಾಗಲಿಲ್ಲ ಆದರೆ ಏಷ್ಯಾದ ಮೂರನೇ ಅತೀ ದೊಡ್ಡ ಆರ್ಥಿಕತೆಯ ಮೇಲೆ ಇದರ ಪರಿಣಾಮ ಮಾತ್ರ ಗಂಭೀರವಾಗಿಯೇ ಬಿತ್ತು.

2019ರಲ್ಲಿ ಮತ್ತೆ ಚುನಾವಣೆಯನ್ನು ಎದುರಿಸಬೇಕಾಗಿರುವ ಮೋದಿಗೆ ಬಹುದೊಡ್ಡ ಆಘಾತ ನೀಡಿರುವುದೆಂದರೆ ಸದ್ಯ ದೇಶದ ಅಭಿವೃದ್ದಿಯು ಹಿಂದಿನ ಸರಕಾರದ ಸಮಯದಲ್ಲಿದ್ದ ಮಟ್ಟಕ್ಕೆ ನಿಧಾನಗೊಂಡಿದೆ ಎಂಬುದು. ಯುಪಿಎ ಸರಕಾರ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಮತ್ತು ಯೋಜನೆ ವೈಫಲ್ಯ ಅನುಭವಿಸಿದೆ ಎಂಬ ಟೀಕೆಗಳನ್ನು ಎದುರಿಸಿದ್ದು ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಲು ಸಾಧ್ಯವಾಗಿತ್ತು.
‘‘ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ತೊಲಗಿಸುವ ಪ್ರಕ್ರಿಯೆಯು ನೋಟು ಅಮಾನ್ಯೀಕರಣದಿಂದ ಆರಂಭ ಅಥವಾ ಕೊನೆಯಾಗುವುದಿಲ್ಲ’’ ಎಂದು ನೊಮುರ ಹೋಲ್ಡಿಂಗ್ಸ್ ಇಂಕ್ ನಲ್ಲಿ ಮುಖ್ಯ ಭಾರತೀಯ ಆರ್ಥಶಾಸ್ತ್ರಜ್ಞೆಯಾಗಿರುವ ಸೋನಲ್ ವರ್ಮಾ ಹೇಳುತ್ತಾರೆ. ‘‘ಕಪ್ಪುಹಣವನ್ನು ಕೇವಲ ನಗದು ರೂಪದಲ್ಲಿ ಮಾತ್ರವಲ್ಲ ಚಿನ್ನ ಮತ್ತು ಭೂಮಿಯ ರೂಪದಲ್ಲೂ ಶೇಖರಿಸಿಡಲಾಗಿದೆ’’ ಎಂದು ಅವರು ಸೇರಿಸುತ್ತಾರೆ.
ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಡಿಜಿಟೈಸೇಶನ್ ಮುಂತಾದ ವಿಷಯಗಳನ್ನೂ ಮುಂದಿನ ದಿನಗಳಲ್ಲಿ ಮೋದಿ ತಮ್ಮ ಉದ್ದೇಶಗಳಲ್ಲಿ ಸೇರಿಸಿಕೊಂಡರು. ಅದು ಯಾವ ರೀತಿ ಕಾರ್ುನಿರ್ವಹಿಸಿದೆ ಎಂದು ತಿಳಿದುಕೊಳ್ಳೋಣ.

‘‘ಗಡಿಯಾಚೆಗಿನ ಶತ್ರುಗಳು ಕಾರ್ಯಾಚರಣೆ ನಡೆಸಲು ಹೆಚ್ಚಿನ ವೌಲ್ಯದ 500 ಮತ್ತು 1,000 ನೋಟುಗಳನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ಈ ನೋಟುಗಳನ್ನು ನಿಷೇಧಿಸು ವುದು ಅತ್ಯಗತ್ಯವಾಗಿತ್ತು’’ ಎಂದು ಮೋದಿ ಹೇಳಿದ್ದರು. ಕಳೆದ 12 ತಿಂಗಳಲ್ಲಿ ಹೆಚ್ಚು ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದರೂ ಕಳೆದ ವರ್ಷದ ಶೇ. 0.07ಗೆ ಹೋಲಿಸಿದರೆ ಈ ವರ್ಷ ಶೇ. 0.08 ಅಷ್ಟೇ ಹೆಚ್ಚಾಗಿದೆ. ಅದಕ್ಕೂ ಮಿಗಿಲಾಗಿ ತಮ್ಮ ಹೊಸ ನೋಟುಗಳನ್ನು ನಕಲಿ ಮಾಡುವುದನ್ನು ತಪ್ಪಿಸುವುದು ರಿಸರ್ವ್ ಬ್ಯಾಂಕ್‌ನಿಂದಲೂ ಸಾಧ್ಯವಾಗಿಲ್ಲ. ನವೆಂಬರ್ 8, 2016ರಂದು ಹೊರತರಲಾದ ರೂ. 2,000 ನೋಟುಗಳ ನಕಲಿ ರೂಪ ಅದಾಗಲೇ ಮಾರುಕಟ್ಟೆ ಪ್ರವೇಶಿಸಿದೆ.

