ಟಿಪ್ಪು ಜಯಂತಿ ಆಚರಣೆಗೆ ಆದೇಶ ನೀಡಲು ಮನವಿ
ಬೆಂಗಳೂರು, ನ.8: ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವಂತೆ ಎಲ್ಲ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಬರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರ ಮೂಲಕ ಆದೇಶ ರವಾನಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ.
ಮುಖ್ಯಮಂತ್ರಿಗೆ ಪತ್ರ ಬರೆದಿರುವ ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿಯಾಗಿದ್ದು, ದೇಶಕ್ಕಾಗಿ ಹೋರಾಡಿ ಮಡಿದಿದ್ದಾರೆ. ಬ್ರಿಟಿಷರ ವಿರುದ್ಧವಾಗಿ ಯಾರೊಬ್ಬ ರಾಜನೂ ಹೋರಾಟ ಮಾಡಿಲ್ಲ. ಆದರೆ, ಟಿಪ್ಪು ಸುಲ್ತಾನ್ ಮಾಡಿದ್ದಾರೆ. ಅಲ್ಲದೆ, ಟಿಪ್ಪು ಸುಲ್ತಾನ್ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದು ವಿವರಿಸಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರ ಅನಗತ್ಯವಾಗಿ ಹಿಂದೂ ಮತ್ತು ಮುಸ್ಲಿಮರ ಸಮುದಾಯದ ನಡುವೆ ಎತ್ತಿಕಟ್ಟಿ ಕೋಮುದ್ವೇಷ ಹರಡುವ ಹುನ್ನಾರ ಮಾಡಲಾಗುತ್ತಿದೆ. ಸುಳ್ಳನ್ನು ಸತ್ಯ ಎಂದು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯ ಸರಕಾರ ಎಚ್ಚರಿಕೆಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.