‘ನನಗೆ ಮಾಟ ಮಾಡಿಸಿ’ ಎಂಬ ಸವಾಲು!

Update: 2017-11-11 12:24 GMT

ಹೌದು, ಈ ಮಾಟ ಮಂತ್ರಗಳ ಆಟ ನೋಡಿ ನೋಡಿ ಸಾಕಾದ ನಾನು ಬಹಿರಂಗವಾಗಿಯೇ ನನಗೆ ಯಾರಾದರೂ ಮಾಟ ಮಾಡಿ ಎಂದು ಸವಾಲೊಡ್ಡಿದ್ದೆ. ನಾನು ಹೋದಲ್ಲೆಲ್ಲಾ ಇದನ್ನು ಪುನರು ಚ್ಛರಿಸುತ್ತಿದ್ದೆ. ಆದರೆ ನನ್ನ ಮೇಲೆ ಮಾಟ ಪ್ರಯೋಗ ಮಾಡಲು ಮಾತ್ರ ಯಾರೂ ಮುಂದೆ ಬಂದಿರಲಿಲ್ಲ. ಆದರೆ, 1997ರ ಅವಧಿಯಲ್ಲಿ ಈ ಸವಾಲು ಸ್ವೀಕರಿಸಲು ಕೆಲವರು ಮುಂದೆ ಬಂದರು. ದ.ಕ. ಜಿಲ್ಲೆಯಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯೊಂದಿದೆ. ಅಲ್ಲಿ ಸರಕಾರಿ ನೌಕರರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿ ಬಂದ ಸರಕಾರಿ ನೌಕರರಿಗೆ ವೈಜ್ಞಾನಿಕ ಮನೋಭಾವ ಮತ್ತು ಬಳಕೆದಾರರ ಆಂದೋಲನದ ಬಗ್ಗೆ ಜಾಗೃತಿ ಮೂಡಿಸಲು ಉಪನ್ಯಾಸಕ್ಕೆ ನನ್ನನ್ನು ಆಹ್ವಾನಿ ಸಲಾಗಿತ್ತು. ಈ ಸಂದರ್ಭ ನಾನು ಮಾಟ ಮಾಡುವ ವರಿಗೆ ಬಹಿರಂಗ ಸವಾಲು ಹಾಕಿದ್ದೆ. ಆಗ ಮುಲ್ಕಿ ಯಿಂದ ಬಂದಿದ್ದ ಗ್ರಾಮ ಲೆಕ್ಕಿಗರೊಬ್ಬರು ಈ ಸವಾಲನ್ನು ಸ್ವೀಕರಿಸುವುದಾಗಿ ಹೇಳಿದರು. ಆದರೆ ಮಾತ್ರ ಅವರು ಮತ್ತೆ ನನ್ನನ್ನು ಈವತ್ತಿನವರೆಗೂ ಸಂಪರ್ಕಿಸಿಲ್ಲ.

