ಬೆಂಗಳೂರು: ನ.10ರಂದು ಹಝರತ್ ಟಿಪ್ಪು ಸುಲ್ತಾನ್ ಜಯಂತಿ
ಬೆಂಗಳೂರು, ನ. 9: ಮೈಸೂರು ಹುಲಿ ಹಝರತ್ ಟಿಪ್ಪು ಸುಲ್ತಾನ್ ಜಯಂತಿ ನ.10ರಂದು ಸಂಜೆ 6:30ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸ್ಪೀಕರ್ ಕೆ.ಬಿ.ಕೋಳಿವಾಡ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಗೃಹ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಸಚಿವ ಯು.ಟಿ.ಖಾದರ್, ವಿಪಕ್ಷ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಬಿಬಿಎಂಪಿ ಮೇಯರ್ ಸಂಪತ್ ರಾಜ್ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ವಹಿಸಲಿದ್ದು, ಸಂಸ್ಕೃತಿ ಇಲಾಖೆ ಸಂಸದೀಯ ಕಾರ್ಯದರ್ಶಿ ಶಕುಂತಲಾಶೆಟ್ಟಿ, ಸಂಸದ ಪಿ.ಸಿ.ಮೋಹನ್, ರಾಜ್ಯಸಭಾ ಸದಸ್ಯ ರಹ್ಮಾನ್ ಖಾನ್ ಭಾಗವಹಿಸಲಿದ್ದು, ಸಾನಿಧ್ಯವನ್ನು ಹಜರತ್ ವೌಲಾನಾ ಸಗೀದ ಅಹ್ಮದ್ ಖಾನ್ ಸಾಹೇಬ್ ರಷಾದಿ ಹಾಗೂ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮಿ ವಹಿಸಲಿದ್ದಾರೆ.
ವಿಶೇಷ ಉಪನ್ಯಾಸ: ಟಿಪ್ಪು ಸುಲ್ತಾನ್ ಅವರ ಜೀವನ ಸಾಧನೆಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಎಲ್. ಹನುಮಂತಯ್ಯ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ.
ಟಿಪ್ಪು ಸುಲ್ತಾನ್ ಜಯಂತಿ ಸರಕಾರಿ ಕಾರ್ಯಕ್ರಮವಾಗಿ ನಡೆಯುತ್ತದೆ. ಬಿಜೆಪಿಯವರು ಢೋಂಗಿಗಳು. ಶೆಟ್ಟರ್ ಸಿಎಂ ಆಗಿದ್ದಾಗ ಟಿಪ್ಪು ಮಹಾವೀರ, ಶೂರ ಎಂದು ಹಾಡಿ ಹೊಗಳಿದ್ದರು. ಟಿಪ್ಪುಪುಸ್ತಕಕ್ಕೆ ಶೆಟ್ಟರ್, ಸದಾನಂದಗೌಡ ಮುನ್ನುಡಿ ಬರೆದಿದ್ದಾರೆ. ಯಡಿಯೂರಪ್ಪ ಕೂಡ ಟಿಪ್ಪುವೇಷಧಾರಿ ಆಗಿರಲಿಲ್ಲವೇ. ಇವರದ್ದು ಎರಡು ನಾಲಿಗೆ ಅಲ್ಲವೇ, ಟಿಪ್ಪು ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