ಪರಿವರ್ತನಾ ಯಾತ್ರೆಯಿಂದ ಬಿಜೆಪಿಗೂ ಅನುಕೂಲವಿಲ್ಲ: ಡಾ.ಜಿ.ಪರಮೇಶ್ವರ್
ಬೆಂಗಳೂರು, ನ.10: ಸ್ಪಷ್ಟವಾದ ಉದ್ದೇಶವಿಲ್ಲದ ಬಿಜೆಪಿಯ ಪರಿವರ್ತನಾ ಯಾತ್ರೆಯಿಂದ ಬಿಜೆಪಿಗಾಗಲಿ, ಜನತೆಗಾಗಲಿ ಯಾವುದೇ ಲಾಭವಾಗುತ್ತಿಲ್ಲ. ಯಾತ್ರೆಯ ಸಂಪೂರ್ಣ ಸಮಯವನ್ನು ಕೇವಲ ಕಾಂಗ್ರೆಸ್ ವಿರುದ್ಧದ ಆರೋಪಕ್ಕೆ ಮೀಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಪರಿವರ್ತನಾ ಯಾತ್ರೆ ಜನತೆಯ ಸಮಸ್ಯೆಯ ಕುರಿತಾಗಲಿ, ಬಿಜೆಪಿ ಸಿದ್ಧಾಂತವಾಗಲಿ ಯಾವೊಂದು ಪ್ರಚಾರವಾಗುತ್ತಿಲ್ಲ. ಕೇವಲ ಕಾಂಗ್ರೆಸನ್ನು ತೆಗಳುತ್ತಾ ಸಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಭಾಷಣಗಳಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಮಾತನಾಡುತ್ತಾರೆ. ಆದರೆ, ಜನತೆಯ ಮುಂದೆ ಬಿಜೆಪಿಗೆ ಯಾಕೆ ಮತ ಹಾಕಬೇಕು ಎಂಬುದಕ್ಕೆ ಸ್ಪಷ್ಟವಾದ ಸಂದೇಶ ನೀಡಲು ವಿಫಲರಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್‌ನ ರಣತಂತ್ರ: ಬಿಜೆಪಿಯ ಪರಿವರ್ತನಾ ಯಾತ್ರೆಯ ರೀತಿಯಲ್ಲಿ ನೀರಸ ಯಾತ್ರೆಯನ್ನು ಕಾಂಗ್ರೆಸ್ ಮಾಡುವುದಿಲ್ಲ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಆಗಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಯ ಬಾಗಿಲನ್ನು ತಟ್ಟಿ ಕಾಂಗ್ರೆಸ್‌ಗೆ ಯಾಕೆ ಮತ ಹಾಕಬೇಕೆಂದು ತಿಳಿಸುತ್ತೇವೆ. ಇದರ ಜೊತೆಗೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಾವೇಶಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ನಾಯಕರು ಸದಾ ದ್ವಿಮುಖ ನೀತಿಯನ್ನು ಅನುಸರಿಸುವವರು ಎಂಬುದನ್ನು ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಸಾಬೀತಾಗಿದೆ. ಕೆಜೆಪಿಯಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ ಟಿಪ್ಪು ಜಯಂತಿ ಆಚರಿಸಿ, ಗುಣಗಾನ ಮಾಡಿದ್ದರು. ಆದರೆ, ಈಗ ಟೀಕೆ ಮಾಡುತ್ತಿದ್ದಾರೆ. ಅದೇ ರೀತಿ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್‌ರೆಡ್ಡಿ ತಮ್ಮ ಕ್ಷೇತ್ರದ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಗೆ ಶುಭಕೋರಿ ಜಾಹೀರಾತು ಫಲಕಗಳನ್ನು ಹಾಕುತ್ತಾರೆ. ಆದರೆ, ಮಾಧ್ಯಮಳಲ್ಲಿ ಟಿಪ್ಪುವನ್ನು ತೆಗಳುತ್ತಾರೆ.
-ಡಾ.ಜಿ.ಪರಮೇಶ್ವರ್, ಅಧ್ಯಕ್ಷ ಕೆಪಿಸಿಸಿ