1997ರಲ್ಲಿ ಕೇರಳ ರಾಜ್ಯ ಯುಕ್ತಿವಾದಿ ಸಂಘ ಏರ್ಪಡಿಸಿದ್ದ ರಾಜ್ಯ ಮಟ್ಟದ ಜಾಥಾ ಉದ್ಘಾಟಿಸಲು ನಾನು ಚೆರುವತ್ತೂರಿಗೆ ಹೋಗಿದ್ದೆ. ಅಲ್ಲಿಯೂ ನಾನು ಮಾಟ ಮಾಡುವವರಿಗೆ ಬಹಿರಂಗ ಸವಾಲು ಹಾಕಿದ್ದೆ. ಮರುದಿನ ಸಮೀಪದ ಪಯ್ಯನೂರಿನಲ್ಲಿ ರಸ್ತೆ- ರಸ್ತೆಗಳಲ್ಲಿ ಈ ಬಗ್ಗೆ ಡಂಗುರವನ್ನೂ ಸಾರಲಾಯಿತು. ನರೇಂದ್ರ ನಾಯಕರ ಸವಾಲನ್ನು ಆಮಿರ್ ರಾಜಾ ಎಂಬವರು ಸ್ವೀಕರಿಸಿದ್ದಾರೆ. ಸಾಯಂಕಾಲ ಈ ಬಗ್ಗೆ ಮೈದಾನದಲ್ಲಿ ಸಭೆ ಇದೆ ಎಂದು ಡಂಗುರದ ಮೂಲಕ ಸಾರಲಾಗಿತ್ತು. ಅದೇ ಸಂಜೆ ಮೈದಾನದಲ್ಲಿ ಓರ್ವ ವೇದಿಕೆಯ ಮೇಲೆ ನಿಂತು ಧ್ವನಿವರ್ಧಕದಲ್ಲಿ ಆಮಿರ್ ರಾಜಾನಾ ಗುಣಗಾನ ಮಾಡಲಾರಂಭಿಸಿದ್ದ. ಆಮಿರ್ ರಾಜಾ ಮಹಾ ಮೇಧಾವಿ. ತಂತ್ರ ಮಂತ್ರ ಶಕ್ತಿ ಹೊಂದಿದವ. ಇನ್ನು ಕೆಲವೇ ಗಂಟೆಗಳಲ್ಲಿ ನರೇಂದ್ರ ನಾಯಕ್‌ರಮೇಲೆ ಆತ ಮಂತ್ರ ಪ್ರಯೋಗಿಸಿ ಕೊಲ್ಲಲಿದ್ದಾನೆ ಎಂದು ಹೇಳಿದ. ಕೇರಳದ ಯುಕ್ತಿವಾದಿ ಸಂಘದ ಸದಸ್ಯರು ಇದನ್ನು ತಾಳಲಾರದೆ ವೇದಿಕೆ ಹತ್ತಿ ಆಮಿರ್ ರಾಜಾ ಯಾರು ಎಂದು ಪ್ರಶ್ನಿಸಿದರು. ಆಗ ಅವರಿಗೆ ಧ್ವನಿವರ್ಧಕದಲ್ಲಿ ಮಾತನಾಡುತ್ತಿದ್ದವನೇ ಆಮಿರ್ ರಾಜಾ ಎಂಬುದಾಗಿತಿಳಿಯಿತು. ಆಗ ಅವರು ನರೇಂದ್ರ ನಾಯಕ್‌ರನ್ನು ಕೊಲ್ಲುವ ಮೊದಲು ನಮ್ಮನ್ನು ಕೊಲ್ಲು ಎಂದು ಆತನಿಗೆ ಸವಾಲೊಡ್ಡಿದರು. ಇದಕ್ಕೆ ಉತ್ತರಿಸ ಲಾಗದ ಆತ ಸಮೀಪದ ಕಟ್ಟಡವೊಂದರಲ್ಲಿ ಓಡಿ ಅವಿತುಕೊಂಡ. ಈ ಸುದ್ದಿ ಕೇರಳದ ವಾರ್ತಾ ಪತ್ರಿಕೆಗಳಲ್ಲಿ ಸುದ್ದಿ ಯಾಯಿತು. ಎರಡು ವಾರಗಳ ಬಳಿಕ ಪಯ್ಯನೂರಿನಲ್ಲಿ ಮತ್ತೊಂದು ಕಾರ್ಯಕ್ರಮವಿತ್ತು. ಈ ಘಟನೆ ಯನ್ನು ಅಲ್ಲಿ ಉಲ್ಲೇಖಿಸಿದಾಗ ನನ್ನನ್ನು ಮಾಟ ಮಾಡಿ ಕೊಲ್ಲುತ್ತೇನೆಂದು ಹೇಳಿದ ಆಮಿರ್ ರಾಜಾ ಇಲ್ಲಿಯೇ ಇದ್ದಾನೆಂದು ಅಲ್ಲಿನವರು ಹೇಳಿದರು. ಕೂಡಲೇ ಆತನನ್ನು ಕರೆದು ಮಾಟ ಮಾಡಿ ನನ್ನ ಕೊಲ್ಲುವಂತೆ ಸವಾಲೆಸೆದೆ. ಈ ನಡುವೆ ನನ್ನ ವಿಚಾರವಾದಿ ಗೆಳೆಯರು ನನ್ನ ರಕ್ಷಣೆಗೆ ಸುತ್ತ ನಿಂತರು. ಆತನನ್ನು ಹತ್ತು ಅಡಿ ದೂರದಲ್ಲಿ ನಿಲ್ಲಿಸಿ ಮಂತ್ರ ಮಾಡುವಂತೆ ತಿಳಿಸಲಾಯಿತು. ಆದರೆ ಆತ ಮೊದಲು ತನಗೆ ಮಾತನಾಡಲು ಅವಕಾಶ ನೀಡುವಂತೆ ಕೋರಿಕೊಂಡ.

