ಗುರಜಾಡ ಅಪ್ಪಾರಾವ್ ‘ಸಾವು ಬದುಕಿನ ಹೆಬ್ಬಾಗಿಲು’

Update: 2017-11-11 12:59 GMT

ತೆಲುಗಿನ ಪ್ರಖ್ಯಾತ ಬರಹಗಾರ ಗುರಜಾಡ ವೆಂಕಟ ಅಪ್ಪಾರಾವ್‌ರ (1862-1915) ಬದುಕು ಹಾಗೂ ಲೋಕ ದೃಷ್ಟಿಯನ್ನು ತೆರೆದಿಡುವ ಈ ವಿದಾಯದ ಬರಹವನ್ನು ಪಿ.ಜಿ. ಬೇಲಿ ದಾಖಲಿಸಿದ್ದಾರೆ. ಗುರಜಾಡ ಮೃತರಾದ ದಿನದ ಚಿತ್ರಣವಿದು.ಆಧುನಿಕ ತೆಲುಗು ಸಾಹಿತ್ಯದ ಮೇರುಕೃತಿಗಳಲ್ಲಿ ಒಂದಾದ ‘ಕನ್ಯಾಶುಲ್ಕಂ’ ನಾಟಕ, ನೀಲಿ ಪಾಟಲು ಹಾಡುಗಳ ಸಂಕಲನ, ‘ದೇಶಮುನು ಪ್ರೇಮಿಂಚುವನ್ನ’ ದೇಶಭಕ್ತಿ ಗೀತೆಗಳು ಸೇರಿದಂತೆ ಆಡುಮಾತಿನ ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಗುರಜಾಡ ಬರೆದರು. ಸಾಹಿತ್ಯವು ಪಂಡಿತರ ಭಾಷೆಯಲ್ಲಿರಬೇಕೆಂದವರನ್ನು ಧಿಕ್ಕರಿಸಿದ್ದರು. ಇದೇ ನವೆಂಬರ್ 30ಕ್ಕೆ ಗುರಜಾಡ ತೀರಿಕೊಂಡು ನೂರ ಎರಡು ವರ್ಷಗಳಾಗುತ್ತವೆ. ಸಾಹಿತ್ಯವೇ ತನ್ನ ಪ್ರೇಯಸಿ ಎಂದು ಹೇಳಿಕೊಳ್ಳುತ್ತಿದ್ದ ಗುರಜಾಡರ ಬದುಕು ಹಾಗೂ ವ್ಯಕ್ತಿತ್ವ ಅಧ್ಯಯನ ಯೋಗ್ಯವಾಗಿದೆ. ಕನ್ನಡದ ಪ್ರಥಮ ನಾಟಕಗಳಲ್ಲಿ ಒಂದಾದ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಸಂಗ’ವು ಗುರಜಾಡರ ಕನ್ಯಾಶುಲ್ಕಂ ನಾಟಕಕ್ಕೆ ಸಮೀಪವಾಗಿರುವುದು ವಿಶೇಷ. ಈಗ್ಗೆ ಮೂರು ದಶಕಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದ ವಿ.ಆರ್. ನಾರ್ಲಾ ಸಂಪಾದಿತ ‘ಗುರಜಾಡ’ ಕೃತಿಯಿಂದ ಈ ಲೇಖನ ಆರಿಸಲಾಗಿದೆ.

1915ರ ನವೆಂಬರ್ ಮೂವತ್ತರಂದು ಬೆಳಗಿನ ಬಾನನ್ನು ಸೂರ್ಯ ಏರುತ್ತಿದ್ದಂತೆ ವಿಜಯನಗರಂನಲ್ಲಿನ ತನ್ನ ಮನೆಯಲ್ಲಿ ಕವಿಯೊಬ್ಬ ಮುಳುಗುತ್ತಿದ್ದ. ವಾತಾವರಣದಲ್ಲಿ ಶೈತ್ಯವಿತ್ತು. ಮಾಗಿಯ, ತಲೆಯ ಮೇಲೆ ತೂಗುವ ಸಾವಿನ ಶೈತ್ಯ.

