ಕೃಷಿ ಭೂಮಿ ಉಳಿಸಿಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು
ಬೆಂಗಳೂರು, ನ.10: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್‌ನಿಂದ ಪ್ರೇರಿತರಾಗಿರುವ ನಾವು ಗ್ರಾಮದಲ್ಲೇ ಉಳಿದು ಕೃಷಿ ಮಾಡಲು ಬಯಸಿದ್ದೇವೆ. ಆದರೆ ಗ್ರಾಮದ ಕೃಷಿ ಭೂಮಿಗೆ ಭೂಗಳ್ಳರ ಕಾಟ ಹೆಚ್ಚಿದ್ದು ಇದನ್ನು ಉಳಿಸಿಕೊಡಿ. ನಮ್ಮ ಈ ಮನವಿಗೆ ಹಾವೇರಿ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ’ ಎಂದು ಆಕ್ಷೇಪಿಸಿ ಹಿರೇಕೆರೂರು ತಾಲೂಕಿನ ನಿಟ್ಟೂರು ಗ್ರಾಮದ ರಮೇಶ ಶಿವಬಸಪ್ಪ ಹಂಚಿ ಹಾಗೂ ಫಕೀರೇಶ್ ನಾಗಪ್ಪ ಮೂಡಗಡಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ನಿಟ್ಟೂರಿನಲ್ಲಿ 80 ಎಕರೆ ಗೋಮಾಳ ಜಮೀನು ಇದೆ. ಇದರಲ್ಲಿನ ವಿವಿಧ ಸರ್ವೇ ನಂಬರ್‌ಗಳಲ್ಲಿರುವ ಹುಲ್ಲುಗಾವಲು ಹೊಂದಿದ ಜಮೀನನ್ನು ಬರ್ಗ ಹುಕುಂ ಸಾಗುವಳಿದಾರರಿಗೆ ಹಂಚಿಕೆ ಮಾಡಲಾಗಿದೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ವಿರುದ್ಧವಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.
ಗ್ರಾಮದ ಗೋಮಾಳವನ್ನು ಕೊಳ್ಳೆ ಹೊಡೆಯಲು ಭೂಗಳ್ಳರು ಹಾಗೂ ರಾಜಕೀಯ ನಾಯಕರು ಪಿತೂರಿ ನಡೆಸಿದ್ದಾರೆ. ಇದರಿಂದ ಸುಮಾರು 300 ರೈತ ಕುಟುಂಬದ ದನ ಕರುಗಳ ಮೇವಿಗೆ ತೊಂದರೆ ಉಂಟಾಗಿದೆ. ಗೋಮಾಳವನ್ನು ಉಳಿಸಿಕೊಳ್ಳುವುದು ನಮಗೆ ಅನಿವಾರ್ಯವಿದೆ. ಆದ್ದರಿಂದ ಬಗರ್ ಹುಕುಂ ಸಮಿತಿ ಹಂಚಿಕೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಈ ಅರ್ಜಿ ವಿಚಾರಣೆ ನಡೆಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ಅರ್ಜಿದಾರರ ಪರ ಎಚ್.ಪವನಚಂದ್ರ ಶೆಟ್ಟಿ ವಕಾಲತ್ತು ವಹಿಸಿದ್ದಾರೆ.