ಆತನಿಗೆ ಮೈಕ್ ನೀಡಲಾಯಿತು. ಮಲಯಾಳ ಭಾಷೆಯಲ್ಲಿಏನೇನೋ ಹೇಳಿದ. ಆಗ ಅಲ್ಲಿದ್ದವರು ರೊಚ್ಚಿಗೆದ್ದು ಆತನನ್ನು ಹೊಡೆಯಲುಮುಂದಾದರು. ಅಷ್ಟರಲ್ಲಿ ಆತನ ಮಿತ್ರರು ಓಡಿ ಬಂದು ಆತನನ್ನು ಕರೆದುಕೊಂಡು ಹೋದರು. ನಂತರ ನನಗೆ ತಿಳಿದು ಬಂದಿದ್ದು ಏನೆಂದರೆ ಆತನೊಬ್ಬ ಮಾನಸಿಕ ರೋಗಿಯೆಂದು. ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಮನೋರೋಗ ವಿಭಾಗದಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದನಂತೆ. ಒಟ್ಟಿನಲ್ಲಿ ನನಗೆ ಸವಾಲು ಹಾಕಿದವರು ಇಂತಹವರೇ ಆಗಿದ್ದರು!

‘ಮದ್ದು’ ತೆಗೆಸಿಕೊಂಡಾಗ

ಮಾಟ ಮಂತ್ರ ಮಾಡಿದವರು ಮದ್ದು ಹಾಕಿಸಿದ್ದಾರೆಂಬ ಮಾತುಗಳು ನಮ್ಮ ಕರಾವಳಿಯಲ್ಲಿ ಸಾಮಾನ್ಯ. ಅವರಿಗ್ಯಾರೋ ಆಗದವರು ಮದ್ದು ಹಾಕಿಸಿದ್ದಾರೆಂಬುದಾಗಿ ಮಾತನಾಡಿಕೊಳ್ಳುತ್ತಾರೆ. ಈ ರೀತಿ ಮಾಟದ ಮೂಲಕ ಹಾಕಲಾದ ಮದ್ದನ್ನು ತೆಗೆಸಲು ವಾಂತಿ ಮಾಡಿಸಲಾಗುತ್ತದೆ! ಹೌದು, ಹೊಟ್ಟೆಗೆ ಹಾಕಿದ ಮದ್ದನ್ನು ವಾತಿ ಮಾಡಿ ತೆಗೆಸುವುದು, ಮತ್ತೊಂದು ಈ ಮದ್ದನ್ನು ಹೊಟ್ಟೆಯ ಚರ್ಮದ ಮೂಲಕವೂ ತೆಗೆಯಲಾಗುತ್ತದೆ!

