ನಿಮಗೆ ‘ನಾನ್’ ಇಷ್ಟವೇ? ಇಲ್ಲಿದೆ ಮನೆಯಲ್ಲಿಯೇ ತವಾದ ಮೇಲೆ ‘ನಾನ್’ ತಯಾರಿಸುವ ವಿಧಾನ

Update: 2017-11-10 11:50 GMT

ನಾನ್ ಉತ್ತರ ಭಾರತದ ರೊಟ್ಟಿಯಾಗಿದ್ದು, ಅದನ್ನು ಸಾಮಾನ್ಯವಾಗಿ ಆವೆಮಣ್ಣಿನ ತಂದೂರ್‌ನಲ್ಲಿ ತಯಾರಿಸಲಾಗುತ್ತದೆ. ನಾನ್ ರುಚಿಯ ಮಹಿಮೆ ಎಷ್ಟಿದೆಯೆಂದರೆ ಅದೀಗ ದಕ್ಷಿಣ ಭಾರತೀಯರಿಗೂ ಪ್ರಿಯವಾಗಿದೆ. ನಾನ್ ತಯಾರಿಸಲು ತಂದೂರ್‌ವೇ ಆಗಬೇಕು ಎಂಬ ಪೂರ್ವಗ್ರಹವನ್ನು ಬಿಟ್ಟು ಮನೆಯಲ್ಲಿಯೇ ಸಾಮಾನ್ಯ ತವಾ ಬಳಸಿ ಅದನ್ನು ತಯಾರಿಸುವುದು ಹೇಗೆ ಎಂದು ನೋಡೋಣ.

ಪ್ರಮಾಣ: ನಾಲ್ವರಿಗೆ ಸಾಲುವಷ್ಟು

ಅಗತ್ಯ ಸಾಮಗ್ರಿಗಳು: ಮೈದಾ 1 ಕಪ್, ಸಕ್ಕರೆ ಮುಕ್ಕಾಲು ಚಮಚ, ಉಪ್ಪು ಅರ್ಧ ಚಮಚ, ಬೇಕಿಂಗ್ ಪೌಡರ್ ಅರ್ಧ ಚಮಚ, ಎಣ್ಣೆ ಒಂದು ಚಮಚ, ಮೊಸರು ಅರ್ಧ ಕಪ್, ಬಿಸಿನೀರು ಒಂದೂವರೆ ಚಮಚ, ಕಪ್ಪುಜೀರಿಗೆ ಸ್ವಲ್ಪ, ತುಪ್ಪ

ತಯಾರಿಸುವ ವಿಧಾನ:

ಬೌಲ್‌ವೊಂದರಲ್ಲಿ ಮೈದಾ ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ಉಪ್ಪು ಸೇರಿಸಿ. ಬಳಿಕ ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಎಣ್ಣೆಯನ್ನು ಹಾಕಿ ಮೊಸರು ಸೇರಿಸಿ ಕೈಗಳಿಂದ ಚೆನ್ನಾಗಿ ಮಿಶ್ರಗೊಳಿಸಿ. ಈಗ ಬಿಸಿನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತ ಮಿಶ್ರಣವನ್ನು ನಾದಿ ಮೃದುವಾದ ಕಣಕವನ್ನು ಸಿದ್ಧಗೊಳಿಸಿ. ಬೌಲ್‌ನ್ನು ಮುಚ್ಚಿ ಮೂರುಗಂಟೆಗಳ ಕಾಲ ಹಾಗೆಯೇ ಇರಿಸಿ. ಬಳಿಕ ಕಣಕವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿಸಿ ಚಪಾತಿ ಮಣೆಯ ಮೇಲೆ ಉದ್ದ ಅಂಡಾಕಾರದ ರೊಟ್ಟಿಗಳನ್ನು ತಯಾರಿಸಿ. ಲಟ್ಟಣಿಗೆ ಓಡಿಸುವಾಗ ಸ್ವಲ್ಪ ಕಪ್ಪು ಜೀರಿಗೆಯನ್ನು ಹಾಕಿ.

