ಜಯಂತಿಗಳ ಆಚರಣೆಗೆ ಸರಕಾರಿ ರಜೆ ಬೇಡ: ಚಂಪಾ ಅಭಿಮತ
ಬೆಂಗಳೂರು, ನ.8: ವರ್ಷದಾದ್ಯಂತ ಆಚರಿಸುವ ವಿವಿಧ ಜಯಂತಿಗಳ ಆಚರಣೆಗೆ ಸರಕಾರಿ ರಜೆಗಳ ಅಗತ್ಯವಿಲ್ಲ. ಎಲ್ಲ ರಜೆಗಳನ್ನು ರದ್ದು ಮಾಡಿ ವಾರ್ಷಿಕ ಕೇವಲ ಐದು ದಿನ ಮಾತ್ರ ರಜೆ ನೀಡಬೇಕು ಎಂದು ಹಿರಿಯ ಸಾಹಿತಿ ಹಾಗೂ 83ನೆ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಿಸಿದ್ದಾರೆ.
ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅವರು, ಸರಕಾರದ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಆಚರಣೆಗಳೇ ರಾಜಾಜಿಸುತ್ತಿವೆ. ಜಾತಿಗೊಂದು, ಧರ್ಮಕ್ಕೊಂದು ಆಚರಣೆಗಳನ್ನು ಮಾಡುವ ಮೂಲಕ ಸರಕಾರಿ ರಜೆಗಳನ್ನು ನೀಡುತ್ತಾರೆ. ಈ ಮೂಲಕ ಮಾನವ ಶ್ರಮವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶಕ್ಕಾಗಿ ಸೇವೆ ಸಲ್ಲಿಸಬೇಕು, ಕೊಡುಗೆ ನೀಡಬೇಕು ಎನ್ನುವವರಿಗೆ ಈ ರೀತಿಯ ರಜೆಗಳ ಅಗತ್ಯವಿರುವುದಿಲ್ಲ ಎಂದ ಅವರು, ಚೀನಾ ರಾಷ್ಟ್ರದಲ್ಲಿ ರಾಷ್ಟ್ರ ನಾಯಕರ ದಿನಾಚರಣೆಗಳಂದು ಒಂದು ದಿನದ ಹೆಚ್ಚಿನ ಕೆಲಸ ಮಾಡುವ ಮೂಲಕ ಗೌರವ ಸಲ್ಲಿಸುತ್ತಾರೆ. ಅದೇ ರೀತಿ ನಮ್ಮಲ್ಲಿಯೂ ಸರಕಾರಿ ರಜೆಗಳನ್ನು ಎಲ್ಲವನ್ನೂ ರದ್ದು ಮಾಡಬೇಕು. ಅದರ ಬದಲಿಗೆ ಆ.15, ಜ.26, ಅ.2, ಏ.14 ಮತ್ತು ನ.1 ರಂದು ಮಾತ್ರ ಸರಕಾರಿ ರಜೆ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಭುತ್ವದ ಕಣ್ಣು: ಸಮಾಜ ಬರಹಗಾರರಿಂದ ಬಹಳಷ್ಟು ನಿರೀಕ್ಷೆ ಮಾಡುತ್ತದೆ. ಸಾಹಿತ್ಯದ ಮೂಲಕ ನೇರವಾಗಿ ತನ್ನ ಪ್ರಭಾವ ಬೀರಿ ಬದಲಾವಣೆ ಕಡೆಗೆ ಕರೆದೊಯ್ಯುತ್ತಾರೆ ಎಂದ ಚಂಪಾ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಕ್ಷರ ಜೀವಿಗಳಾದ ಸಾಹಿತಿ, ಲೇಖಕ, ಪತ್ರಕರ್ತರ ಮೇಲೆ ನಮ್ಮನ್ನಾಳುತ್ತಿರುವ ಪ್ರಭುತ್ವಗಳು ಸದಾ ಕಣ್ಣಿಟ್ಟಿರುತ್ತದೆ. ಹೀಗಾಗಿ, ಬರಹಗಾರರ ಮೇಲೆ ಸಾಮಾಜಿಕ ಹಾಗೂ ರಾಜಕೀಯ ಹೊಣೆಗಾರಿಕೆ ಇರುತ್ತದೆ ಎಂದು ತಿಳಿಸಿದರು.