ಓರ್ವ ಮದ್ಯ ವಯಸ್ಕ ಮಹಿಳೆ. ಈಕೆಯನ್ನು ನಮ್ಮ ಪ್ರಯೋಗಾಲ ಯಕ್ಕೆ ಹೃದಯ ರೋಗ ಚಿಕಿತ್ಸಾ ವಿಭಾಗದವರು ಕಳುಹಿಸಿದ್ದರು. ಈಕೆಯ ಕೈಯಲ್ಲಿ ಒಂದು ಬಾಟಲಿಯಿತ್ತು. ಅದರಲ್ಲಿ ಕಪ್ಪು ಬಣ್ಣದ ಪೇಸ್ಟ್ ಇತ್ತು. ಏನೆಂದು ಕೇಳಿದಾಗ, ಅದು ಮಾಂತ್ರಿಕ ತೆಗೆದ ಮದ್ದೆಂದು ಆಕೆ ಹೇಳಿದ್ದರು. ಆಕೆಗೆ ಎದೆನೋವು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದರು. ಆಕೆಯ ಸಮಸ್ಯೆ ಕಂಡು ಹಿಡಿಯಲು ಹಲವು ತಪಾಸಣೆ ನಡೆಸಲಾಯಿತು. ಆದರೂ ರೋಗ ಮಾತ್ರ ಏನೆಂದು ಪತ್ತೆಯಾಗಿರಲಿಲ್ಲ. ಆದ್ದರಿಂದ ಆಕೆಯನ್ನು ತಪಾಸಣೆಗೆ ಒಳಪಡಿಸಿದ್ದ ವೈದ್ಯರು ನಿಮಗೇನೂ ತೊಂದರೆ ಇಲ್ಲ ಎಂದಿದ್ದರು.

ಆದರೆ ಆಕೆಗೆ ಮಾತ್ರ ಇದರಿಂದ ಸಮಾಧಾನವಾಗಿರಲಿಲ್ಲ. ನಿನಗಾರೋ ಮದ್ದು ಹಾಕಿರಬೇಕೆಂಬ ಗುಮಾನಿಯನ್ನು ಆಕೆಯ ಕುಟುಂಬಿಕರೇ ಹೇಳಿದ್ದರು. ಅದಕ್ಕಾಗಿ ಆಕೆ ತನಗೆ ಪ್ರಯೋಗಿಸಲಾದ ಮದ್ದನ್ನು ತೆಗೆಸಲು ಮಂತ್ರವಾದಿ ಬಳಿ ಹೋಗಿದ್ದರು. ಹೆಜಮಾಡಿಯ ಹೆಸರಾಂತ ಮಂತ್ರವಾದಿ ಆತ. ಆಕೆಯ ಖಾಲಿ ಹೊಟ್ಟೆಯ ಮೇಲೆ ಒಂದು ದೀಪ ಉರಿ, ದೀಪದ ಮೇಲೆ ಒಂದು ಪಾತ್ರೆ ಕವುಚಿ ಹಾಕಿ ಮಂತ್ರಗಳನ್ನು ಹೇಳಿದ ಆ ಮಂತ್ರವಾದಿ. ಆ ಪಾತ್ರ ಮಹಿಳೆಯ ಹೊಟ್ಟೆಗೆ ಅಂಟಿಕೊಂಡಾಗ ಮಂತ್ರವಾದಿ ‘‘ನೋಡು ಮದ್ದು ಈಗ ಹೊಟ್ಟೆಯಿಂದ ಹೊರಬರುತ್ತಿದೆ’’ ಎಂದು ಹೇಳಿದನಂತೆ. ಸ್ವಲ್ಪ ಸಮಯದ ನಂತರ ಅಂಟಿದ ಪಾತ್ರೆಯನ್ನು ಕಿತ್ತು ತೆಗೆಯಲಾಯಿತು. ಅದರೊಳಗೆ ಕಪ್ಪು ಪೇಸ್ಟನ್ನು ತೆಗೆದು ಬಾಟಲಿಗೆ ಹಾಕಿ ಆಕೆಯ ಕೈಗೆ ಮಂತ್ರವಾದಿ ನೀಡಿದ್ದ.

