×
Ad

'ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸುವುದರ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು'

Update: 2017-11-10 23:18 IST

ಬೆಂಗಳೂರು, ನ.10: ಘನ ತ್ಯಾಜ್ಯ ನಿರ್ವಹಣೆಯ ಮೇಲ್ವಿಚಾರಣೆಗಾಗಿ ರಚಿಸಲಾಗಿರುವ ವಾರ್ಡ್ ಸಮಿತಿಯು ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯಲ್ಲಿ ಉಲ್ಲೇಖಿಸಿರುವ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಹೈಕೋರ್ಟ್, ಸಮಿತಿಯು ನವೆಂಬರ್ 30ರೊಳಗೆ ಸಭೆ ನಡೆಸಬೇಕು. ಹಾಗೆಯೇ, ಬಿಬಿಎಂಪಿಯು ಪ್ರತಿ ವಾರ್ಡ್‌ನಲ್ಲಿ ಹೆಚ್ಚುವರಿ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸುವುದರ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಶುಕ್ರವಾರ ನಿರ್ದೇಶಿಸಿದೆ.

ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ವಿಲೇವಾರಿ ಸಮಸ್ಯೆ ಕುರಿತು ಸಲ್ಲಿಸಲಾಗಿರುವ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ನಗರದ ಪ್ರತಿ ವಾರ್ಡ್‌ನಲ್ಲಿ ರಚಿಸಿರುವ ವಾರ್ಡ್ ಸಮಿತಿಗಳ ಕುರಿತು ಮಾಹಿತಿಯನ್ನು ಬಿಬಿಎಂಪಿಯು ಕೋರ್ಟ್‌ಗೆ ಶುಕ್ರವಾರ ಸಲ್ಲಿಸಿತು.

ಇದನ್ನು ಪರಿಶೀಲಿಸಿದ ನ್ಯಾಯಪೀಠ, ವಾರ್ಡ್ ಸಮಿತಿ ನವೆಂಬರ್ 31ರೊಳಗೆ ಸಭೆ ನಡೆಸಬೇಕು. ಮುಂದಿನ 10 ದಿನಗಳಲ್ಲಿ ಬಿಬಿಎಂಪಿಯು ಈಗಾಗಲೇ ಸಿದ್ಧಪಡಿಸಿರುವ ಪ್ರತಿ ವಾರ್ಡ್‌ನ ಮೈಕ್ರೋ ಪ್ಲಾನ್ ಮತ್ತು ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕಾಲ ಕಾಲಕ್ಕೆ ಹೊರಡಿಸಿರುವ ಆದೇಶಗಳ ಕುರಿತ ಕಿರುಹೊತ್ತಿಗೆ ಸಿದ್ಧಪಡಿಸಿ ಸಮಿತಿಗೆ ಒದಗಿಸಬೇಕು ಎಂದು ನಿರ್ದೇಶಿಸಿತು.

ಅಲ್ಲದೆ, ವಾರ್ಡ್ ಸಮಿತಿಯು ಸಭೆ ನಡೆಸಿ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುವಂತೆ ಕ್ರಿಯಾ ಯೋಜನೆ ರೂಪಿಸಿ ಬಿಬಿಎಂಪಿಗೆ ಸಲ್ಲಿಸಬೇಕು. ಅದನ್ನು ಬಿಬಿಎಂಪಿಯು ಕೋರ್ಟ್‌ಗೆ ಸಲ್ಲಿಸಬೇಕು. ಹಾಗೆಯೇ, ಸಭೆಯಲ್ಲಿ ಕೈಗೊಂಡ ನಿರ್ಣಯ ಹಾಗೂ ಅದರನ್ವಯ ನೆರವೇರಿಸಿದ ಕಾರ್ಯಗಳ ಬಗ್ಗೆ ಕೋರ್ಟ್‌ಗೆ ತಿಳಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿತು.

ಕ್ವಾರಿಗೆ ಕಸ, ಆಕ್ಷೇಪ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ನಗರದ ಬಾಗಲೂರು, ಮಿಟ್ಟಗನಹಳ್ಳಿ ಮತ್ತು ಬೆಳ್ಳಹಳ್ಳಿಯಲ್ಲಿನ ಕಲ್ಲು ಕ್ವಾರಿಗಳಿಗೆ ಬಿಬಿಎಂಪಿ ಮತ್ತೆ ಕಸ ಸುರಿಯುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಪರ ವಕೀಲ ಕೆ.ಎನ್.ಪುಟ್ಟೇಗೌಡ, ಈಗಷ್ಟೆ ವಾರ್ಡ್ ಸಮಿತಿ ರಚಿಸಲಾಗಿದೆ. ಮುಂದೆ ಕಸವನ್ನು ನಗರದಲ್ಲಿಯೇ ಸಂಸ್ಕರಣೆ ಮಾಡಲಾಗುವುದು. ಆ ನಿಟ್ಟಿನಲ್ಲಿ ವಾರ್ಡ್‌ಗಳಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಹೆಚ್ಚುವರಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ತೆರೆಯುವ ಕುರಿತು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಆದ್ಯತೆ ಮೇರೆಗೆ ವಾರ್ಡ್‌ಗಳಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಹೆಚ್ಚುವರಿ ಘನ ತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸುವ ಕುರಿತು ಕ್ರಿಯಾ ಯೋಜನೆ ರೂಪಿಸಬೇಕು. ಈ ಬಗ್ಗೆ ಡಿಸೆಂಬರ್ 8ರಂದು ಕೊರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿದ ಪೀಠ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News