ನ.25 ರಿಂದ 'ಶೈಕ್ಷಣಿಕ ಕೆರಿಯರ್ ಉತ್ಸವ'
ಬೆಂಗಳೂರು, ನ.9: ವಾಣಿಜ್ಯ ಶಿಕ್ಷಣ ಸಂಸ್ಥೆಯಾದ ಕೆ 2 ನ ಶೈಕ್ಷಣಿಕ ಕೆರಿಯರ್ ಉತ್ಸವವನ್ನು ನ.25 ಮತ್ತು 26 ರಂದು ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಿಇಒ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬೆಂಗಳೂರು, ರಾಜಸ್ಥಾನ ಹಾಗೂ ಹೈದರಾಬಾದ್‌ನ ಮೂರು ನಗರಗಳಲ್ಲಿ ಶೈಕ್ಷಣಿಕ ಕೆರಿಯರ್ ಉತ್ಸವವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಮೊದಲಿಗೆ ನಡೆಯಲಿದೆ. ಅನಂತರ ರಾಜಸ್ಥಾನದ ಕೋಟಾದಲ್ಲಿ 8 ರಿಂದ 10ರವರೆಗೆ ಮತ್ತು ಹೈದರಾಬಾದ್‌ನಲ್ಲಿ ಡಿ.16 ಹಾಗೂ 17ರಂದು ನಡೆಯುತ್ತದೆ ಎಂದು ತಿಳಿಸಿದರು.
ಎಸೆಸೆಲ್ಸಿ ಮುಗಿದ ತಕ್ಷಣ ವಿದ್ಯಾರ್ಥಿಗಳ ಎದುರಿಗೆ ಹಲವು ಅವಕಾಶಗಳು ಎದುರಿಗಿರುತ್ತವೆ. ಆದರೆ, ವಿದ್ಯಾರ್ಥಿಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂತಹವರಿಗೆ ಈ ಶೈಕ್ಷಣಿಕ ಕೆರಿಯರ್ ಉತ್ಸವ ನೆರವಾಗುತ್ತದೆ. ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಒಂದು ಕಡೆ ಸೇರಿಸುವ ಮೂಲಕ ಮುಂದಿನ ಶೈಕ್ಷಣಿಕ ವರ್ಷವನ್ನು ಎಲ್ಲಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಎರಡು ದಿನ ನಡೆಯುವ ಶೈಕ್ಷಣಿಕ ಉತ್ಸವದಲ್ಲಿ ವಿವಿಧ 45 ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿವೆ. ಒಂದೇ ವೇದಿಕೆಯಲ್ಲಿ ಕೆರಿಯರ್‌ಗೆ ಸಂಬಂಧಿಸಿದ ವಿಷಯಗಳಾದ ಕಾನೂನು, ಮೆಡಿಕಲ್, ಇಂಜಿನಿಯರಿಂಗ್, ಶಿಕ್ಷಣ ಸಾಲ ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಮಾದರಿ ಪರೀಕ್ಷೆಗಳು ಸೈಕೋಮೆಟ್ರಿಕ್ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳು ಮಾಹಿತಿ ಮಾತ್ರವಲ್ಲದೆ ಭವಿಷ್ಯದ ವೃತ್ತಿಗಳ ಆಯ್ಕೆಯ ಬಗ್ಗೆಯೂ ಪರಿಣಿತರಿಂದ ಸೂಚನೆಗಳನ್ನು ಪಡೆಯಬಹುದು.