ಅದನ್ನು ಆಕೆ ಪ್ರಯೋಗಾಲಯಕ್ಕೆ ತಂದಿದ್ದರು. ಅದರಲ್ಲಿ ಪಿಷ್ಟದ ಹುಡಿ ಹಾಗೂ ಕರಿ ಮಾತ್ರವಿತ್ತು. ಈ ಬಗ್ಗೆ ಆಕೆಗೆ ಹೇಳಿದಾಗ ಆಕೆ ಮಾತ್ರ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಅದು ಆಕೆಯ ಪಾಲಿಗೆ ನಂಬಿಕೆಯ ಪ್ರಶ್ನೆಯಾಗಿತ್ತು. ‘‘ಇದನ್ನು ಹೊಟ್ಟೆಯಿಂದ ತೆಗೆದ ಕಾರಣ ನನಗೆ ಗುಣವಾಗಿದೆ. ನಿಮಗೆಲ್ಲಾ ತಲೆ ಸರಿ ಇಲ್ಲ’’ ಎಂದು ನಮ್ಮನ್ನೇ ಬೈಯ್ದು ಆ ಮಹಿಳೆ ತೆರಳಿದ್ದರು.

ನನ್ನ ಕಾರ್ಯಕ್ರಮಕ್ಕೆ ಬರುತ್ತಿದ್ದ, ನನ್ನಿಂದ ತರಬೇತಿ ಪಡೆದ ಮೆಚ್ಚಿನ ವ್ಯಕ್ತಿಯೊಬ್ಬರಿದ್ದರು. ನಮ್ಮ ತರಬೇತಿ ಕಾರ್ಯಕ್ರಮಕ್ಕೆ ಬರುವ ಮೊದಲು ಅವರು ಈ ವೌಢ್ಯಗಳನ್ನು ನಂಬುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರಿಗೆ ಯಾರೋ ಮದ್ದು ಹಾಕಿದ್ದನ್ನು ತೆಗೆದ ಬಗ್ಗೆ ನನ್ನಲ್ಲಿ ಅವರು ಹಂಚಿಕೊಂಡಿದ್ದರು.

ಅವರಿಗೆ ಆಗಾಗ್ಗೆ ಹೊಟ್ಟೆನೋವು ಬರುತ್ತಿತ್ತು. ಭೇದಿಯೂ ಆಗುತ್ತಿತ್ತು. ಇದಕ್ಕೆ ಯಾವುದೇ ಔಷಧಿಯಿಂದ ಪ್ರಯೋಜನವಾಗುತ್ತಿರಲಿಲ್ಲ. ಈ ಸಂದರ್ಭ ನಿಮಗಾರೋ ಮದ್ದು ಹಾಕಿದ್ದಾರೆಂದು ಅವರಿಗೆ ಹೇಳಿದ್ದರು. ಇದನ್ನು ನಂಬಿದ ಅವರು, ಮದ್ದನ್ನು ತೆಗೆಸಲು ಹೆಸರುವಾಸಿ ಮಂತ್ರವಾದಿ ಬಳಿ ಹೋಗಿದ್ದರು. ಮಂತ್ರವಾದಿ ಅಮಾವಾಸ್ಯೆ ದಿನದಂದು ಅವರನ್ನು ಕರೆಯಿಸಿ ಖಾಲಿ ಹೊಟ್ಟೆಯಲ್ಲಿ ಒಟ್ಟಿಗೆ ಮೂರು ಸೀಯಾಳಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಮಂತ್ರವಾದಿ ಬಳಿ ಹೋದ ಬಳಿಕ ಅವರಿಗೆ ಬೆಳಗ್ಗೆ ಲೋಟದಲ್ಲಿ ಹಸಿರು ಬಣ್ಣದ ದ್ರವವನ್ನು ಕುಡಿಸಲಾಯಿತು. ಕೆಲವೇ ನಿಮಿಷಗಳಲ್ಲಿ ಅವರಿಗೆ ವಾಂತಿಯಾಯಿತು. ಇವರು ಸಮೀಪದ ತೆಂಗಿನ ಮರದ ಬುಡದಲ್ಲಿ ವಾಂತಿ ಮಾಡಿದ್ದರು. ವಾಂತಿ ನಿಂತಾಗ ಮಂತ್ರವಾದಿ ಬಳಿ ಹೋಗಿ ನನಗೆ ವಾಂತಿ ನಿಂತಿದೆ. ಆದರೆ ಮದ್ದು ಮಾತ್ರ ಹೋಗಿಲ್ಲ ಎಂದು ಹೇಳಿದರಂತೆ.