ಯಾವುದೇ ಪ್ರಭುತ್ವವಾಗಲಿ ತನ್ನನ್ನು ಪ್ರಶ್ನೆ ಮಾಡುವ, ವಿರೋಧ ಮಾಡುವವರು ಯಾರು ಎಂದು ನೋಡುತ್ತಾ, ಅವರನ್ನು ನಿಯಂತ್ರಣ ಮಾಡಲು ಮುಂದಾಗುತ್ತದೆ. 70 ರ ದಶಕದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಹೇರಿದರು. ಈ ವೇಳೆ ವಿಚಾರಗಳ ಹಾಗೂ ಅಭಿವ್ಯಕ್ತಿ ಸ್ವಾತಂತ್ರ ಹರಣ ಮಾಡುವ ಪ್ರಯತ್ನ ನಡೆಯಿತು. ಆದರೆ, ಇಂದು ಅಂತಹ ದಬ್ಬಾಳಿಕೆ ಕಾಣುತ್ತಿಲ್ಲವಾದರೂ, ಅದೇ ರೀತಿಯ ವಾತಾವರಣ ಕಾಣುತ್ತಿದೆ. ಹೀಗಾಗಿ, ಬರಹಗಾರರು ಬರೆಯುವ ಮುನ್ನ ಜಾಗೃತಿಯಿಂದ ವರ್ತಿಸುವುದು ಸೂಕ್ತ ಎಂದು ಎಚ್ಚರಿಕೆ ನೀಡಿದರು.
ಠರಾವು ಅನುಷ್ಠಾನ ಕಸಾಪ ಜವಾಬ್ದಾರಿ: ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಠರಾವುಗಳನ್ನು ಅನುಷ್ಠಾನ ಮಾಡಲು ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದನ್ನು ಮುಂದಿನ ಸಮ್ಮೇಳನದಲ್ಲಿ ಮರು ಮಂಡಿಸುವಂತೆ ಮಾಡಬಾರದು. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನಾಧ್ಯಕ್ಷರು ಜನರಿಗೆ ಈ ಕುರಿತು ಜಾಗೃತಿ ಮೂಡಿಸುವಂತೆ ಮಾಡಿ, ಸರಕಾರದ ಮೇಲೆ ಒತ್ತಡ ತರಬೇಕು. ಆಗ ಮಾತ್ರ ಅದು ಜಾರಿಯಾಗಲು ಸಾಧ್ಯವಾಗುತ್ತದೆ. ಈ ಕುರಿತು ಮುಂದಿನ ಸಮ್ಮೇಳನದಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರತ್ಯೇಕ ಧ್ವಜ ಬೇಕು: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಈ ಕುರಿತು ನವೋದಯ ಕವಿ ಪದ್ಯ ಸಹ ರಚಿಸಿದ್ದಾರೆ. ನಮ್ಮ ಧ್ವಜ ಎಂದರೆ ಲಾಂಛನ, ಕನ್ನಡಿಗರ ಅಸ್ಮಿತೆ ಹಾಗೂ ನಮ್ಮ ಗುರುತು ಎಂದು ಹೇಳಿದ್ದರು. ಅಲ್ಲದೆ, ತಮಿಳುನಾಡು ಕಪ್ಪುಬಣ್ಣದ ಧ್ವಜವನ್ನು ಅಲಂಕರಿಸಿದಾಗ ಮ.ರಾಮಮೂರ್ತಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ರೂಪಿಸಿದರು. ಅನಂತರ ಅದು ಕನ್ನಡಿಗರಲ್ಲಿ ಭಾವನಾತ್ಮಕವಾಗಿ ರೂಪುಗೊಂಡಿದೆ ಎಂದು ತಿಳಿಸಿದರು.
ಪ್ರಸ್ತುತವಾಗಿ ಬಳಸುತ್ತಿರುವ ಧ್ವಜಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತ್ಯೇಕ ಧ್ವಜ ಹೊಂದುವ ಹಕ್ಕಿದೆ. ಒಕ್ಕೂಟದ ಸರಿಸಮಾನವಾದ ಹಕ್ಕುಗಳು ಭಾಷೆ, ಇತಿಹಾಸ, ಪರಂಪರೆಯಿರುವ ಎಲ್ಲ ರಾಜ್ಯಗಳು ಧ್ವಜ ಬೇಕು ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಮ.ರಾಮಮೂರ್ತಿಯು ಇದನ್ನು ಅವರ ಕನ್ನಡ ಪಕ್ಷಕ್ಕೆ ಬಳಸಿಕೊಂಡಿದ್ದು, ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದಿದ್ದಾರೆ. ಹೀಗಾಗಿ, ಇದು ಅಧಿಕೃತವಾಗಲು ಕಷ್ಟ ಸಾಧ್ಯ. ಆದುದರಿಂದ ನಮ್ಮ ನಾಡಿನ ಐತಿಹಾಸಿಕ ಪರಂಪರೆಯನ್ನು ಸೂಚಿಸುವ ಚಿತ್ರವೊಂದನ್ನು ಅಳವಡಿಸುವ ಮೂಲಕ ಇದೇ ಧ್ವಜವನ್ನು ಮುಂದುವರಿಸಬೇಕು ಎಂದರು.
