×
Ad

ದೂರುದಾರ, ಪ್ರತ್ಯಕ್ಷದರ್ಶಿಗೆ ಆರೋಪಿ ಕರೆ ಮಾಡಿರುವ ವಿವರ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಆದೇಶ

Update: 2017-11-09 22:12 IST

ಬೆಂಗಳೂರು, ನ.9: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮಹಮ್ಮದ್ ದಿವಾನ್ ಅಲಿ ಕೊಲೆ ಪ್ರಕರಣದ ದೂರುದಾರ ಮತ್ತು ಪ್ರತ್ಯಕ್ಷದರ್ಶಿಗೆ ಪ್ರಮುಖ ಆರೋಪಿ ತನ್ವೀರ್ ಅಹ್ಮದ್ ಜೈಲಿನಿಂದ ಕರೆ ಮಾಡಿ ನ್ಯಾಯಾಲಯದಲ್ಲಿ ಸಾಕ್ಷ ನುಡಿಯದಂತೆ ಬೆದರಿಸಿದ ಆರೋಪ ಸಂಬಂಧ ಮೊಬೈಲ್ ಕರೆಯ ವಿವರ ಒದಗಿಸುವಂತೆ ಬನಶಂಕರಿ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ದಿವಾನ್ ಅಲಿ ಕೊಲೆ ಪ್ರಕರಣದಲ್ಲಿನ ದೂರುದಾರ ಕಲೀಮ್ ವುಲ್ಲಾ ಖಾನ್ ಮತ್ತು ಪ್ರತ್ಯಕ್ಷ ದರ್ಶಿ ಉಮರ್‌ಗೆ ಮೊಬೈಲ್ ಮೂಲಕ ಬೆದರಿಕೆ ಹಾಕಿದ ಆರೋಪ ಸಂಬಂಧ ತಮ್ಮ ವಿರುದ್ಧ ನಗರದ 8ನೆ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರೋಪಿ ತನ್ವೀರ್ ಅಹ್ಮದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಪೊಲೀಸರಿಗೆ ಈ ನಿರ್ದೇಶನ ನೀಡಿತು. ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ದೂರುದಾರನಿಗೆ ತನ್ವೀರ್ ಅಹ್ಮದ್ ಯಾವುದೇ ಬೆದರಿಕೆ ಹಾಕಿಲ್ಲ. ಪ್ರಕರಣಕ್ಕೂ ಅರ್ಜಿದಾರನಿಗೂ ಸಂಬಂಧ ಇಲ್ಲವಾಗಿದ್ದು, ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.

ಇದರಿಂದ ನ್ಯಾಯಪೀಠವು ಅರ್ಜಿದಾರನ ವಿರುದ್ಧ ಪ್ರಕರಣದ ಕುರಿತು ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಇದನ್ನು ಆಕ್ಷೇಪಿಸಿದ ಸರಕಾರಿ ವಕೀಲ ರಾಚಯ್ಯ ಅವರು, ಅರ್ಜಿದಾರ ತನ್ವೀರ್ ಅಹ್ಮದ್ ವಿರುದ್ಧ ಮಾಜಿ ಕಾರ್ಪೊರೇಟರ್ ದಿವಾನ್ ಅಲಿ ಕೊಲೆ ಆರೋಪವಿದೆ. ಇದು ಅತ್ಯಂತ ಸಂಚಲನ ಉಂಟು ಮಾಡಿದ್ದ ಪ್ರಕರಣವಾಗಿದೆ. ಆರೋಪಿಯು ದೂರುದಾರ ಹಾಗೂ ಪ್ರತ್ಯಕ್ಷದರ್ಶಿಗೆ ಜೈಲಿನಿಂದ ಮೊಬೈಲ್ ಕರೆ ಮಾಡಿ ಕೊಲೆ ಪ್ರಕರಣದಲ್ಲಿ ಅಧೀನ ನ್ಯಾಯಾಲಯದ ಮುಂದೆ ಸಾಕ್ಷ ನುಡಿಯದಂತೆ ಬೆದರಿಕೆ ಹಾಕಿದ್ದಾರೆ. ಮೊಬೈಲ್ ಸಂಭಾಷಣೆಯ ವಿವರ ಪೊಲೀಸರ ಬಳಿ ಇದೆ. ಹೀಗಾಗಿ, ತಡೆಯಾಜ್ಞೆ ನೀಡಬಾರದು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಹಾಗಿದ್ದರೆ ಆರೋಪಿ ಹಾಗೂ ದೂರುದಾರರ ನಡುವಿನ ಮೊಬೈಲ್ ಸಂಭಾಷಣೆಯ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸುವಂತೆ ಸೂಚಿಸಿದರು. ಜತೆಗೆ, ಪೊಲೀಸರು ಯಾವಾಗಲೂ ಮೊಬೈಲ್ ಸಂಭಾಷಣೆ ಇರುವುದಾಗಿ ತಿಳಿಸುತ್ತಾರೆ ಹೊರತು ಅದರ ವಿವರಗಳನ್ನು ಕೊರ್ಟ್‌ಗೆ ಸಲ್ಲಿಸುವುದಿಲ್ಲ. ಅನೇಕ ಪ್ರಕರಣಗಳಲ್ಲಿ ಇದೇ ರೀತಿ ನಡೆದುಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿ, ಅರ್ಜಿದಾರರನ ವಿರುದ್ಧ ಅಧೀನ ನ್ಯಾಯಾಲಯಕ್ಕೆ ನೀಡಿದ್ದ ತಡೆಯಾಜ್ಞೆ ಆದೇಶ ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News