ಕಪ್ಪುಹಣ
ರೂ. 15.44 ಲಕ್ಷ ಕೋಟಿ ಅಮಾನ್ಯಗೊಂಡ ನೋಟುಗಳಲ್ಲಿ ಹೆಚ್ಚಿನ ಹಣ ಬ್ಯಾಂಕ್‌ಗಳಲ್ಲಿ ಜಮೆಯಾಗುವುದಿಲ್ಲ ಎಂದು ಕಳೆದ ವರ್ಷ ನೋಟು ಅಮಾನ್ಯ ಘೋಷಿಸಿದ ತಕ್ಷಣ ಸರಕಾರಿ ಪ್ರತಿನಿಧಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ತಿಳಿಸಿದ್ದರು. ಭಾರತೀಯರು ಈ ಹಣವನ್ನು ನಾಶ ಮಾಡುತ್ತಾರೆಯೇ ಹೊರತು ಅಪಾಯಕ್ಕೆ ಸಿಲುಕಲು ಬಯಸುವುದಿಲ್ಲ ಎಂಬುದು ಈ ಮಾತಿನ ಅರ್ಥವಾಗಿತ್ತು. ಆದರೆ ಶೇ. 99 ನಿಷೇಧಿತ ನೋಟುಗಳು ಮರಳಿ ಚಲಾವಣೆಗೆ ಬಂದಿವೆ.
‘‘ಹಿಂಪಡೆಯಲಾದ ಬಹುತೇಕ ಎಲ್ಲಾ ನಗದು ಕೂಡಾ ಬ್ಯಾಂಕ್‌ಗಳಲ್ಲಿ ಜಮೆಯಾಗಿರುವ ಕಾರಣ ಕಪ್ಪುಹಣವನ್ನು ತೊಲಗಿಸುವಲ್ಲಿ ನೋಟು ಅಮಾನ್ಯೀಕರಣವು ಯಾವ ಮಟ್ಟಕ್ಕೆ ಯಶಸ್ವಿಯಾಗಿದೆ ಎಂದು ಪ್ರಶ್ನಿಸಬೇಕಿದೆ’’ ಎಂದು ಎಬಿಎನ್ ಆಮ್ರಿ ಬ್ಯಾಂಕ್‌ನ ಹಿರಿಯ ಆರ್ಥಿಕತಜ್ಞರಾಗಿರುವ ಅರ್ಜೆ್ ವಾನ ಟಿಕುಝೆನ್ ನುಡಿಯುತ್ತಾರೆ.

