ಟಿಪ್ಪು ಜಯಂತಿ ಆಚರಣೆ ಹಿಟ್ಲರ್ ಜಯಂತಿಗೆ ಸಮ ಎಂದ ಚಿ.ಮೂ.
ಬೆಂಗಳೂರು, ನ.8: ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಜಯಂತಿ ಆಚರಣೆ ಮಾಡುವುದು ಹಿಟ್ಲರ್ ಜಯಂತಿ ಮಾಡಿದಂತೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಟೀಕಿಸಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ಪುರಭವನ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಚಿದಾನಂದಮೂರ್ತಿ ಅವರು, ಟಿಪ್ಪು ಸುಲ್ತಾನ್ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿದ್ದ ಎಂದು ಅನೇಕ ದಾಖಲೆಗಳು ತಿಳಿಸುತ್ತಿವೆ. ಟಿಪ್ಪುವಿನ ಖಡ್ಗಗಳಲ್ಲಿ ಪರ್ಶಿಯನ್ ಭಾಷೆಯಲ್ಲಿ ಮುಸ್ಲಿಮರಲ್ಲದವರ ಕೊಲ್ಲು ಎಂದು ಬರೆದಿರುವುದು ಶಾಸನಗಳು ತಿಳಿಸಿವೆ. ಹೀಗಿದ್ದರೂ, ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೇಖಕ ಅದ್ದಂಡ ಕಾರ್ಯಪ್ಪ ಮಾತನಾಡಿ, ಟಿಪ್ಪುವಿನಿಂದಾಗಿ ಇಡೀ ಕುಟುಂಬವೇ ಹತ್ಯೆಗೀಡಾದ ಕುಟುಂಬದಿಂದ ಬಂದವ ನಾನು. ಟಿಪ್ಪು ತನ್ನ ಎರಡು ಮಕ್ಕಳನ್ನು ಒತ್ತೆ ಇಟ್ಟಿದ್ದು, ತಾನು ಕೊಡಬೇಕಾದ ಮೂರು ಕೋಟಿ ರೂಪಾಯಿ ಕೊಡಲು ಸಾಧ್ಯವಾಗದೆ, ಮಕ್ಕಳನ್ನು ಒತ್ತೆ ಇಟ್ಟ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಮಾಸ್ ಕಿಲ್ಲರ್ : ರಾಜ್ಯದಲ್ಲಿ ನಡೆದ ದೇಶಭಕ್ತರ ಹತ್ಯೆ ಹಿಂದೆ ಎಸ್‌ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳ ಕೈವಾಡವಿದ್ದರೂ ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಸಿದ್ದರಾಮಯ್ಯ ಅವರೇ ಇಂತಹ ಸಂಘಟನೆಗಳಿಗೆ ಸುಪಾರಿ ನೀಡುವ ಮೂಲಕ ರಾಜ್ಯದಲ್ಲಿ ಮಾಸ್ ಕಿಲ್ಲರ್ ಎಂದು ಗುರುತಿಸಿಕೊಂಡಿದ್ದಾರೆ ಎಂದರು.
ಕಾರ್ಯಪ್ಪ ನಮ್ಮೆಲ್ಲರ ಹೀರೊ: ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರಿಗೆ ಭಾರತ ರತ್ನ ನೀಡುವ ಪ್ರಸ್ತಾವನೆಗೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಗ್ವಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಸಿಂಗ್ವಿ ದೇಶದ್ರೋಹಿ ಎನ್ನುವುದು ಮನದಟ್ಟಾಗುತ್ತದೆ. ಕಾರ್ಯಪ್ಪ ಅವರಿಗೆ ಭಾರತ ರತ್ನ ಕೊಡಿ, ಬಿಡಿ ಕಾರ್ಯಪ್ಪ ನಮ್ಮೆಲ್ಲರ ಹೀರೊ. ಎಂದಿಗೂ ಆವರು ದೇಶಕ್ಕೆ ಭಾರತ ರತ್ನವೇ ಆಗಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಶಾಸಕರಾದ ಬಿ.ಎನ್.ವಿಜಯ್ ಕುಮಾರ್, ಎಸ್.ರಘು, ಎಸ್.ಮುನಿರಾಜು, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ, ವೇದಿಕೆಯ ಸಂಚಾಲಕ ಶ್ರೀನಿವಾಸ್ ಸೇರಿದಂತೆ ಹಲವರಿದ್ದರು.
ಮತಕ್ಕಾಗಿ ಅಲ್ಪಸಂಖ್ಯಾತರ ಒಲೈಕೆಗಾಗಿ ಸರಕಾರ ಟಿಪ್ಪು ಜಯಂತಿ ಮಾಡುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಯಂತಿ ರದ್ದುಗೊಳಿಸುತ್ತೇವೆ.
-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