ಎಂದಿನಂತೆ ತೀಕ್ಷ್ಣಗ್ರಹಿಕೆಗಳಿದ್ದ ಕವಿ ತನ್ನ ಸ್ಥಿತಿ ಎಷ್ಟು ದಾರುಣವಾಗಿದೆ ಎಂಬುದನ್ನು ಪೂರ್ಣವಾಗಿ ತಿಳಿದಿದ್ದ. ಹಿಂದಿನ ಚಿಂತಾಜನಕ ಕಾಯಿಲೆಯಿಂದ ಅವನಿನ್ನೂ ಪೂರ್ತಿಯಾಗಿ ಚೇತರಿಸಿಕೊಳ್ಳುವ ಮೊದಲೇ ಈಗಿನ ಕಾಯಿಲೆ ಬಂದಿತ್ತು. ಎಪ್ರಿಲ್‌ನಲ್ಲಿ ಸಾವು ಬದುಕಿನ ನಡುವೆ ತೂಗಾಡುತ್ತಿರುವಾಗ ಅವನು ಯಾವುದನ್ನು ತನ್ನ ಹಂಸಗೀತೆ ಎಂದು ತಿಳಿದಿದ್ದನೋ ಅದನ್ನು ಬರೆದಿದ್ದ. ಮುಖ್ಯ ವಾಗಿ, ‘ನಿನ್ನ ಲಂಗರನ್ನು ಎತ್ತು’ ಎಂದು ಅದಕ್ಕೆ ಹೆಸರಿಟ್ಟಿದ್ದ. ಅವನ ವೈದ್ಯರ ಅತ್ಯುತ್ತಮ ಆರೈಕೆ ಮತ್ತು ಅವನ ಮನೆಯವರ ನಿಷ್ಠೆಯ ಶುಶ್ರೂಷೆ ಇಲ್ಲದಿದ್ದರೆ ಅವನು ಪ್ರಾಯಃ ಆಗಲೇ ತನ್ನ ಬದುಕಿನ ದೋಣಿಯ ಲಂಗರನ್ನು ಎತ್ತುತ್ತಿದ್ದ. ತಿಳಿಯದೆಡೆಗೆ ಪಯಣ ಹೊರಡುತ್ತಿದ್ದ. ಈಗ ಅವನ ಚೇತರಿಸಿಕೊಳ್ಳುವ ಶಕ್ತಿ ಪೂರ್ತಿಯಾಗಿ ಹಾನಿಯಾಗಿತ್ತು. ಯಾರೂ ಅವನಿಗೆ ನೆರವಾಗುವಂತಿರಲಿಲ್ಲ. ಅವನಿಗಾಗಿ ಗಂಟೆ ಬಾರಿಸಿತ್ತು. ಅವನು ಇನ್ನು ಹೆಚ್ಚು ತಡ ಮಾಡುವಂತಿ ರಲಿಲ್ಲ. ಆದರೂ ಇನ್ನೂ ಸ್ವಲ್ಪಕಾಲ ಬದುಕಲು ಅವನು ಹಂಬಲಿಸಿದ, ಯಾಕೆಂದರೆ ಆ ಕವಿ ತಾನು ‘ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಬೇಕಾಗಿತ್ತು’.

ಕೆಲಸದ ಒತ್ತಡ ಎಷ್ಟೇ ಇದ್ದರೂ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವಲ್ಲಿ ಕವಿ ಸ್ವಭಾವತಃ ಕಟ್ಟುನಿಟ್ಟಿನವನಾಗಿದ್ದ. ಅವನ ಈ ಹೊತ್ತಿನ ಕಳವಳಕಾರಿ ಸ್ಥಿತಿಗೆ ಅವನ ವ್ಯಕ್ತಿತ್ವದಲ್ಲಿದ್ದ ಈ ಗುಣವೇ ಬಹುಮಟ್ಟಿಗೆ ಕಾರಣವಾಗಿತ್ತು. ಅವನು ಒಡೆಯನೂ ಪೋಷಕನೂ ಆಗಿದ್ದ, 1897ರಲ್ಲಿ ಅಕಾಲ ಮರಣಕ್ಕೆ ಈಡಾದ ವಿಜಯನಗರಂನ ಮಹಾರಾಜನಾದ ಆನಂದಗಜಪತಿಗೆ ಕೊಟ್ಟಿದ್ದ ಮಾತುಗಳನ್ನು ಈಡೇರಿಸುವ ಸಲುವಾಗಿ ಅವನು ಕಾನೂನಿನ ಕದನದಲ್ಲಿ ಹದಿನೈದು ವರ್ಷಗಳನ್ನು ಕಳೆಯಬೇಕಾಯಿತು. ಹುಟ್ಟಾ ದುರ್ಬಲ ದೇಹಿಯಾದ, ಸದಾ ನಿಶ್ಯಕ್ತನಾದ, ಪದೇ ಪದೇ ಕಾಯಿಲೆ ಬೀಳುವ ಪ್ರಕೃತಿಯವನಾದ ಅವನ ಮೇಲೆ ದಣಿವು ಮತ್ತು ಯಾತನೆಯ ಈ ದೀರ್ಘ ವರ್ಷಗಳು ಭೀಕರ ಪರಿಣಾಮವನ್ನು ಉಂಟು ಮಾಡಿದವು. ಮಕ್ಕಳಿಲ್ಲದ ಆನಂದಗಜಪತಿಯ ದತ್ತಕ ಉತ್ತರಾಧಿಕಾರಿಯಾದ ವಿಜಯರಾಮ ರಾಜುವಿನ ವಿರುದ್ಧ ಜಿಲ್ಲಾ ನ್ಯಾಯಾಲಯ ತೀರ್ಪು ಕೊಟ್ಟಾಗ ಕೂಡ ಅವನು ದೃಢವಾಗಿ, ನಿಶ್ಚಲವಾಗಿ ನಿಂತ. ಕಡಿಮೆ ನಿಷ್ಠೆ, ವಿಧೇಯತೆಯುಳ್ಳ ಮನುಷ್ಯ ನಾಗಿದಿದ್ದರೆ ಆತ ಇಲ್ಲಿ ಹಿಮ್ಮೆಟ್ಟಬಹುದಾಗಿತ್ತು. ಅನುಕೂಲಕರ ತೀರ್ಮಾ ನವನ್ನು ಉಚ್ಚ ನ್ಯಾಯಾಲಯ ಕೊಡುವ ಸಾಧ್ಯತೆ ಕಡಿಮೆಯಿದ್ದಾಗ ಅವನು ಬುದ್ಧಿವಂತಿಕೆಯಿಂದ ರಾಜಿ ಮಾಡಿಸಿ, ದತ್ತುವನ್ನು ತೊಂದರೆಯಿಂದ ಉಳಿಸಿದ.

