×
Ad

ಸಿಐಡಿ ವರದಿಯೇ ಅಂತಿಮವಲ್ಲ: ಹಿರಿಯ ವಕೀಲ ರಾಜಗೋಪಾಲರಿಂದ ಹೈಕೋರ್ಟ್‌ಗೆ ಹೇಳಿಕೆ

Update: 2017-11-08 22:48 IST

ಬೆಂಗಳೂರು, ನ.8: ಸಿಐಡಿ ವರದಿಯೇ ಅಂತಿಮವಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ ಅವರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕೆಪಿಎಸ್‌ಸಿ ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ಮುಂದುವರಿಸಿತು.

ವಿಚಾರಣೆ ವೇಳೆ ರಾಜಗೋಪಾಲ, ಸಿಐಡಿ ವರದಿ ಕೇವಲ ಒಂದು ಪೊಲೀಸ್ ತನಿಖಾ ವರದಿ. ಇದನ್ನು ಒಪ್ಪುವುದು ಬಿಡುವುದು ಶಾಸನಸಭೆಯ ವಿವೇಚನೆಗೆ ಬಿಟ್ಟದ್ದು. ಹೀಗಿರುವಾಗ ಈ ಪ್ರಕರಣದಲ್ಲಿ ಸಿಐಡಿ ವರದಿ ಕುರಿತು ಕ್ರಿಮಿನಲ್ ಕೋರ್ಟ್‌ನಲ್ಲಿ ಇನ್ನೂ ವಿಚಾರಣೆ ನಡೆಯಬೇಕು. ಸಾಕ್ಷಿಗಳ ಪರಾಮರ್ಶೆ ಆಗಬೇಕು. ಹೀಗಿರುವಾಗ ಇದೇ ಅಂತಿಮ ಎಂದು ಭಾವಿಸಿ ಅನುಮಾನಗಳ ಆಧಾರದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ವಿವರಿಸಿದರು.

ಈ ಕುರಿತಂತೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಅವರು ಸಂಸತ್‌ನಲ್ಲಿ ಸಿಎಜಿ ವರದಿ ಹೇಗೆ ಪರಾಮರ್ಶೆಗೆ ಒಳಪಡುತ್ತದೆ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.

ಆಯ್ಕೆಯಾದ ಕೆಲ ಅಭ್ಯರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಕಳಂಕಿತರು 46 ಜನ ಇದ್ದಾರೆ ಎಂದಮಾತ್ರಕ್ಕೆ ಆಯ್ಕೆಯಾಗಿರುವ 362 ಅಭ್ಯರ್ಥಿಗಳ ಆಯ್ಕೆಪಟ್ಟಿಯನ್ನೇ ಅನುಮಾನದಿಂದ ನೋಡುವುದು ತಪ್ಪು. ಆರೋಪಿತರ ವೈಯಕ್ತಿಕ ತನಿಖೆ ನಡೆಯಬೇಕು ಎಂದರು. ವಿಚಾರಣೆಯನ್ನು ಗುರುವಾರಕ್ಕೆ(ನ.9) ಮುಂದೂಡಲಾಗಿದೆ.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಆದಿತ್ಯ ಸೋಂಧಿ ವಾದಿಸಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News