ಜನತೆಯ ವಿಶ್ವಾಸ ಕಳೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳು: ಕುಮಾರಸ್ವಾಮಿ
ಬೆಂಗಳೂರು, ನ.10: ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಜನತೆ ರಾಷ್ಟ್ರೀಯ ಪಕ್ಷಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿ(ಜೆಪಿ ಭವನ)ಯಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದ ಜಿ.ಪಂ.ಸದಸ್ಯ ಎ.ಮಂಜುನಾಥ ಹಾಗೂ ಅವರ ಸಾವಿರಾರು ಬೆಂಬಲಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾನತಾಡಿದರು.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವ ವಿರೋಧ ಪಕ್ಷಗಳ ನಾಯಕರು, ಬಹಿರಂಗವಾಗಿ ಮಾತನಾಡುವುದು ಬೇರೆ. ಆದರೆ, ನಾಲ್ಕು ಗೋಡೆಗಳ ಮಧ್ಯೆ ಅವರು ಮಾತನಾಡುವಾಗ ಜೆಡಿಎಸ್‌ಗೆ ಸಿಗುತ್ತಿರುವ ಬೆಂಬಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಾರಿ ನಮ್ಮ ಪಕ್ಷದ ಗುರಿಯನ್ನು ಮುಟ್ಟುತ್ತೇವೆ. ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಸಾಂಕೇತಿಕವಾಗಿ ಮಂಜು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೇನೆ. ಮುಂದಿನ ತಿಂಗಳು ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಪಕ್ಷ ಸೇರಲಿದ್ದಾರೆ. ಇವತ್ತಿನಿಂದ ಮಂಜು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುವ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ ಎಂದರು.
ಟಿಪ್ಪುಜಯಂತಿ ಆಚರಣೆ: ಟಿಪ್ಪುಜಯಂತಿ ಆಚರಣೆಯಲ್ಲಿ ಸರಕಾರದ ಮೇಲೆ ಅನುಮಾನ ಬಂದಿದೆ. ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮಾಡಿ ಟಿಪ್ಪುಗೆ ಅಗೌರವ ಸೂಚಿಸುವ ಅಗತ್ಯವಿತ್ತಾ? ಟಿಪ್ಪುಜಯಂತಿ ಉತ್ಸವವನ್ನು ರದ್ದು ಮಾಡುವ ಮೂಲಕ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಕೂಡ ಅಗೌರವವನ್ನುಂಟು ಮಾಡುತ್ತಿದೆ. ಟಿಪ್ಪು ಹೆಸರನ್ನು ಮುಂದಿಟ್ಟುಕೊಂಡು ಮತಬ್ಯಾಂಕ್ ರಾಜಕೀಯ ಮಾಡಲು ಸರಕಾರ ಮುಂದಾಗಿದೆ ಎಂದು ಟೀಕಿಸಿದರು.
ಕೆ.ಸಿ.ವೇಣುಗೋಪಾಲ್ ವಿಚಾರ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸರಕಾರದ ಅಧಿಕೃತ ಪ್ರತಿನಿಧಿ ಅಲ್ಲ. ಸೋಲಾರ್ ಹಗರಣದಲ್ಲಿ ಕಳಂಕವನ್ನ ಹೊತ್ತಿರುವ ವ್ಯಕ್ತಿಯನ್ನು ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಕಾಂಗ್ರೆಸ್ ದುರ್ಗತಿಯ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ವೇಣುಗೋಪಾಲ್ ಅವರನ್ನು ವಾಪಸ್ ಕಳುಹಿಸಿ ಅಂತಾ ನಾನು ಹೇಳುವುದಿಲ್ಲ. ಅದರ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡಲಿ. ನಾನು ಕಳುಹಿಸಿ ಅಂತಾ ಹೇಳಿದರೆ ಕುಮಾರಸ್ವಾಮಿ ಅವರ ಸಲಹೆ ಬೇಕಿಲ್ಲ ಅಂತಾ ಸಿದ್ದರಾಮಯ್ಯ ಮಾತನಾಡುವುದು ಬೇಡ ಎಂದು ತಿಳಿಸಿದರು.
ಗ್ರಾಮ ವಾಸ್ತವ್ಯದ ಬಗ್ಗೆ ಪ್ರಮಾಣಪತ್ರ ಬೇಡ: ಮೊನ್ನೆ ದಲಿತರ ಮನೆಯಲ್ಲಿ ಇದ್ದ ಹಾಸಿಗೆ, ದಿಂಬು ಉಪಯೋಗಿಸಿದ್ದೇನೆ. ಕಮೋಡ್ ನನ್ನ ವಾಹನದಲ್ಲಿದೆ. ನನ್ನ ಗ್ರಾಮವಾಸ್ತವ್ಯ ನಕಲು ಮಾಡಲು ಸಿದ್ದರಾಮಯ್ಯ ತಮ್ಮ ಪಕ್ಷದ ಮುಖಂಡರಿಗೆ ಕಲಿಸಲಿಲ್ಲ. ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ನಾನು ಗ್ರಾಮವಾಸ್ತವ್ಯ ಮಾಡುತ್ತಿಲ್ಲ ಎಂದರು.
ಬಂಡಾಯ ಶಾಸಕರ ವಿರುದ್ಧ ನಾನು ಯಾವುದೆ ಕ್ರಮ ಕೈಗೊಳ್ಳಲ್ಲ, ಜನರೇ ಅವರ ಮೇಲೆ ಕ್ರಮಕೈಗೊಳ್ತಾರೆ. ಮಾಗಡಿಯಲ್ಲೂ ಯಾರೊಂದಿಗೂ ಹೊಂದಾಣಿಕೆ ಇಲ್ಲ, ಚನ್ನಪಟ್ಟಣದಲ್ಲೂ ಹೊಂದಾಣಿಕೆ ಇಲ್ಲ. ನಮ್ಮ ಪಕ್ಷ ಎಲ್ಲ ಕಡೆ ಬಲಿಷ್ಠವಾಗಿದೆ, ಬಲವನ್ನ ಹೊಂದಿದ್ದೇವೆ. ಬಿಜೆಪಿಗೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸವಿಲ್ಲ, ಆದುದರಿಂದ, ಅವರಿವರನ್ನ ಪಕ್ಷಕ್ಕೆ ಕರೆದುಕೊಂಡು ಹೋಗ್ತಿದ್ದಾರೆ. ಬೇಕಾದವರನ್ನ ಕರೆದುಕೊಂಡು ಹೋಗಲಿ, ಆಪರೇಷನ್ ಕಮಲ ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.