ಹೀಗೆ ದಿವಂಗತ ಮಹಾರಾಜನಿಗೆ ಅವನು ಕೊಟ್ಟ ಮಾತುಗಳನ್ನು ಉಳಿಸಿ ಕೊಳ್ಳುವುದರಲ್ಲಿ ನಿರತನಾಗಿದ್ದಾಗ ಮುಖ್ಯವಾಗಿ ಒಬ್ಬ ಸಾಹಿತಿಯಾಗಿ ತನಗೆ ತಾನೇ ಕೊಟ್ಟುಕೊಂಡ ಭರವಸೆಗಳನ್ನು ಬಲವಂತವಾಗಿ ನಿರ್ಲಕ್ಷಿಸಬೇಕಾ ಯಿತು. ತನ್ನ ನಿಜವಾದ ಪ್ರತಿಭೆ ಮತ್ತು ಒಳಗಿನ ದರ್ಶನಕ್ಕೆ ಅನ್ಯಾಯ ಮಾಡುತ್ತಿ ದ್ದೇನೆಂಬುದು ಅವನನ್ನು ನೋಯಿಸಿತು. ಈ ಅನಿಸಿಕೆ ಚುಚ್ಚಿದಾಗ ಮತ್ತೆ ಮತ್ತೆ ತನ್ನ ಸಾಹಿತ್ಯದ ಕೆಲಸಗಳನ್ನು ಕೈಗೆತ್ತಿಕೊಂಡ. ಆದರೆ ಪ್ರತಿಸಾರಿಯೂ ಸ್ವಲ್ಪ ಸಮಯದ ನಂತರ ಅದನ್ನು ಕೈಬಿಡಬೇಕಾಗುತ್ತಿತ್ತು. ಹಂಚಿಹೋಗುವ ನಿಷ್ಠೆಯನ್ನು ಸಹಿಸದ ತನ್ನ ಪ್ರಬಲ ಪ್ರೇಯಸಿಯಂತಿದ್ದ ಸಾಹಿತ್ಯ ಎಂಬುದನ್ನು ಅವನು ಅರ್ಥಮಾಡಿಕೊಳ್ಳಲೇ ಬೇಕಾಯಿತು. ವಿಜಯನಗರಂ ಪ್ರಾಧಿಕಾರದ ಸೇವೆಯಿಂದ ನಿವೃತ್ತನಾಗುವ ದಿನವನ್ನು ಆ ಕವಿ ಆತುರದಿಂದ ಎದುರು ನೋಡುತ್ತಿದ್ದ.

