×
Ad

ಟಿಪ್ಪು ತೇಜೋವಧೆಗೆ ಬ್ರಿಟಿಷ್ ದಾಖಲೆ ಆಶ್ರಯಿಸಿದ ಆರೆಸ್ಸೆಸ್: ಬಂಜಗೆರೆ ಜಯಪ್ರಕಾಶ್

Update: 2017-11-09 20:35 IST

ಬೆಂಗಳೂರು, ನ.9: ತನ್ನ ಪರಾಕ್ರಮಗಳಿಂದ ಬ್ರಿಟಿಷರನ್ನು ಬೆಚ್ಚಿ ಬೀಳಿಸಿದ್ದ ಮೈಸೂರಿನ ಹುಲಿ ಟಿಪ್ಪು ಸುಲ್ತಾನ್ ವಿರುದ್ಧ ಕೋಮುವಾದಿಗಳು ಅಪಪ್ರಚಾರ ಮಾಡಲು ಬ್ರಿಟಿಷರ ದಾಖಲೆಗಳನ್ನು ಆಶ್ರಯಿಸಿದ್ದಾರೆ ಎಂದು ಪ್ರಗತಿಪರ ಚಿಂತಕ ಬಂಜಗೆರೆ ಜಯಪ್ರಕಾಶ್ ಲೇವಡಿ ಮಾಡಿದ್ದಾರೆ.

ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಟಿಪ್ಪು ದೇಶಪ್ರೇಮಿಯೋ-ರಾಷ್ಟ್ರ ವಿರೋಧಿಯೋ’ ವಿಷಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶ ಭಕ್ತರೆಂದು ಹೇಳಿಕೊಳ್ಳುವ ಸಂಘ ಪರಿವಾರ ಟಿಪ್ಪು ಸುಲ್ತಾನ್ ಕುರಿತು ಅಪಪ್ರಚಾರ ಮಾಡಲು ಬ್ರಿಟಿಷ್ ದಾಖಲೆಗಳನ್ನು ಬಳಸಿಕೊಳ್ಳುತ್ತಿದೆ. ಆ ಮೂಲಕ ಆರೆಸ್ಸೆಸ್ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಸ್ವಾತಂತ್ರ ಹೋರಾಟಗಾರರನ್ನು ಅವಹೇಳನ ಮಾಡುವಂತಹ ಕೀಳುಮಟ್ಟಕ್ಕೆ ಇಳಿಯಲಿದೆ ಎಂಬುದು ಸಾಬೀತು ಪಡಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಮೈಸೂರಿನ ಹುಲಿ ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಭಗತ್‌ ಸಿಂಗ್ ಸೇರಿದಂತೆ ಸಾವಿರಾರು ಸ್ವಾತಂತ್ರ ಹೋರಾಟಗಾರರನ್ನು ಬ್ರಿಟಿಷರು ತಮ್ಮ ದಾಖಲೆಗಳಲ್ಲಿ ಲೂಟಿಕೋರರು, ದುಷ್ಟರು ಎಂದೇ ಬಿಂಬಿಸಿದ್ದಾರೆ. ಹೀಗಾಗಿ ನಿಜವಾದ ದೇಶಪ್ರೇಮಿಗಳು ಬ್ರಿಟಿಷರ ದಾಖಲೆಗಳನ್ನು ಪರಿಗಣಿಸುವುದಿಲ್ಲ. ಆದರೆ, ಕೋಮುವಾದಿಗಳಾದ ಆರೆಸ್ಸೆಸ್ ಉದ್ದೇಶಪೂರ್ವಕವಾಗಿ ಟಿಪ್ಪುವಿನ ಕುರಿತು ಅವಹೇಳನ ಮಾಡಲು ಬ್ರಿಟಿಷ್ ದಾಖಲೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದರು.

ಸಂಘಪರಿವಾರ ಟಿಪ್ಪು ಸುಲ್ತಾನ್ ಮತಾಂತರ ಮಾಡಿದ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಒಂದು ವೇಳೆ ಮತಾಂತರ ಮಾಡಿದ್ದರೆ ಮೈಸೂರು, ಶ್ರೀರಂಗಪಟ್ಟಣ, ಮಂಡ್ಯದಲ್ಲಿ ದೇವಸ್ಥಾನಕ್ಕಿಂತ ಮಸೀದಿಗಳೇ ಹೆಚ್ಚಾಗಿರಬೇಕಾಗಿತ್ತು. ಆದರೆ, ಟಿಪ್ಪು ತನ್ನ ರಾಜಧಾನಿಯಲ್ಲಿಯೇ ಇದ್ದ ಶ್ರೀರಂಗಪಟ್ಟಣದ ಶ್ರೀರಂಗನಾಥನ ದೇವಸ್ಥಾನ, ನಂಜನಗೂಡಿನ ನಂಜುಂಡೇಶ್ವರ ಸೇರಿದಂತೆ ಹತ್ತಾರು ದೇವಸ್ಥಾನಗಳಿಗೆ ದೇಣಿಗೆಗಳನ್ನು ನೀಡಿದ್ದಾನೆ. ಹಾಗೂ ಟಿಪ್ಪುವಿನ ಕಾಲದಲ್ಲಿಯೇ ನೂರಾರು ದೇವಸ್ಥಾನಗಳು ನಿರ್ಮಾಣವಾಗಿವೆ ಎಂದರು.