ಕಡ್ಡಾಯ ಕನ್ನಡ ಜಾರಿಯಾಗಬೇಕು: ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಮಾಡಬೇಕು ಎಂಬುದು ಎಲ್ಲರ ಆಶಯವಾಗಿದೆ. ನೆರೆ ರಾಜ್ಯಗಳಾದ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳೇ ಆಡಳಿತ ಭಾಷೆಯಾಗಿದೆ. ಆದರೆ, ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ.80 ರಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದರೆ, ರಾಜ್ಯದ ರಾಜಧಾನಿ ಮತ್ತು ಕೇಂದ್ರ ಕಚೇರಿಗಳಲ್ಲಿ ಇಂದಿಗೂ ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತಿದ್ದಾರೆ. ಹೀಗಾಗಿ, ತುರ್ತು ಭಾಷಾ ನೀತಿ ಜಾರಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ನ್ಯಾಯ ಸಿಗುತ್ತಿಲ್ಲ: ನ್ಯಾಯಾಂಗದಲ್ಲಿ ಕರ್ನಾಟಕ ಹಾಗೂ ಕನ್ನಡಕ್ಕೆ ಸಿಗಬೇಕಾದ ನ್ಯಾಯ ಸಿಗುತ್ತಿಲ್ಲ. ನೀರಿನ ವಿಚಾರ, ಗಡಿ ವಿವಾದ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನ್ಯಾಯವಾಗುತ್ತಲೇ ಇದೆ. ಇತ್ತೀಚಿಗೆ ಸುಪ್ರೀಂಕೋರ್ಟ್ ಮಾತೃಭಾಷೆಯನ್ನು ಯಾರು ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನಿಸಿದ್ದು, ಈ ಕುರಿತು, ರಾಜ್ಯ ಸರಕಾರ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದಿದೆ. ಇದು ದೇಶದ ಎಲ್ಲ ಪ್ರಾದೇಶಿಕ ಭಾಷೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನಾವೆಲ್ಲ ಕೂಡಿ ಕೇಂದ್ರ ಸರಕಾರಕ್ಕೆ ಈ ಕುರಿತು ಮನವರಿಕೆ ಮಾಡಿಕೊಡಬೇಕು ಹಾಗೂ ಮಸೂದೆ ತರುವಂತೆ ಒತ್ತಡ ಹಾಕಬೇಕು ಎಂದು ತಿಳಿಸಿದ್ದಾರೆ. ಇದು ಶ್ಲಾಘನೀಯ. ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಈ ಕುರಿತು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವುದು ಕಷ್ಟಕರ ಎಂದು ಒಪ್ಪಿಕೊಂಡಿದ್ದರೂ, ನ್ಯಾಯಾಲಯದಲ್ಲಿನ ವಿಚಾರಣೆ, ನ್ಯಾಯಾಲಯದ ತೀರ್ಪುಗಳು ಸೇರಿದಂತೆ ಸಂಪೂರ್ಣವಾಗಿ ನ್ಯಾಯಾಲಯದ ಕಲಾಪಗಳನ್ನು ಆಯಾ ಪ್ರಾದೇಶಿಕ ಭಾಷೆಯಲ್ಲಿ ನಡೆಸಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಸಮಾನತೆಗಾಗಿ ಹೋರಾಡಿದ ಬಸವಣ್ಣರ ಆದರ್ಶದಂತೆ ನಡೆದುಕೊಳ್ಳಲು ಇಚ್ಛಿಸುವ ಲಿಂಗಾಯತ ಸಮುದಾಯದ ಪ್ರತ್ಯೇಕ ಧರ್ಮಕ್ಕೆ ನನ್ನ ಬೆಂಬಲವಿದೆ.
- ಚಂದ್ರಶೇಖರ್ ಪಾಟೀಲ್, ಹಿರಿಯ ಸಾಹಿತಿ