ತೆರಿಗೆ ವಂಚನೆ
ತೆರಿಗೆದಾರರ ಸಂಖ್ಯೆಯನ್ನು ಹೆಚ್ಚಿಸಿರುವುದೇ ಬಹುಶಃ ವಿಶ್ಲೇಷಕರಿಗೆ ನೋಟು ಅಮಾನ್ಯೀಕರಣದ ಬಗ್ಗೆ ಇರುವ ಆಶಾವಾದ. ನೋಟು ರದ್ದತಿಯ ನಂತರ ಬ್ಯಾಂಕ್‌ಗಳಿಗೆ ಹರಿದು ಬಂದಿರುವ ಹಣದ ಮೂಲಗಳನ್ನು ಪತ್ತೆ ಮಾಡಿ ತೆರಿಗೆ ವಂಚಕರನ್ನು ಶಿಕ್ಷಿಸುವುದಾಗಿ ಸರಕಾರ ಹೇಳಿಕೊಂಡಿದೆ. ಕೇವಲ ಶೇ. ಐದು ಮಂದಿ ತೆರಿಗೆ ಪಾವತಿಸುವ ದೇಶದಲ್ಲಿ ತೆರಿಗೆಯ ವ್ಯಾಪ್ತಿಯನ್ನು ಹೆಚ್ಚಿಸುವುದು ಆರ್ಥಿಕವಾಗಿ ಸಾರ್ವಜನಿಕರ ಮೇಲಿರುವ ಹೊರೆಯನ್ನು ಕಡಿಮೆ ಮಾಡಲಿದೆ.
‘‘ಭ್ರಷ್ಟಾಚಾರವನ್ನು ಹತ್ತಿಕ್ಕಲು ಸರಕಾರ ಏನು ಮಾಡಬಹುದು ಮತ್ತು ಏನು ಮಾಡುತ್ತದೆ ಎಂಬ ಸಾರ್ವಜನಿಕರ ನಿಲುವನ್ನು ಅದು ಬದಲಿಸಿತು ಎಂದು ಹೇಳುತ್ತಾರೆ’’ ಯುರೇಶಿಯಾ ಗ್ರೂಪ್‌ನಲ್ಲಿ ಏಷ್ಯಾದ ಹಿರಿಯ ವಿಶ್ಲೇಷಕರಾಗಿರುವ ಶೈಲೇಶ್ ಕುಮಾರ್. ‘‘ಒಂದಿಲ್ಲೊಂದು ರೀತಿಯಲ್ಲಿ ಮೋದಿ ಇದರ ಅನುಕೂಲವನ್ನು ಪಡೆದರು. ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮಾತುಗಳನ್ನು ಆಡಿದ್ದು ಭಾರತದಲ್ಲಿ ಅದೊಂದು ದೊಡ್ಡ ಸಮಸ್ಯೆಯೇ ಎಂದು ನಂಬಲಾಗಿೆ’’ ಎಂದು ಶೈಲೇಶ್ ಹೇಳುತ್ತಾರೆ.
ಈ ಜೂಜು ಫಲನೀಡಿದ್ದು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಉತ್ತರ ಪ್ರದೇಶದಲ್ಲಿ. ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಕೇಸರಿಪೆ ಅಭೂತಪೂರ್ವ ಜಯಭೇರಿ ಬಾರಿಸಿತು.
ಆದರೆ ನಂತರ ಅಭಿವೃದ್ಧಿ ಕುಂಠಿತವಾಗುತ್ತಲೇ ಸಾಗಿದ್ದು ಮುಂದಿನ ತಿಂಗಳು ಚುನಾವಣೆಗೆ ಸಜ್ಜಾಗಿರುವ ಮೋದಿಯ ಸ್ವಸ್ಥಾನ ಗುಜರಾತ್‌ನಲ್ಲಿ ಪಕ್ಷದ ವಿರುದ್ಧ ಅಸಮಾಧಾನದ ಅಲೆಯೆದ್ದಿದೆ. ಚುನಾವಣಾ ಸಮೀಕ್ಷೆಗಳು ಈಗಲೂ ಬಿಜೆಪಿಯೇ ಮುಂದಿನ ಸರಕಾರ ರಚಿಸಲಿದೆ ಎಂದು ಹೇಳುತ್ತಿರುವುದರ ಮಧ್ಯೆಯೇ ನೋಟು ಅಮಾನ್ಯೀಕರಣದ ದಿನವಾದ ನವೆಂಬರ್ 8ನ್ನು ಪ್ರತೀ ವರ್ಷ ಕಪ್ಪುಹಣ ವಿರೋಧಿ ದಿನವೆಂದು ಆಚರಿಸುವುದಾಗಿ ಪಕ್ಷ ಹೇಳಿಕೊಂಡಿದೆ.
‘‘ನೋಟು ರದ್ದತಿಯ ಅಲ್ಪಕಾಲೀನ ನೋವುಗಳು ಅದರ ದೀರ್ಘಕಾಲೀನ ಲಾಭಗಳಿಗಿಂತ ಹೆಚ್ಚು ಕಾಡುವಂಥದ್ದು ಮತ್ತು ಕಣ್ಣಿಗೆ ಕಾಣುವಂಥದ್ದು ಎಂಬುದು ಸ್ಪಷ್ಟ. ಆದರೆ ಅದರಿಂದ ಏನೂ ಲಾಭವಾಗಿಲ್ಲ ಎಂದಲ್ಲ’’ ಎನ್ನುತ್ತಾರೆ ಡಿಕುಝೆನ್.

ಡಿಜಿಟೈಸೇಶನ್
ಪ್ರಧಾನಿ ಮೋದಿಯ ಈ ನಡೆಯಿಂದ ಡಿಜಿಟಲ್ ಹಣಪಾವತಿಯ ಸೌಲಭ್ಯ ಒದಗಿಸುವ ಕಂಪೆನಿಗಳು ಬಹಳ ಲಾಭಪಡೆದುಕೊಂಡವು. ಅದರಲ್ಲೂ ಚೀನಾದ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಸಂಸ್ಥೆಯ ಪೇಟಿಎಂನ ವ್ಯವಹಾರ ಕಳೆದ ವರ್ಷ ನವೆಂಬರ್‌ನಿಂದ ಹಲವು ಪಟ್ಟು ಏರಿಕೆ ಕಂಡಿತು. ನೋಟು ರದ್ದತಿಯಿಂದ ಮ್ಯೂಚ್ಯುವಲ್ ಫಂಡ್ ಕ್ಷೇತ್ರದಲ್ಲೂ ಹಣದ ಹೊಳೆ ಹರಿಯಿತು. ಇದರಿಂದಾಗಿ ಕೆಲವು ಪ್ರಮುಖ ಸೂಚ್ಯಂಕಗಳು ಅಭೂತಪೂರ್ವ ಏರಿಕೆ ಕಂಡಿತು.
ನೋಟು ನಿಷೇಧದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಲ್ಲೆಸೆತದ ಘಟನೆಗಳು ಬಹಳಷ್ಟು ಕಡಿಮೆಯಾದರೂ ಸ್ವಲ್ಪ ಸಮಯದ ನಂತರ ಮತ್ತೆ ಏರಿಕೆ ಕಾಣಲು ಆರಂಭಿಸಿತು. ನೋಟು ಅಮಾನ್ಯದ ನಂತರ ಬಂಡುಕೋರ ಹಿಂಸಾಚಾರವು ಕಡಿಮೆಯಾಗಿದ್ದರೂ ಎರಡರ ಮಧ್ಯೆ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕೃಪೆ: ಎನ್‌ಡಿಟಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News