ಈಗ ಗ್ಯಾಸ್ ಸ್ಟವ್‌ನ ಮೇಲೆ ತವಾ ಇಟ್ಟು ಕಾಯಿಸಿ. ಹಸಿ ನಾನ್ ರೊಟ್ಟಿಯ ಒಂದು ಪಕ್ಕಕ್ಕೆ ನೀರನ್ನು ಹಚ್ಚಿ, ಆ ಭಾಗವನ್ನು ಕೆಳಮುಖವಾಗಿಸಿ ತವಾದ ಮೇಲೆ ಹಾಕಿ. ಈಗ ನಾನ್ ಬೆಂಕಿಯ ನೇರ ಸಂಪರ್ಕಕ್ಕೆ ಬರುವಂತೆ ತವಾವನ್ನು ಉಲ್ಟಾ ಹಿಡಿಯಿರಿ. ನಾನ್ ಲಘು ಕಂದು ಬಣ್ಣಕ್ಕೆ ತಿರುಗುವವರೆಗೆ ಸುಮಾರು ಒಂದು ನಿಮಿಷ ಅದನ್ನು ಕಾಯಿಸಿ. ಬಳಿಕ ತವಾವನ್ನು ತಿರುಗಿಸಿ ಮೊದಲಿನಂತೆ ಸ್ಟವ್‌ನ ಮೇಲಿಡಿ. ನಾನ್ ಅನ್ನು ಜಾಗರೂಕತೆಯಿಂದ ತವಾದಿಂದ ಮೇಲಕ್ಕೆಬ್ಬಿಸಿ. ಉದ್ದ ಇಕ್ಕಳದಲ್ಲಿ ಈ ನಾನ್ ಹಿಡಿದು ನೇರವಾಗಿ ಬೆಂಕಿಗೆ ಹಿಡಿಯಿರಿ. ಎರಡೂ ಬದಿಗಳು ಸರಿಯಾಗಿ ಬೇಯುವಂತೆ ಅದನ್ನು ಕೆಲವು ಬಾರಿ ಹೊರಳಾಡಿಸಿ. ಇದಕ್ಕೆ ಚೂರು ತುಪ್ಪ ಸವರಿದರೆ ನಿಮ್ಮ ಇಷ್ಟದ ನಾನ್ ಸಿದ್ಧ. ಬಿಸಿಬಿಸಿಯಾಗಿರುವಾಗಲೇ ಪನ್ನೀರ್ ಕ್ಯಾಪ್ಸಿಕಂ ಸಬ್ಜಿ, ಭಿಂಡಿ ಮಸಾಲಾ, ಆಲೂ ಗೋಬಿಯಂತಹ ಸೂಕ್ತ ವ್ಯಂಜನಗಳೊಂದಿಗೆ ತಿಂದರೆ ಆ ರುಚಿಯೇ ಬೇರೆ.

ಅಂದ ಹಾಗೆ ತವಾ ನಾನ್ ತುಂಬ ದಪ್ಪಗೆ ಅಥವಾ ತುಂಬ ತೆಳ್ಳಗೆ ಇರಬಾರದು. ಅದು ಕಾಲು ಇಂಚು ದಪ್ಪಗಿದ್ದರೆ ಉತ್ತಮ. ಅಗತ್ಯವಾದರೆ ಹಸಿ ನಾನ್ ತವಾಗೆ ಸರಿಯಾಗಿ ಅಂಟಿಕೊಳ್ಳಲು ಅದನ್ನು ಸ್ವಲ್ಪ ಒತ್ತಬಹುದು. ಒಳ್ಳೆಯ ಸ್ವಾದಕ್ಕಾಗಿ ಬಟರ್ ಅಥವಾ ಗಾರ್ಲಿಕ್ ಬಟರ್‌ನ್ನೂ ನಾನ್‌ಗೆ ಸವರಬಹುದು.

ನೆನಪಿಡಿ,ಇಲ್ಲಿ ಇಂಡಕ್ಷನ್ ಸ್ಟವ್ ಉಪಯೋಗಕ್ಕೆ ಬರುವುದಿಲ್ಲ. ತವಾ ಕಬ್ಬಿಣದ್ದಾಗಿ ರಬೇಕು, ನಾನ್ ಸ್ಟಿಕ್ ತವಾ ಬಳಸಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News