ಕೊನೆಗೂ ಅವನ ಆಸೆ ಈಡೇರಿತು. 1913ರ ಫೆಬ್ರವರಿ 12ರಂದು ಒಂದು ವಿಶೇಷ ಮತ್ತು ಗಣನೀಯ ಪ್ರಮಾಣದ ನಿವೃತ್ತಿ ವೇತನದೊಂದಿಗೆ ಆತ ನಿವೃತ್ತಿ ಪಡೆಯಲು ಪ್ರಾಧಿಕಾರದ ಅಧಿಕಾರಿಗಳು ಅನುಮತಿಸಿ ದರು. ಉಳಿದಂತೆಯೂ ಅವರು ಉದಾರವಾಗಿದ್ದರು. ಅನೇಕ ವರ್ಷಗಳಿಂದ ಕಡಿಮೆ ಬಾಡಿಗೆ ಕೊಡುತ್ತ ವಾಸವಾಗಿದ್ದ ಮನೆಯನ್ನು ಅವನಿಗೆ ಕೊಡುಗೆಯಾಗಿ ಕೊಟ್ಟರು. ಅದನ್ನು ರಿಪೇರಿ ಮಾಡಿಸುವುದಕ್ಕೂ ಅವರು ಸಹಾಯ ಮಾಡಿದರು. ತನ್ನ ಗ್ರಂಥಾಲಯಕ್ಕಾಗಿ ಕವಿ ಹಳೆಯ ಮನೆಗೆ ಒಂದು ಭಾಗವನ್ನು ಸೇರಿಸಿದ. ಅನೇಕ ವರ್ಷಗಳಿಂದ ಆಸೆಯಿಂದ ಸಂಗ್ರಹಿಸಿದ್ದ ತನ್ನ ಪುಸ್ತಕಗಳೊಂದಿಗೆ ಈಗ ಹಿತಕರವಾದ ಅಭ್ಯಾಸದಲ್ಲಿ ತೊಡಗಬಹುದಿತ್ತು. ತನ್ನ ಸಾಹಿತ್ಯಕ ಯೋಜನೆಗಳ ಕೆಲಸವನ್ನು ಮಾಡಬಹುದಿತ್ತು. ಅವನ ಬಿಡಿ ಚಿಂತನೆಗಳು, ವಿವಿಧ ಅನುಭವಗಳು, ಸ್ಥಳಗಳ ಬಗೆಗಿನ ತನ್ನ ಅಭಿಪ್ರಾಯಗಳು, ಬದುಕು ಮತ್ತು ಬರಹವನ್ನು ಕುರಿತ ಅವನ ಚಿಂತನೆಗಳು, ಮನುಷ್ಯ ಮತ್ತು ಮನುಷ್ಯ ಸ್ವಭಾವದ ಹಾಗೂ ಮನುಷ್ಯನ ಭವಿಷ್ಯವನ್ನು ಕುರಿತ ಅವನ ದರ್ಶನಗಳನ್ನು ಮುಂದಿನ ಬಳಕೆಗಾಗಿ ಆಗಾಗ ದಾಖಲುಗೊಳಿಸುತ್ತಿದ್ದ. ತಮ್ಮ ಹೊಳಹುಗಳಿಂದ ಅವನನ್ನು ಸಂತೋಷಗೊಳಿಸಿದ ಚಮತ್ಕಾರ, ಹಾಸ್ಯ, ವ್ಯಂಗ್ಯ ಅಥವಾ ಕುಹಕದ ಮುತ್ತಿಗೆಗಳನ್ನೂ ತಮ್ಮ ಸೌಂದರ್ಯ ಮತ್ತು ಶಕ್ತಿಯಿಂದ ಅವನನ್ನು ಚಕಿತಗೊಳಿಸಿದ ಜನಪ್ರಿಯ ಮಾತಿನ ಪ್ರತಿಯೊಂದು ವಿಶಿಷ್ಟ ತಿರುವು ಮತ್ತು ಅತೀ ಸೂಕ್ಷ್ಮ ವ್ಯತ್ಯಾಸವನ್ನೂ ಗುರುತು ಹಾಕುತ್ತಿದ್ದ. ಅವನ ದಿನಚರಿ ಮತ್ತು ಟಿಪ್ಪಣಿ ಪುಸ್ತಕಗಳು ಈ ಎಲ್ಲ ಸಂಪತ್ತಿನಿಂದ ಉಬ್ಬುತ್ತಿದ್ದವು, ಇದರಿಂದಾಗಿ ಅವನು ಬೇಗ ಮತ್ತು ಫಲಕಾರಿಯಾಗಿ ಕೆಲಸ ಮಾಡುವುದು ಸಾಧ್ಯವಾಯಿತು.

ವಾಸ್ತವವಾಗಿ ಅವನು ರೂಪಿಸಿಕೊಂಡ ಅನೇಕ ಪಾತ್ರಗಳು ಹುಟ್ಟಲು ಕಾತುರ ಪಡುತ್ತಿದ್ದವು. ಅದರಿಂದ ಅವು ತಮ್ಮ ಪಾತ್ರಗಳನ್ನು ವಹಿಸಬಹುದಿತ್ತು, ಆತ್ಮಗಳನ್ನು ತೆರೆದಿರಿಸಬಹುದಿತ್ತು, ಗುರಿಗಳನ್ನು ಕಂಡುಕೊಳ್ಳಬಹುದಿತ್ತು. ಅಲ್ಲದೆ ಕಳಿಂಗನ ಚರಿತ್ರೆಗಾಗಿ ಕಲೆಹಾಕಿದ ಶಾಸನದ ಮತ್ತಿತರ ಸಾಮಗ್ರಿಗಳು ದಶಕಗಳಿಂದ ಬೀಗ ಹಾಕಿದ ಪೆಟ್ಟಿಗೆಗಳಿಂದ ಹೊರಬರಲು ನರಳುತ್ತಿದ್ದವು. ಆಡುತೆಲುಗಿನ ರೋದನ ಇನ್ನೂ ಕರುಣಾ ಜನಕವಾಗಿತ್ತು. ಸಾಹಿತ್ಯ ಸಾಮ್ರಾಜ್ಯದಲ್ಲಿ ಆಡುತೆಲುಗನ್ನು ಅದರ ಹಕ್ಕಿನ ಸಿಂಹಾಸನದ ಮೇಲೆ ಸ್ಥಾಪಿಸಲು ಒಂದು ಧರ್ಮಯುದ್ಧವನ್ನೇ ಪ್ರಾರಂಭಿಸಿದ ಮೇಲೆ ಶುಷ್ಕಪಂಡಿತ ಹಗೆಗಳಿಂದ ಊನಗೊಳ್ಳಲು ಅಥವಾ ಕೊಲೆಯಾಗಲು ಅದನ್ನು ಬಿಡುವುದು ಹೇಗೆ? ಹೌದು, ಅವನು ಮಾಡಬೇಕಾದ ಕೆಲಸ ಬಹಳ ಇತ್ತು. ಇನ್ನು ಹತ್ತು ಅಥವಾ ಐದು ವರ್ಷಗಳ ಬದುಕಾದರೂ ಅವನಿಗಿದ್ದಿದ್ದರೆ ಇದರಲ್ಲಿ ಬಹುತೇಕ ಕೆಲಸಗಳನ್ನು ಅವನು ಮಾಡಬಹುದಿತ್ತು.

