×
Ad

ಗುರುತಿಸಿಕೊಳ್ಳಬೇಕೆಂಬ ತಹತಹವೇ ನನ್ನ ಬೆಳವಣಿಗೆಗೆ ಪ್ರೇರಣೆ: ಬರಗೂರು ರಾಮಚಂದ್ರಪ್ಪ

Update: 2017-11-09 21:41 IST

ಬೆಂಗಳೂರು, ನ.9: ಬಾಲ್ಯದಲ್ಲಿ ತನ್ನೂರು ಬರಗೂರಿನ ಜನತೆಯಲ್ಲಿ ನಾನೊಬ್ಬ ಒಳ್ಳೆಯ ಓದುಗನೆಂದು ಗುರುತಿಸಿಕೊಳ್ಳಬೇಕೆಂಬ ತಹತಹವೇ ನನ್ನ ಬೆಳವಣೆಗೆಗೆ ಮೂಲ ಪ್ರೇರಣೆಯಾಯಿತು ಎಂದು ಹಿರಿಯ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಗುರುವಾರ ವಾರ್ತಾ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ನನ್ನೂರಿನ ಜನ ನನ್ನನ್ನು ಓದುವ ಹುಡುಗ ಎಂದುಕೊಳ್ಳಲಿ ಎಂದು ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೇ ‘ಜೈಮಿನಿ ಭಾರತ’ ಗ್ರಂಥವನ್ನು ಕಂಕಳಿನಲ್ಲಿಡಿದು ಊರಿನ ಬೀದಿ, ಬೀದಿ ಓಡಾಡಿದ್ದೆ ಎಂದು ಸ್ಮರಿಸಿಕೊಂಡರು.

ಭಾರತದಂತಹ ಜಾತಿ ಮೂಲ ಸಮಾಜದಲ್ಲಿ ಯಾವುದೇ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಬೇಕಾದರೆ ಪ್ರತಿಭೆಗಿಂತ ಜಾತಿ ಮತ್ತು ಹಣವೇ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ನನಗೆ ಜಾತಿ ಬಲವೂ ಇಲ್ಲ, ಹಣ ಬಲವೂ ಇಲ್ಲವಾಗಿದೆ. ಹೀಗಾಗಿ ಓದುವುದೊಂದೇ ನಾನು ಗುರುತಿಸಿಕೊಳ್ಳುವಿಕೆಗೆ ಇದ್ದ ಏಕೈಕ ಅಸ್ತ್ರವಾಗಿತ್ತು. ಹೀಗಾಗಿ ಓದುವುದು, ಬರೆಯುವುದು ಹಾಗೂ ಚಿಂತಿಸುವುದು ನನ್ನ ಬದುಕೇ ಆಗಿ ಹೋಗಿದೆ ಎಂದು ಅವರು ತಮ್ಮ ಬದುಕಿನ ಬಗೆಯನ್ನು ವಿವರಿಸಿದರು.

ಕಂಡಕ್ಟರ್ ಕನಸು ಕಂಡಿದ್ದೆ: ಮನೆಯಲ್ಲಿ ಆರ್ಥಿಕ ಸಂಕಷ್ಟ ಇದಿದ್ದರಿಂದ ನನ್ನ ತಂದೆ ನಮ್ಮನ್ನು ಪಿಯುಸಿ ನಂತರ ಯಾವುದಾದರು ಕೆಲಸಕ್ಕೆ ಸೇರಿಸಬೇಕೆಂದು ಯೋಚಿಸುತ್ತಿದ್ದರು. ಹೀಗಾಗಿ ನಾನು ಸರಕಾರಿ ಬಸ್ಸಿನ ಕಂಡಕ್ಟರ್ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಓದು ಮತ್ತು ಬರವಣಿಗೆಯ ಹವ್ಯಾಸವೇ ಬಿಎ, ಎಂಎವರೆಗೂ ತಲುಪವಂತೆ ಮಾಡಿತು ಎಂದು ಅವರು ಹೇಳಿದರು.

ನನಗೆ ಓದುವ ಜೊತೆ ಜತೆಗೆ ಸಿನೆಮಾ ಕ್ಷೇತ್ರದ ಕಡೆಗೂ ಹೆಚ್ಚಿನ ಆಸಕ್ತಿಯಿತ್ತು. ಹೀಗಾಗಿ ಅಧ್ಯಾಪನದ ಜೊತೆಗೆ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದೆ. ಆದರೆ, ಸಿನಿಮಾದ ನೆಪದಲ್ಲಿ ಒಂದು ದಿನವೂ ತರಗತಿಗೆ ಹೋಗದೆ ಇರುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡಿದ ನಂತರವೇ ಸಿನೆಮಾ ಕಡೆಗೆ ಆಲೋಚಿಸುತ್ತಿದ್ದೆ ಎಂದರು.

ನನ್ನ ಬೆಳವಣಿಗೆಯಲ್ಲಿ ನನ್ನೂರಿನ ಜನತೆ, ನಾನು ಕಲಿಸಿದ ವಿದ್ಯಾರ್ಥಿಗಳು, ರಾಜ್ಯದ ಹಿರಿಯ ಬಂಡಾಯ ಸಾಹಿತಿಗಳು, ಸಿನೆಮಾ ನಟರು, ನಿರ್ದೇಶಕರು ಹಾಗೂ ಬಹುಮುಖ್ಯವಾಗಿ ಸಾಮಾನ್ಯ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಜನತೆಯ ಜೊತೆ ಜೊತೆಗೆ ಬೆಳೆಯುತ್ತಿದ್ದೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಹರ್ಷ, ಚಲನಚಿತ್ರ ಅಕಾಡಮಿಯ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಅಕಾಡೆಮಿಯ ರಿಜಿಸ್ಟ್ರಾರ್ ದಿನೇಶ್, ಹಿರಿಯ ಪತ್ರಕರ್ತರಾದ ಚ.ಹ.ರಘುನಾಥ್, ಗಂಗಾಧರ ಮೊದಲಿಯಾರ್, ಜೋಗಿ, ಹಿರಿಯ ಕವಯತ್ರಿ ಎಚ್.ಎಲ್.ಪುಷ್ಪಾ, ವಿಮರ್ಶಕ ಬೈರಮಂಗಲ ರಾಮೇಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News