ಗಾಂಧಿಯಿಂದ ಗೌರಿಯವರೆಗೆ: ಐಎಸ್ಎಫ್ ಕುವೈಟ್ ನಿಂದ ವಿಚಾರಗೋಷ್ಟಿ

Update: 2017-11-08 18:41 GMT

ಕುವೈತ್, ನ. 8:   ಫ್ಯಾಶಿಸ್ಟ್ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ 'ಗಾಂಧಿಯಿಂದ ಗೌರಿವರೆಗೆ' ವಿಚಾರಗೋಷ್ಠಿಯು  ಇಂಡಿಯನ್ ಸೋಶಿಯಲ್ ಫೋರಮ್, ಕುವೈಟ್ ವತಿಯಿಂದ  ಸಾಲ್ಮಿಯಾದ ರೆಡ್ ಫ್ಲೇಮ್ ಹಾಲಿನಲ್ಲಿ ನಡೆಯಿತು. ಕುವೈತ್ ನ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕುವೈತ್ ಕರ್ನಾಟಕ ವಿಭಾಗದ ಅಧ್ಯಕ್ಷ  ಇಮ್ತಿಯಾಝ್ ಅಹ್ಮದ್ ಅರ್ಕುಳ ಅವರು ಭಾರತದಲ್ಲಿ ಪ್ರಸಕ್ತ ಕಂಡು ಬರುತ್ತಿರುವ ಅಸಹಿಷ್ಣುತೆ, ಅದರ ಹುಟ್ಟು, ಬೆಳವಣಿಗೆ, ಕಾರಣ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿದರು. ಭಾರತದಲ್ಲಿ ನಡೆಯುತ್ತಿರುವ ಹತ್ಯೆಗಳ ಸೂತ್ರದಾರರಾರು ಎಂಬುವುದು ಇಲ್ಲಿನ ನ್ಯಾಯಾಂಗ ವ್ಯವಸ್ಥೆ, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ತಿಳಿದಿದ್ದರೂ, ಯಾವುದೇ ತನಿಖಾ ಸಂಸ್ಥೆಯ ತನಿಖೆಯು ಹತ್ಯಾಕಾಂಡಗಳನ್ನು ನಡೆಸುತ್ತಿರುವ ಸೂತ್ರದಾರ ಸಂಘಟನೆಯವರೆಗೆ ತಲುಪದಿರುವುದು ಬಹುದೊಡ್ಡ ದುರಂತವೆಂದರು. ಜಾತ್ಯಾತೀತ ಶಕ್ತಿಗಳು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ತೋರುತ್ತಿರುವ ಮೃದು ಧೋರಣೆ ನಿಲ್ಲಿಸಿ ಕಠಿಣ ನಿಲುವು ತಳೆಯುವ ದಿನದಿಂದ  ಫ್ಯಾಶಿಸ್ಟ್’ನ ಅಂತ್ಯ ಆರಂಭವಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಬಾಬು ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಭಾರತದಲ್ಲಿ ಸಂವಿಧಾನವೇ ಅಪಾಯದಲ್ಲಿರುವ ಈ ಸಂಧರ್ಭದಲ್ಲಿ ಜಾತ್ಯಾತೀತ ಶಕ್ತಿಗಳು ತಮ್ಮ ಸ್ವಪ್ರತಿಷ್ಟೆಯನ್ನು ಬದಿಗಿಟ್ಟು ಒಂದಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಅನಿವಾಸಿಗಳೆಡೆ ಜಾಗೃತಿಯನ್ನು ಮೂಡಿಸುತ್ತಿರುವ ಐಎಸ್ಎಫ್ ನಡೆ ಶ್ಲಾಘನೀಯ ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕರೂ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಪಕರೂ ಆದ ಅಬ್ದುಲ್ ರಝಾಕ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಅಭಿವ್ಯಕ್ತಿ ಸ್ವಾತಂತ್ರ್ಯವು ಮಾನವನ ಮೂಲಭೂತ ಅವಶ್ಯಕತೆಯಾಗಿದ್ದು, ಅದರಲ್ಲೂ ಒಂದು ಮಹಿಳೆಯನ್ನು ಜಾತ್ಯಾತೀತರ ಪರ ಶಬ್ಧವೆತ್ತಿದ ಕಾರಣಕ್ಕಾಗಿ ಅಮಾನವೀಯವಾಗಿ ಕೊಲ್ಲುವುದು ಕೊಲೆಗಡುಕ ಸಂಘಟನೆಯ ನೀಚ ಸ್ವರೂಪವನ್ನು ಬಿಂಬಿಸುತ್ತದೆ ಎಂದು ಖಂಡಿಸಿದರು.

ಇಂಡಿಯನ್ ಸೋಶಿಯಲ್ ಫೋರಮ್ ಮೀಡಿಯೇಟ್ಸ್ ತಂಡದ ಸಂಚಾಲಕರಾದ ಅಶ್ರಫ್ ಕಾಲತ್ತೋಡ್, ಕುವೈತ್ ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ  ಮುಸ್ತಕೀಮ್ ಶಿರೂರ್ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿಯಾದ ಮುಹಮ್ಮದ್ ರಫೀಕ್ ಮಂಚಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಕ್ಬಾಲ್ ಬಡ್ಡೂರು ಆರಂಭದಲ್ಲಿ ಸ್ವಾಗತಿಸಿ, ತಂಝೀಲ್ ಕಲ್ಲಾಪು ಕಾರ್ಯಕ್ರಮವನ್ನು ನಿರೂಪಿದರು. ಹಂಝ ಉಚ್ಚಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News