ಆದರೆ ಇದು ಸಾಧ್ಯವಾಗಲಿಲ್ಲ. ಬಹುಬೇಗ ಸಾವು ಅವನನ್ನು ಸಮೀಪಿ ಸಿತು. ಅವನನ್ನು ತಲುಪಲು ಅದು ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಅದರ ಅಸ್ಪಷ್ಟ ಹೆಜ್ಜೆದನಿ ಅವನಿಗೆ ಕೇಳಿಸುತ್ತಿತ್ತು. ಅದು ತನ್ನ ಶೀತಲ ಕೈಗಳನ್ನು ಈಗ ಯಾವ ಕ್ಷಣದಲ್ಲಾದರೂ ಅವನ ಮೇಲೆ ಇಡಬಹುದಿತ್ತು. ಅದರಿಂದ ತಪ್ಪಿಸಿಕೊ ಳ್ಳುವಂತಿರಲಿಲ್ಲ. ಆದರೆ ಸಾವು ಅವನನ್ನು ಆಕ್ರಮಿಸಿಕೊಳ್ಳುವ ಮೊದಲು ಜೀವನದಲ್ಲಿ ಕೊನೆಯ ಬಾರಿಗೆ ಅವನು ದಂಗೆ ಏಳುತ್ತಾನೆ: ಮಲಗುವ ಕೋಣೆಯ ಬಾಗಿಲು ಮತ್ತು ಕಿಟಕಿಗಳು ತೆರೆಯಲಿ, ಅವನ ಬಡಕಲಾದ, ಸೋತ ದೇಹವನ್ನು ಸುತ್ತಿದ್ದ ಉಣ್ಣೆ ಮತ್ತು ಫ್ಲಾನಲ್‌ಗಳು ತೆಗೆಯಲಿ, ಹೊಳೆಯುವ ಸೂರ್ಯರಶ್ಮಿಗಳು ಅವನನ್ನು ಚುಂಬಿಸಲಿ, ಬೆಳಗಿನ ತಣ್ಣನೆಯ ಗಾಳಿ ಅವನನ್ನು ಮುದ್ದಿಸಲಿ, ಒಂದು ಲೋಟ ಅವನ ಮೆಚ್ಚಿನ ಮದ್ಯವನ್ನು ಒಂದು ಹಿಡಿ ವೀಳೆಯವನ್ನು ಯಾರಾದರೂ ತರಲಿ. ಕವಿಯ ಮಗ ಗಾಬರಿಯಿಂದ ಮನೆಯ ವೈದ್ಯನತ್ತ ನೋಡುತ್ತಾನೆ, ವೈದ್ಯ ದುಃಖದಿಂದ ಒಪ್ಪಿಗೆ ಸೂಚಿಸುತ್ತಾನೆ. ಮದ್ಯ ತರಲಾಯಿತು, ಕವಿ ಕೊನೆಯ ಹನಿಯವರೆಗೂ ಅದನ್ನು ಹೀರುತ್ತಾನೆ. ವೀಳೆಯವೂ ಬಂದಿತು.

ಕವಿ ಸಂತೋಷ ದಿಂದ ಜಗಿಯುತ್ತಾನೆ. ಕೂಡಲೇ ಸಂತಸದ ದಿನಗಳ ಸಾವಿರಾರು ನೆನಪುಗಳು ಅವನಲ್ಲಿ ಎಚ್ಚರಗೊಳ್ಳುತ್ತವೆ. ಅವು ಅವನ ಬಣ್ಣಗೆಟ್ಟ ಮುಖಕ್ಕೆ ಅಲೌಕಿಕವಾದ, ಉತ್ಸಾಹಪೂರ್ಣವಾದ ಬೆಳಕನ್ನು ತರುತ್ತವೆ. ಎಲ್ಲ ಎಚ್ಚರಿಕೆಗಳು, ಎಲ್ಲ ಆತಂಕಗಳು, ದಾರುಣರೋಗದ ನೋವುಗಳು ಕೂಡ ಅವನಿಂದ ದೂರವಾಗುತ್ತವೆ. ಅವನ ಆ ತುಂಟತನ ಮತ್ತೆ ಚುರುಕಾಗುತ್ತದೆ. ಅವನು ವೈದ್ಯರತ್ತ ತಿರುಗಿ ಕಣ್ಣಿನಲ್ಲಿ ತುಂಟತನದ ಹೊಳಪಿನೊಂದಿಗೆ ಹೇಳುತ್ತಾನೆ: ‘ನನ್ನ ಪ್ರಿಯ ವೈದ್ಯ! ನಾನು ಉಳಿದರೆ ಪಥ್ಯಶಾಸ್ತ್ರದ ಮೇಲೆ ಒಂದು ಗ್ರಂಥ ಬರೆಯುತ್ತೇನೆ. ನೀವು ಇಷ್ಟು ದೀರ್ಘಕಾಲ ಇಷ್ಟು ಕಟ್ಟುನಿಟ್ಟಾಗಿ ನನ್ನನ್ನು ಪಥ್ಯದಲ್ಲಿಟ್ಟು ಆ ವಿಷಯದಲ್ಲಿ ನನ್ನನ್ನು ಪರಿಣತನನ್ನಾಗಿ ಮಾಡಿದ್ದೀರಿ. ತಮಾಷೆಯನ್ನು ಅವನು ಮುಗಿಸುವ ಮುಂಚೆಯೇ ಸಾವು ಒಳಗೆ ಕಾಲಿಡುತ್ತದೆ. ಸ್ಥಳೀಯ ಪತ್ರಿಕಾ ವರದಿಗಾರರು ಹತ್ತಿರದ ತಂತಿಕಚೇರಿಗೆ ನುಗ್ಗಿ ದುಃಖದ ಸುದ್ದಿಯನ್ನು ತಂತಿಸಿದರು, ಕವಿ ಗುರಜಾಡದ ವೆಂಕಟ ಅಪ್ಪಾರಾವ್ ಇನ್ನಿಲ್ಲ’.

