ವೇಣುಗೋಪಾಲ್ ವರ್ಚಸ್ಸನ್ನು ಕುಗ್ಗಿಸಲು ಬಿಜೆಪಿ ಷಡ್ಯಂತ್ರ: ಪರಮೇಶ್ವರ್
ಬೆಂಗಳೂರು, ನ.10: ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಸಿ.ವೇಣುಗೋಪಾಲ್‌ರ ವರ್ಚಸ್ಸನ್ನು ಕುಗ್ಗಿಸುವುದಕ್ಕಾಗಿಯೇ ಬಿಜೆಪಿ ನಾಯಕರು ಅವರ ವಿರುದ್ಧ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇರಳ ಮೂಲದ ವೇಣುಗೋಪಾಲ್ ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಾಗಿನಿಂದ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಹೊಸ ಹುರುಪು ಬಂದಿದೆ. ಇದನ್ನು ಸಹಿಸಲು ಸಾಧ್ಯವಾಗದ ರಾಜ್ಯ ಬಿಜೆಪಿ ನಾಯಕರು ಅವರ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕೇರಳ ರಾಜ್ಯದ ಸರಿತಾ ನಾಯರ್ ಅತ್ಯಾಚಾರ ಆರೋಪ ಪ್ರಕರಣವನ್ನು ಅಲ್ಲಿನ ಹೈಕೋರ್ಟ್ ರಾಜಕೀಯ ಪ್ರೇರಿತವಾದ ಪ್ರಕರಣವೆಂದು ಅಭಿಪ್ರಾಯಿಸಿದೆ. ಆದರೂ ಬಿಜೆಪಿ ನಾಯಕರು ರಾಜಕೀಯ ದುರುದ್ದೇಶದಿಂದ ವೇಣುಗೋಪಾಲ್‌ರ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ, ಇಂತಹ ಆರೋಪ ಮಾಡುವುದಕ್ಕೂ ಮೊದಲು ಬಿಜೆಪಿ ತನ್ನ ನಾಯಕರ ಅತ್ಯಾಚಾರ ಪ್ರಕರಣವನ್ನು ಮೆಲುಕು ಹಾಕಿಕೊಳ್ಳಲಿ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ಮೇಲೆ ಭ್ರಷ್ಟಾಚಾರ, ಲೈಂಗಿಕ ಪ್ರಕರಣಗಳು ಸಾಕಷ್ಟಿವೆ. ಆದರೆ, ಆ ಬಗ್ಗೆ ಕಾಂಗ್ರೆಸ್ ಬೀದಿ ರಂಪ ಮಾಡುವುದಿಲ್ಲ. ನಮ್ಮ ಸರಕಾರದ ಜನಪರ ಯೋಜನೆಗಳ ಕುರಿತು ಜನತೆಯ ಬಳಿ ಹಾಗೂ ಮಾಧ್ಯಮದವರ ಬಳಿ ಮಾತನಾಡಲು ಇಚ್ಛಿಸುತ್ತೇವೆ. ಬಿಜೆಪಿಯ ಪ್ರಣಾಳಿಕೆಯಲ್ಲಿ ಜನಪರ ಚಿಂತನೆಗಳಿಗೆ ಅವಕಾಶ ಇಲ್ಲದಿರುವುದರಿಂದ ವೈಯಕ್ತಿಕ ವಿಷಯಗಳ ಕುರಿತು ಮಾತನಾಡಿ ಕಾಲಹರಣ ಮಾಡುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ವ್ಯಂಗ್ಯವಾಡಿದರು.
ಕೆಲವು ಮಾಧ್ಯಮಗಳು ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಕಂದಕಗಳನ್ನು ಸೃಷ್ಟಿಸಲು ಸದಾ ಪ್ರಯತ್ನಿಸುತ್ತವೆ. ಆದರೆ, ಆಕಾಶ-ಭೂಮಿ ಒಂದಾದರೂ ನಮ್ಮಿಬ್ಬರ ಮಧ್ಯೆ ವೈಮನಸ್ಸು ಸೃಷ್ಟಿಸಲು ಸಾಧ್ಯವಿಲ್ಲ. ಮಾಧ್ಯಮಗಳು ಕಾಂಗ್ರೆಸ್ ನಾಯಕರ ಮಧ್ಯೆ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಲಿ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