ರಾಜ್ಯದ ಜನತೆ ಜಾಣ್ಮೆ-ತಾಳ್ಮೆಯಿಂದ ವರ್ತಿಸಬೇಕು: ಸಚಿವ ಖಾದರ್
ಬೆಂಗಳೂರು, ನ.9: ಟಿಪ್ಪು ಸುಲ್ತಾನ್ ಜಯಂತಿಯನ್ನು ಸರಕಾರದ ವತಿಯಿಂದ ನ.10ರಂದು ಆಚರಣೆ ಮಾಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೆಲವರು ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ರಾಜ್ಯದ ಜನತೆ ಪ್ರಚೋದನೆಗೆ ಒಳಗಾಗದೆ ಜಾಣ್ಮೆ ಮತ್ತು ತಾಳ್ಮೆಯಿಂದ ವರ್ತಿಸಬೇಕೆಂದು ಆಹಾರ ಸಚಿವ ಯು.ಟಿ ಖಾದರ್ ಮನವಿ ಮಾಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯ ಸರಕಾರದಿಂದ ಟಿಪ್ಪು ಜಯಂತಿ ಆಚರಿಸುತ್ತಿದ್ದು, ಇದು ಮೂರನೆ ವರ್ಷ. ಚುನಾವಣೆ ಹಾಗೂ ರಾಜಕೀಯ ಕಾರಣಕ್ಕಾಗಿ ಕೆಲವರು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎಂದರು.
ರಾಜ್ಯ ಸರಕಾರದ ವಿರುದ್ಧ ಮಾತನಾಡಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಟಿಪ್ಪು ಸುಲ್ತಾನ್ ಜಯಂತಿ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಕೆಲವರು ಸನ್ನಾಹ ನಡೆಸಿದ್ದಾರೆ. ಸಂಘರ್ಷ ಉಂಟಾದರೆ ಅಮಾಯಕರು ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕೆನ್ನುವ ಬಿಜೆಪಿಯವರು ಗಾಂಧಿ, ಡಾ.ಅಂಬೇಡ್ಕರ್ ಅವರನ್ನು ಟೀಕಿಸುತ್ತಾರೆ. ಹೀಗಾಗಿ ಅವರ ಪ್ರಚೋದನೆಗೆ ಯಾರೂ ಬಲಿಯಾಗುವುದು ಬೇಡ. ಟಿಪ್ಪು ಜಯಂತಿ ವೇಳೆ ರಾಜ್ಯದ ಜನತೆ ತಾಳ್ಮೆ-ಜಾಣ್ಮೆಯಿಂದ ವರ್ತಿಸಬೇಕೆಂದು ಪುನರುಚ್ಚರಿಸಿದರು.