ಆದರೆ ನಿಜವಾಗಿ ಅವರು ಸತ್ತರೆ? ಇಲ್ಲ, ಅವರಿಗೆ ಸಾವು ಬದುಕಿನ ಹೆಬ್ಬಾಗಿಲಾಗಿತ್ತು. ಅದರ ಮೂಲಕ ಅವರು ಇನ್ನೂ ವಿಸ್ತಾರವಾದ, ಸತ್ಯವಾದ ಮತ್ತು ಹೆಚ್ಚು ಸತ್ವಯುತ ಜೀವನಕ್ಕೆ ನಡೆದಿದ್ದರು. ಅವರು ಜೀವಿಸಿದ್ದಾಗ ತೆಲುಗು ಸಾಹಿತ್ಯದ ಮೊದಲಿಗರಾಗಿ ಅವರ ಪ್ರಭಾವ ತೀರ ಸೀಮಿತವಾಗಿತ್ತು. ಬಹುತೇಕ ಕಡೆಗಣಿಸಬಹುದಾದಷ್ಟು. ಅವರ ಪ್ರತಿಯೊಬ್ಬ ಮೆಚ್ಚುಗರಿಗೂ ಅವರಿಗೆ ನೂರು ಸಾವಿರ ನಿಂದಕರಿದ್ದರು. ಅವರಲ್ಲಿ ಕಡಿಮೆ ನಿಂದಿಸುವವರು ಅವರನ್ನು ದುರ್ಬಲ ಕಾವ್ಯಕಲ್ಪನೆಯುಳ್ಳ ಹಾಗೂ ಇನ್ನೂ ದುರ್ಬಲವಾದ ವಿದ್ವತ್ತುಳ್ಳ ಅನನುಭವಿ ಎಂದು ಕರೆದರು, ಇನ್ನುಳಿದವರು ಅಳಲೆಕಾಯಿ ಪಂಡಿತನೆಂದು ಬಿರುದು ಕೊಟ್ಟರು. ಅವರ ಶ್ರೇಷ್ಠ ನಾಟಕವಾದ ‘ಕನ್ಯಾಶುಲ್ಕಂ’ ಕೂಡ ಒಟ್ಟಾಗಿ ಈ ಖಂಡನೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅದರ ಚಾತುರ್ಯ ಮತ್ತು ಹಾಸ್ಯ, ಉತ್ಸಾಹ ಮತ್ತು ಗೆಲುವುಗಳನ್ನು ಒಪ್ಪುತ್ತಾ ಅದರ ಅಭಿರುಚಿ ಮತ್ತು ನೀತಿಯನ್ನು ಪ್ರಶ್ನಿಸಿದರು. ಗುರಜಾಡರ ಕಾವ್ಯ ಮತ್ತು ಅವರ ನಾಟಕಕ್ಕಿಂತ ಸೃಜನಶೀಲ ಸಾಹಿತ್ಯದ ಮಾಧ್ಯಮವಾಗಿ ಆಡುತೆಲುಗನ್ನು ಅವರು ಪ್ರತಿಪಾದಿಸಿದ್ದು ಅವರನ್ನು ಕೆಣಕಿತು. ‘‘ಮಾರುಕಟ್ಟೆಯ, ಹೊಲ ಮತ್ತು ಕಾರ್ಖಾನೆಯ, ದಿನನಿತ್ಯದ ಒರಟು ಮತ್ತು ತಡವರಿಸುವ ಭಾಷೆಯನ್ನು ಸಾಹಿತ್ಯವೂ ಸೇರಿದಂತೆ ಎಲ್ಲ ಕಲೆಗಳ ಸಾಕಾರವಾದ ಅಧಿದೇವತೆ ಸರಸ್ವತಿಯ ಉಪಾಸನೆಗೆ ಹೇಗೆ ಬಳಸಲಾದೀತು? ಅವಳ ಸಂವೇದನಾಶೀಲ ಕಿವಿಗಳನ್ನು ಈ ಕರ್ಕಶಧ್ವನಿಯು ನೋಯಿಸುವುದಿಲ್ಲವೆ? ಅವಳ, ಕೋಮಲ ಸಂವೇದನೆಗಳನ್ನು ಘೋರ ಒರಟುತನಗಳು ಆಘಾತಿಸುವುದಿಲ್ಲವೇ?’’ ಎಂದು ಅವರು ಗುಡುಗಿದರು. ಅರೆಬರೆ ಸಾಹಿತಿಯಾದ ಗುರಜಾಡ ಅರೆ ಅಕ್ಷರಸ್ಥರ ಭಾಷೆಯಾದ ಆಡುತೆಲುಗಿಗಾಗಿ ಹೋರಾಡುತ್ತಿದ್ದಾರೆ ಎಂದು ಅವರು ಸಮಾಧಾನ ಪಟ್ಟುಕೊಂಡರು.