ಒಬ್ಬ ರಾಜನಾಗಿ ಟಿಪ್ಪು ತನ್ನ ಸಾಮ್ರಾಜ್ಯದ ವಿಸ್ತರಣೆಗಾಗಿ ಪಾಳೇಗಾರರ ವಿರುದ್ಧ ಯುದ್ಧ ಮಾಡಿದ್ದಾನೆ. ವೀರ ಯೋಧನೊಬ್ಬ ಶತ್ರುಗಳ ಮುಂದೆ ಮಂಡಿಯೂರಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಅಪ್ರತಿಮ ವೀರನಾಗಿದ್ದ ಟಿಪ್ಪು ಪಾಳೇಗಾರರ ವಿರುದ್ಧ ಯುದ್ಧ ಮಾಡಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದಾನೆ. ಇದನ್ನು ಕ್ರೂರತನ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಜಮೀನ್ದಾರರ ಬಳಿಯಿದ್ದ ಹೆಚ್ಚುವರಿ ಭೂಮಿಯನ್ನು ಕಿತ್ತು ಬಡವರಿಗೆ ಹಂಚಿದ. ಬಂಜರು ಭೂಮಿಯಲ್ಲಿ ಕೃಷಿ ಮಾಡುವವರಿಗೆ ತೆರಿಗೆ ವಿನಾಯಿತಿ ಘೋಷಿಸಿದ. ಜನತೆ ತಮ್ಮ ಖಾಸಗಿ ಜಮೀನು ಹೊಂದಲು ಮುಕ್ತ ಅವಕಾಶ ಮಾಡಿಕೊಟ್ಟ. ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ಸಿಗುವಂತೆ ಮಾಡಿದ. ಹೀಗೆ ಟಿಪ್ಪುವನ್ನು ಕೊಂಡಾಡುವ ಜನಪದ ಹಾಡುಗಳು ಮಂಡ್ಯ, ಮೈಸೂರು ಭಾಗದಲ್ಲಿ ಜನಜನಿತವಾಗಿವೆ. ಇದೇ ಟಿಪ್ಪುವಿನ ನಿಜವಾದ ಇತಿಹಾಸವೆಂದು ಅವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ದಸಂಸ(ಭೀಮವಾದ) ಮುಖಂಡರಾದ ಪರಶುರಾಮ್ ನೀಲನಾಯಕ್, ಆರ್.ಮೋಹನ್‌ರಾಜ್ ಹಾಗೂ ಎಸ್‌ಡಿಪಿಐ ಮುಖಂಡ ಅನ್ವರ್ ಮತ್ತಿತರರಿದ್ದರು.

ಜೈನ ಧರ್ಮೀಯನಾಗಿದ್ದ ಹೊಯ್ಸಳ ರಾಜ ವಿಷ್ಣುವರ್ಧನ ವೈಷ್ಣವ ಮತಕ್ಕೆ ಮತಾಂತರ ಆಗಿ, ಜೈನ ಮುನಿಗಳನ್ನು ವೈಷ್ಣವ ಮತಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ. ಇದಕ್ಕೆ ಒಪ್ಪದ ಸುಮಾರು 700ಕ್ಕೂ ಹೆಚ್ಚು ಜೈನ ಮುನಿಗಳನ್ನು ಶಿರಚ್ಛೇಧ ಮಾಡಿರುವುದರ ಕುರಿತು ಇತಿಹಾಸದ ದಾಖಲೆಗಳಲ್ಲಿವೆ. ಹೀಗೆ ಇತಿಹಾಸದಲ್ಲಿ ಮತಾಂತರಕ್ಕಾಗಿ ಹಲ್ಲೆ, ಕೊಲೆಗಳು ನಡೆದಿವೆ.
-ಬಂಜಗೆರೆ ಜಯಪ್ರಕಾಶ್ ಪ್ರಗತಿಪರ ಚಿಂತಕ

ತಮಿಳು ಮೂಲದವರಾದ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರನ್ನು ಕನ್ನಡದ ಆಸ್ತಿ ಎನ್ನುತ್ತೇವೆ. ಆದರೆ, ಕನ್ನಡ ನಾಡಿನಲ್ಲಿಯೇ ಹುಟ್ಟಿ ರಾಜನಾಗಿ ಮೆರೆದು, ದೀನ ದಲಿತರ, ಬಡವರ, ಮಹಿಳೆಯರ ಪರವಾಗಿ ಹಾಗೂ ಬ್ರಿಟಿಷರ ವಿರುದ್ಧವಾಗಿ ಆಳ್ವಿಕೆ ನಡೆಸಿದ ವೀರ ಯೋಧ ಟಿಪ್ಪುವನ್ನು ದೇಶ ದ್ರೋಹಿ ಎಂದು ಅಪಪ್ರಚಾರ ಮಾಡುತ್ತಿರುವುದು ವಿಪರ್ಯಾಸದ ಸಂಗತಿ.
-ಮೋಹನ್‌ರಾಜ್, ದಸಂಸ(ಭೀಮವಾದ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News