ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆಗೆ ಸಂಪುಟ ಸಮ್ಮತಿ
ಬೆಂಗಳೂರು, ನ.9: ನದಿ ಮೂಲದ ಮರಳು ಅಲಭ್ಯತೆಯಿಂದಾಗಿ ರಾಜ್ಯದಲ್ಲಿ ಉದ್ಭವಿಸಿರುವ ಮರಳು ಕೊರತೆಯನ್ನು ಸರಿದೂಗಿಸುವ ಸಲುವಾಗಿ ಉತ್ಪಾದನಾ ಮರಳು (ಎಂ-ಸ್ಯಾಂಡ್) ನೀತಿಯನ್ನು ಸರಳೀಕರಿಸಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿದ್ದ ಕಾರ್ಯಪಡೆಯ ಬದಲಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಕಾರ್ಯಪಡೆ ರಚಿಸಲು ಸಚಿವ ಸಂಪುಟ ಸಮ್ಮತಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಂದೆಡೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿನ ಕಾರ್ಯಪಡೆಗಳ ಮುಂದೆ ಸಾವಿರಾರು ಅರ್ಜಿಗಳು ಬಾಕಿ ಇವೆ. ಮತ್ತೊಂದೆಡೆ ಸಾಂಪ್ರದಾಯಿಕವಾಗಿ ನೂರಾರು ವರ್ಷಗಳಿಂದ ಮರಳು ಸಂಘಗಳನ್ನು ಮಾಡಿ ಮಾರಾಟ ಮಾಡುವ ಅನೇಕ ಜನಾಂಗದವರ ನೆರವಿಗೆ ಸರಕಾರ ಧಾವಿಸಿದೆ ಎಂದು ಅವರು ಹೇಳಿದರು.
ಆದಕಾರಣ, ನಿಯಮಾವಳಿಗೆ ಅಗತ್ಯ ತಿದ್ದುಪಡಿ ಮಾಡಿ ಸಾಂಪ್ರದಾಯಿಕವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಪರಿಶಿಷ್ಟ ಜಾತಿಯ ಜನರಿಗೆ ಗುತ್ತಿಗೆ ನೀಡಲು ಕಗ್ಗಂಟಾಗಿರುವ ನಿಯಮಾವಳಿಗಳನ್ನು ಸರಳೀಕರಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಇದರಲ್ಲಿ ಕರಾವಳಿಗೆ ಜಿಲ್ಲೆಗಳ ಮರಳು ನೀತಿ ಸೇರಿದಂತೆ ಎಲ್ಲ್ಲ ಮರಳು ವಹಿವಾಟು ಹಾಗೂ ವಿದೇಶದಿಂದ ಆಮದು ಮಾಡಿಕೊಳ್ಳುವ ಮರಳು ವ್ಯಾಪಾರಕ್ಕೂ ನೂತನ ನಿಯಮದಲ್ಲಿ ಮಾರ್ಪಾಡಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಯಚಂದ್ರ ವಿವರಿಸಿದರು.