ಗುರಜಾಡರಿಗಿದ್ದ ಶುಷ್ಕ ಪಂಡಿತರ ಬಲವಾದ ವಿರೋಧ ಆಶ್ಚರ್ಯವ ನ್ನುಂಟು ಮಾಡಬೇಕಿಲ್ಲ. ಯಾಕೆಂದರೆ ಎಲ್ಲ ವಿಧದಲ್ಲಿಯೂ ಆತ ಅವರಿಗೆ ವಿರೋಧಿಯಾಗಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಅವರ ಪ್ರಶಂಸಕ ರಲ್ಲಿ ಕೂಡ ತೀರ ಕೆಲವರು ಮಾತ್ರ ಅವರ ಮಾರ್ಗವನ್ನು ಅನುಸರಿಸಲು ಮುಂದಾದದ್ದೇಕೆ ಎಂಬುದು ಚಕಿತಗೊಳಿಸುತ್ತದೆ. ಅವರಲ್ಲಿ ಯಾರೊಬ್ಬರೂ ಆಡುತೆಲುಗಿನಲ್ಲಿ ನಾಟಕಗಳನ್ನು ಬರೆಯಲಿಲ್ಲ. ಗುರಜಾಡರು ಕಂಡುಹಿಡಿದ ಹೊಸ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಲಿಲ್ಲ. ತೆಲುಗು ಸಾಹಿತ್ಯಕ್ಕೆ ಮೊದಲಸಾರಿಗೆ ಅವರು ಪರಿಚಯಿಸಿದ ಸಣ್ಣ ಕಥೆಗಳಲ್ಲೂ ಹೆಚ್ಚು ಆಸಕ್ತಿ ತೋರಿಸಲಿಲ್ಲ. ಅವರು ತಮ್ಮ ಕಾಲಕ್ಕಿಂತ ತುಂಬ ಮುಂದಿದ್ದುದು ಇದಕ್ಕೆ ಇರಬಹುದಾದ ಕಾರಣಗಳಲ್ಲಿ ಒಂದು. ಎರಡನೆಯದಾಗಿ ಅವರ ಬರವಣಿಗೆ ಯ ಪ್ರಮಾಣ ಹೆಚ್ಚಾಗಲಿಲ್ಲ. ಒಂದು ಪೂರ್ಣಪ್ರಮಾಣದ ಹಾಗೂ ಎರಡು ಅಪೂರ್ಣವಾದ ನಾಟಕಗಳು, ಐದು ಸಣ್ಣ ಕಥೆಗಳು, (ಇದರಲ್ಲಿ ಒಂದು ಇಂಗ್ಲಿಷಿನಲ್ಲಿದೆ), ಹಾಡು ಮತ್ತು ಕವಿತೆಗಳ ಒಂದು ಸಣ್ಣಗುಚ್ಛ, ಪ್ರಬಂಧಗಳ ಒಂದು ಚಿಕ್ಕ ಸಂಕಲನ ಇವಿಷ್ಟೆ. ಎಲ್ಲಕ್ಕಿಂತ ಹೆಚ್ಚಾಗಿ ‘ಕನ್ಯಾಶುಲ್ಕಂ’ ಮತ್ತು ‘ನೀಲಗಿರಿ ಪಾಟಾಲು’ (ನೀಲಿಬೆಟ್ಟದ ಹಾಡುಗಳು)ಗಳ ಹೊರತಾಗಿ ಬಹಳ ಕಡಿಮೆ ಇದ್ದ ಅವರ ಉಳಿದ ಬರಹಗಳು ಅವರು ಬದುಕಿದ್ದಾಗ ಪುಸ್ತಕ ರೂಪದಲ್ಲಿ ಬರಲಿಲ್ಲ. ಆಡುತೆಲುಗಿನಲ್ಲೇ ಬರೆಯುವ ಅವರ ಹಟದಿಂದಾಗಿ ಆಗಿನ ಪ್ರಮುಖ ಪತ್ರಿಕೆಗಳು ಅವರ ಬರಹಗಳನ್ನು ಪ್ರಕಟಿಸಲು ತಾತ್ಸಾರ ತೋರಿದವು. ಅವರ ಒಟ್ಟು ಬರಹವೇ ಇಷ್ಟು ಕಡಿಮೆ. ಈ ಸ್ವಲ್ಪ ಬರಹ ಕೂಡ ವ್ಯಾಪಕ ಪ್ರಚಾರದಿಂದ ವಂಚಿತವಾದಾಗ ಅವರ ಪ್ರಭಾವ ಸ್ವಲ್ಪವಲ್ಲದೆ ಇನ್ನೇನಾಗಬಹುದು?