ಅದಕ್ಕೆ ಅವರಿಗೆ ಮತ್ತೊಮ್ಮೆ ವಾಂತಿ ಮಾಡುವ ಔಷಧ ನೀಡಲಾಯಿತು. ವಾಂತಿ ಯಾಯಿತು. ಆದರೆ ಈ ಬಾರಿಯೂ ಮದ್ದು ಹೊರ ಹೋಗಲಿಲ್ಲ! ಆಗ ಮಂತ್ರವಾದಿಯೇ ಹೊರಬಂದು ವಾಂತಿಯಾದ ಸ್ಥಳ ವೀಕ್ಷಿಸಿ ಕೋಲಿನಿಂದ ಕೆದಕಿ ಇದೇ ನೋಡು ಮದ್ದು ಎಂದು ತಿಳಿಸಿ ಅವರಿಂದ 300 ರೂ. ದಕ್ಷಿಣೆಯನ್ನೂ ಪಡೆದುಕೊಂಡರಂತೆ. ಮೂರು ಸೀಯಾಳಗಳನ್ನು ಅವರಿಗೆ ಕುಡಿಸಲಾಯಿತು. ಆದರೆ ಮನೆಗೆ ಹಿಂದಿರುಗಿದ ಬಳಿಕವೂ ಇವರ ಹೊಟ್ಟೆ ಸಮಸ್ಯೆ ಮಾತ್ರ ನಿಂತಿರಲಿಲ್ಲ. ಕೊನೆಗೆ ತಾನು ಎಲ್ಲೆಂದರಲ್ಲಿ ಸೇವಿಸುತ್ತಿದ್ದ ಕೆಲವೊಂದು ಆಹಾರ ಪದಾರ್ಥಗಳೇ ಅದಕ್ಕೆ ಕಾರಣ ಎಂದು ಅವರಿಗೆ ಅರಿವಾಗಿತ್ತು. ಈ ವಿಷಯವನ್ನು ಅವರು ನನ್ನ ಬಳಿ ಹೇಳಿಕೊಂಡು ನಕ್ಕಿದ್ದೂ ಇದೆ. ನಾನು ಕೆಲಸ ಮಾಡುತ್ತಿದ್ದ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಜತೆ ಮಹಿಳೆಯೊಬ್ಬರು ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಹಲವಾರು ರೀತಿಯ ತೊಂದರೆಗಳಿದ್ದವು. ಉಬ್ಬಸ ರೋಗ ಅದರೊಂದಿಗೆ ಇತರ ರೋಗಗಳೂ ಇದ್ದವು. ಈಗ ಉದ್ಯೋಗಸ್ಥ ಮಹಿಳೆಯರ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಒಂದು ದಿನ ಆಕೆಯೊಂದಿಗೆ ಮಧ್ಯ ವಯಸ್ಸಿನ ಮತ್ತೊಬ್ಬ ಯುವಕ ನನ್ನ ಬಳಿ ಬಂದರು. ಯುವಕನನ್ನು ತನ್ನ ತಮ್ಮ ಎಂದು ಆಕೆ ಪರಿಚಯಿಸಿದರು. ಮರುದಿನ ನನ್ನ ಸಹಾಯಕಿ ಬಟ್ಟೆ ಬರೆಗಳನ್ನೆಲ್ಲಾ ಒಂದು ಚೀಲದಲ್ಲಿ ಹಾಕಿ ಬಂದಿದ್ದರು. ಕಾರಣ ಕೇಳಿದಾಗ ಇತ್ತೀಚೆಗಷ್ಟೇ ಪರಿಚಯವಾದ ಮಹಿಳೆ ಮತ್ತು ಅವಳ ತಮ್ಮ ತನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಾರೆಂದು ಹೇಳಿದರು. ಏಕೆ ಎಂದು ವಿಚಾರಿಸಿದಾಗ ನನಗೆ ಸಂಬಂಧವೊಂದನ್ನು ಹುಡುಕಿ ಮದುವೆ ಮಾಡಿಸುತ್ತಾರೆ ಎಂದರು.

