×
Ad

ಕೇಂದ್ರದಲ್ಲಿರುವುದು ಅಮಿತ್‌ಶಾರ ಬ್ಲಾಕ್‌ಮೇಲ್ ಸರಕಾರ: ದಿನೇಶ್‌ಗುಂಡೂರಾವ್

Update: 2017-11-09 21:51 IST

ಬೆಂಗಳೂರು, ನ.9: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಬ್ಲಾಕ್‌ಮೇಲ್ ಮಾಡಿಸಿ ನಾಯಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಕೇಂದ್ರದಲ್ಲಿ ಈಗಿರುವುದು ವಾಜಪೇಯಿ ಸರಕಾರವಲ್ಲ. ಇದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬ್ಲಾಕ್‌ಮೇಲ್ ಸರಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆರೋಪಿಸಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಂಬಂಧ ಬೆಂಗಳೂರಿನ ಸಚಿವರು, ಶಾಸಕರು ಹಾಗೂ ಬಿಬಿಎಂಪಿ ಸದಸ್ಯರೊಂದಿಗೆ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆದಾಯ ತೆರಿಗೆ ಇಲಾಖೆಯು ಬಿಜೆಪಿ ಪಕ್ಷದ ಅಂಗವಾಗಿ ನಡೆದುಕೊಳ್ಳುತ್ತಿದೆ. ಕೇಂದ್ರದಲ್ಲಿ ಯಾವ ಸರಕಾರ ಇದ್ದಾಗಲೂ ಹೀಗೆ ಆಗಿರಲಿಲ್ಲ. ಕೆಟ್ಟ ಹಾಗೂ ನೀಚ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯ ಮಗಳ ಮದುವೆ ದಿನ ಸಿಬಿಐ ಅಧಿಕಾರಿಗಳು ಅಲ್ಲಿನ ಮುಖ್ಯಮಂತ್ರಿಯನ್ನು ವಶಕ್ಕೆ ತೆಗೆದುಕೊಂಡು ಕರೆದೊಯ್ಯುತ್ತಾರೆ. ವಿಚಾರಣೆ ನೆಪದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಅವರ ತಾಯಿ, ಪತ್ನಿ ಹಾಗೂ ಮಗಳನ್ನು ಕರೆದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಶಿವಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಅವರನ್ನು ಬಿಜೆಪಿಗೆ ಸೇರುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ದಿನೇಶ್‌ಗುಂಡೂರಾವ್ ಸಮರ್ಥಿಸಿಕೊಂಡರು.

ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಅದಕ್ಕಾಗಿ, ಅಧಿಕಾರಿಗಳ ಮೂಲಕ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಹೇಳಿರುವುದು ಗಂಭೀರ ವಿಚಾರ ಎಂದರು.

ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬಂದರೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿ ನನ್ನ ಮಾತು ನಡೆಯುತ್ತದೆ ಎಂದು ಈಶ್ವರಪ್ಪ ಅಂದುಕೊಂಡಿರಬಹುದು. ಆದರೆ, ರಾಯಣ್ಣ ಬ್ರಿಗೇಡ್ ಕಟ್ಟಿ ಸೋತಿರುವ ಅವರ ಮಾತಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದು ವ್ಯಂಗ್ಯವಾಡಿದರು.

ಕೆಲ ಸಚಿವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಅನ್ನೋದು ಕೇವಲ ಊಹಾಪೋಹ. ಯಾವ ಸಚಿವರೂ ಬಿಜೆಪಿಗೆ ಹೋಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಗೊಂದಲಗಳನ್ನು ಬಿಜೆಪಿಯವರು ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ನಾವೆಲ್ಲರೂ ಒಟ್ಟಾಗಿ ಇದ್ದೇವೆ. ಒಟ್ಟಾಗಿಯೇ ಚುನಾವಣೆಯನ್ನು ಎದುರಿಸುತ್ತೇವೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ಬಿಜೆಪಿಯವರಿಗೆ ಯಾರೂ ಸಿಗಲಿಲ್ಲ. ಅದಕ್ಕಾಗಿ ಹಾದಿ ಬೀದಿಯಲ್ಲಿ ಹೋಗಿ ಬರುವವರನ್ನು ತಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಬಿಬಿಎಂಪಿ ಸ್ಥಾಯಿ ಸಮಿತಿ: ಬಿಬಿಎಂಪಿ ಸ್ಥಾಯಿ ಸಮಿತಿಗಳ ಪೈಕಿ ಜೆಡಿಎಸ್‌ಗೆ ಆರ್ಥಿಕ, ತೋಟಗಾರಿಕೆ ಮತ್ತು ವಾರ್ಡ್ ಕಾಮಗಾರಿಗಳ ಸಮಿತಿಗಳನ್ನು ನೀಡಲಾಗಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಟಿಪ್ಪುಸುಲ್ತಾನ್ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿದೆ. ಬಿಜೆಪಿಯವರಿಗೆ ನಮ್ಮ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆಲ್ಲ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಲ್ಲ. ಪ್ರತಿಭಟನೆಗಳಿಗೆ ಅವಕಾಶವಿದೆ. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದರು.

ಬಿಜೆಪಿಗೆ ಸ್ವಂತ ಶಕ್ತಿ ಮೇಲೆ ಚುನಾವಣೆ ಗೆಲ್ಲುವ ಶಕ್ತಿ ಇಲ್ಲ. ಅದಕ್ಕಾಗಿ, ಅಧಿಕಾರಿಗಳ ಮೂಲಕ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
-ದಿನೇಶ್ ಗೂಂಡೂರಾವ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News