ಏನೇ ಇರಲಿ ಗುರಜಾಡ ಬದುಕಿದ್ದಾಗ ಅವರ ಪ್ರಭಾವ ಪ್ರಕಟವಾಗಲಿಲ್ಲ. ಆದರೆ ಅದು ಸಾಧ್ಯವಾದದ್ದು ಬಹುಕಾಲದ ನಂತರ. ಪ್ರಾರಂಭದಲ್ಲಿ ಮಂದಗತಿಯ ಜಿನುಗು, ಅದು ಮೊದಲು ನಿಧಾನವಾಗಿ ಆನಂತರ ಕ್ಷಿಪ್ರವಾಗಿ ತನ್ನ ಉಬ್ಬರದೊಂದಿಗೆ ಪ್ರಬಲ ತೊರೆಯಾಗಿ ಬೆಳೆಯಿತು. ಕೆಲವು ಹುಚ್ಚಾಟಿಕೆ ಹಾಗೂ ಅವಶೇಷಗಳನ್ನುಳಿದು ಮೂವತ್ತರಿಂದ ಈಚೆಗೆ ಪ್ರಜ್ಞಾಪೂರ್ವಕವಾಗಿಯಾಗಲೀ ಅಪ್ರಜ್ಞಾಪೂರ್ವಕವಾಗಿಯಾಗಲೀ ಅದರ ಮಾಂತ್ರಿಕ ಪ್ರಭಾವದ ಅಡಿಯಲ್ಲಿ ಬರದಿರುವ ತೆಲುಗು ಲೇಖಕನೇ ಇಲ್ಲ. ಆಧುನಿಕ ತೆಲುಗು ಬರಹಗಾರರಲ್ಲೆಲ್ಲ ಅವರು ಹೆಚ್ಚಿನ ಮೆಚ್ಚುಗೆ, ಚರ್ಚೆ, ಅನುಕರಣೆಯನ್ನು ಪಡೆದಿದ್ದಾರೆ. ಅವರು ಉಳಿಸಿದ ಒಂದೊಂದು ಚೂರನ್ನೂ ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ ಪ್ರಕಟಿಸಲಾಗುತ್ತಿದೆ.

ಅವರನ್ನು ಹರಿಕಾರರೆಂದು ಅಭಿನಂದಿಸಿ ಕವನ, ಹಾಡು, ಶೋಕಗೀತೆ, ವಿಮರ್ಶೆ, ವ್ಯಕ್ತಿಚಿತ್ರ ಹಾಗೂ ಜೀವನಚರಿತ್ರೆಗಳನ್ನು ಬರೆಯಲಾಗುತ್ತಿದೆ. 1962 ರಲ್ಲಿ ಆಂಧ್ರಪ್ರದೇಶದ ಪ್ರತಿಯೊಂದು ನಗರದಲ್ಲಷ್ಟೆ ಅಲ್ಲದೆ ರಾಜ್ಯದ ಹೊರಗೆ ಆಂಧ್ರ ಸಮಾಜದವರು ಇರುವ ಕಡೆಗಳಲ್ಲೆಲ್ಲ ಅವರ ಜನ್ಮಶತಾಬ್ಧಿಯನ್ನು ಪ್ರೀತಿ ಮತ್ತು ಗೌರವಗಳಿಂದ ಆಚರಿಸಲಾಯಿತು. ತಮ್ಮನ್ನು ತಾವು ಪ್ರಗತಿಶೀಲ ಬರಹಗಾರರೆಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡುವವರು ಅವರ ಭಾವೋದ್ರೇಕ ಪ್ರಶಂಸೆಯಿಂದ ಅವರನ್ನು ಒಂದು ಸಾಹಿತ್ಯ ಪಂಥದ ಕೇಂದ್ರ ವ್ಯಕ್ತಿಯಾಗಿ ಮಾಡುವ ಅತಿರೇಕಕ್ಕೂ ಹೋದರು. ಸಂಪ್ರದಾಯಸ್ಥರು ಕೂಡ ತಿರಸ್ಕಾರ ಮತ್ತು ಕುಚೋದ್ಯದಿಂದ ಅವರನ್ನು ತಳ್ಳಿಹಾಕುವುದನ್ನು ಬಿಟ್ಟಿದ್ದಾರೆ. ಅಂದಮೇಲೆ ಗುರಜಾಡರಿಗೆ ಸಾವು ನಿಜವಾಗಿ ‘ಬದುಕಿನ ಹೆಬ್ಬಾಗಿಲು’ ಆಯಿತು ಎಂಬುದನ್ನು ಅಲ್ಲಗೆಳೆಯಲು ಯಾರಿಗೆ ಧೈರ್ಯವಿದೆ?

Writer - ಪಿ.ಜೆ. ಬೇಲಿ

contributor

Editor - ಪಿ.ಜೆ. ಬೇಲಿ

contributor

Similar News