×
Ad

ಆಯುರ್ವೇದ ಚಿಕಿತ್ಸೆಯತ್ತ ಜನತೆ ಆಕರ್ಷಿತರಾಗಲಿ: ಕೆ.ಎಸ್.ಧೀಮಾನ್

Update: 2017-11-10 20:14 IST

ಬೆಂಗಳೂರು, ನ.10: ಕಡಿಮೆ ವೆಚ್ಚದ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಚಿಕಿತ್ಸೆಯತ್ತ ಜನರು ಆಕರ್ಷಿತರಾಗುವಂತೆ ರಾಜ್ಯ ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ದೆಹಲಿಯ ಕೇಂದ್ರ ಆಯುರ್ವೇದ ಸಂಶೋಧನಾ ಮಂಡಳಿ ಮಹಾ ನಿರ್ದೇಶಕ ಕೆ.ಎಸ್.ಧೀಮಾನ್ ತಿಳಿಸಿದ್ದಾರೆ.

ಶುಕ್ರವಾರ ಆಯುಷ್ ಇಲಾಖೆ ವತಿಯಿಂದ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಶಾಲಕ್ಯ ಪ್ರಭೋದಿನಿ ಸಮಾವೇಶದಲ್ಲಿ ಮಾತನಾಡಿದ ಅವರು, ಆಯುರ್ವೇದ ಕ್ಷೇತ್ರದ ಬೆಳವಣಿಗೆಯಲ್ಲಿ ರಾಜ್ಯ ಸರಕಾರಗಳ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.

ಗುಜರಾತ್, ರಾಜಸ್ತಾನ ಹಾಗೂ ಬಿಹಾರ್ ರಾಜ್ಯಗಳಲ್ಲಿ ಆಯುರ್ವೇದ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಈ ಕ್ಷೇತ್ರವನ್ನು ಕಡೆಗಣಿಸಿದ್ದು, ಸರಕಾರಗಳು ಆಯುರ್ವೇದ ಚಿಕಿತ್ಸಾ ಕ್ರಮವನ್ನು ಉತ್ತೇಜಿಸಬೇಕು. ಇದರಿಂದ ಬಡ ಹಾಗೂ ಗ್ರಾಮೀಣ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಮಧುಮೇಹ, ಕ್ಯಾನ್ಸರ್ ಹಾಗೂ ಮಾರಕ ರೋಗಗಳಿಗೆ ಆಯುರ್ವೇದದ ಮೂಲಕ ಚಿಕಿತ್ಸೆ ನೀಡಲು ಸಂಶೋಧನೆ ಕೈಗೊಳ್ಳಬೇಕಿದೆ. ಒಂದು ವರದಿ ಪ್ರಕಾರ ಭಾರತಕ್ಕಿಂತ ವಿದೇಶದಲ್ಲಿಯೇ ಆಯುರ್ವೇದ ಹೆಚ್ಚು ಖ್ಯಾತಿಗಳಿಸಿದೆ. ಮೂಲಸ್ಥಾನದಲ್ಲಿಯೇ (ಭಾರತದಲ್ಲಿ) ಆಯುರ್ವೇದಕ್ಕೆ ಪ್ರಾಮುಖ್ಯತೆ ಸಿಕ್ಕಿಲ್ಲ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಬೇಸರ ವ್ಯಕ್ತಪಡಿಸಿದರು.

ಆಯುಷ್ ಇಲಾಖೆಯ ಜಂಟಿ ನಿರ್ದೇಶಕಿ ಅಹಲ್ಯಾ ಶರ್ಮಾ ಮಾತನಾಡಿ, ಕಾಯ ಚಿಕಿತ್ಸಾ, ಬಾಲ ಚಿಕಿತ್ಸಾ, ಗ್ರಹ ಚಿಕಿತ್ಸಾ, ಊರ್ಧ್ವಾಂಗ ಚಿಕಿತ್ಸಾ, ಶಲ್ಯ ತಂತ್ರ, ದಂಷ್ಟ್ರ ಚಿಕಿತ್ಸಾ, ಜರಾ ಚಿಕಿತ್ಸಾ ಹಾಗೂ ವೃಶ ಚಿಕಿತ್ಸಾ ಎಂಬ ಎಂಟು ಅಂಗಗಳು ಆಯುರ್ವೇದದಲ್ಲಿವೆ. ಈ ಅಂಗಗಳ ಮೂಲಕ ಜನರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಆಯುರ್ವೇದವನ್ನು ಸಮಾಜದಲ್ಲಿ ಮುಖ್ಯ ಚಿಕಿತ್ಸಾ ಕ್ರಮವನ್ನಾಗಿಸಬೇಕು ಎಂದು ಆಶಿಸಿದರು.

ಆಯುರ್ವೇದ ಚಿಕಿತ್ಸಾ ಕ್ರಮವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಒಳಗೊಂಡಿದೆ. ದಾಖಲೆಗಳ ಮೂಲಕ ಅದರ ಮಹತ್ವದ ಬಗ್ಗೆ ತಿಳಿಸಿದರೆ ಜನರು ನಂಬುತ್ತಾರೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ವೈದ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News