ಪರಿಚಯವಾಗಿ ಎರಡೇ ದಿನಕ್ಕೆ ಇದನ್ನೆಲ್ಲಾ ಹೇಗೆ ಮಾಡುತ್ತಾರೆ ಎಂದು ಕೇಳಿದಾಗ ನನಗೆ ಆಕೆಯ ಮೇಲೆ ತುಂಬಾ ಭರವಸೆ, ನಾನು ಅವಳ ಜತೆ ಹೋಗುವುದಾಗಿ ಹಠ ಹಿಡಿದರು. ಅಲ್ಲೇನೋ ಅಪಾಯದ ವಾಸನೆ ಕಂಡ ನಾನು ನನ್ನ ಸ್ನೇಹಿತರ ಜತೆ ಸೇರಿ ಆಕೆಯನ್ನು ಕೊಠಡಿಯಲ್ಲಿರಿಸಿ ಆಕೆಯ ಜತೆ ಬಂದವರನ್ನು ಓಡಿಸಿದೆವು. ಕೊನೆಗೆ ಆಕೆಯ ಮನೆಯವರನ್ನು ಕರೆಯಿಸಿ ಅವರೊಡನೆ ಆಕೆಯನ್ನು ಕಳುಹಿಸಿದೆವು. ಒಂದು ವಾರದ ನಂತರ ಆಕೆಯ ತಾಯಿ ನಮ್ಮಲ್ಲಿಗೆ ಬಂದಿದ್ದರು. ಹೊಸದಾಗಿ ಪರಿಚಯವಾದ ಅವರಿಬ್ಬರೂ ಆಕೆಗೆ ಮದ್ದು ಹಾಕಿದ್ದರು! ಎಂಬುದು ಆಕೆಯ ಅಪವಾದವಾಗಿತ್ತು. ಅದರಿಂದಾಗಿ ತನ್ನ ಮಗಳು ವಶೀಕರಣಕೊಂಡು ಅವರ ಹಿಂದೆ ಹೋಗಲು ಸಿದ್ಧಳಾಗಿದ್ದಳು. ಕೊನೆಗೆ ಆಕೆಯನ್ನು ಮದ್ದು ತೆಗೆಸುವ ಕಡೆ ಹೋಗಿ ಆ ಮದ್ದು ತೆಗೆಸಿದರಂತೆ! ಆಕೆಗೆ ಆ ಮದ್ದನ್ನು ತಿನ್ನುವ ಪೂರಿಯಲ್ಲಿ ಹಾಕಿ ನೀಡಲಾಗಿತ್ತೆಂದು ಬೇರೆ ಅವರ ವಿಶ್ಲೇಷಣೆ!

ಮುಂದೆ ಈ ಮದ್ದು ಹಾಕುವ ಬಗ್ಗೆ ವಿವರವಾಗಿ ತಿಳಿಯೋಣ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News