ಟಿಪ್ಪು ಸುಲ್ತಾನನ ರಾಜನೀತಿ

Update: 2017-11-11 13:05 GMT

ಸ್ಥಳೀಯ ಸಂಪನ್ಮೂಲಗಳು ಮತ್ತು ಮೈಸೂರಿನ ಹವಾಮಾನಕ್ಕನುಗುಣವಾಗಿ ರಾಜ್ಯವನ್ನು ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆಗೊಳಿಸುವ ಮಹತ್ವದ ಉದ್ದೇಶ ಟಿಪ್ಪು ಸುಲ್ತಾನನಿಗೆ ಇತ್ತು. ಕುದುರೆ ಸಾಕಣೆಯಲ್ಲಿ ಟಿಪ್ಪು ಸುಲ್ತಾನನಿಗಿದ್ದ ಆಸಕ್ತಿ ಮತ್ತು ಆತನ ಶ್ರಮದ ಪರಿಣಾಮವಾಗಿ ವಿಶ್ವದಲ್ಲೇ ಶ್ರೇಷ್ಠ ಎನಿಸುವ ಅತ್ಯಂತ ಉತ್ತಮ ತಳಿಯ ಕುದುರೆಗಳನ್ನು ಆತ ಬೆಳೆಸಿದ್ದ. ಕುದುರೆ ಸಾಕಣೆಗಾಗಿಯೇ ಪ್ರತ್ಯೇಕ ಫಾರಂ ಮಾಡಿದ್ದ. ಈತನ ಕುದುರೆ ಫಾರಂನಲ್ಲಿದ್ದ ಕುದುರೆಗಳು ಅದೆಷ್ಟು ಉತ್ತಮವಾಗಿದ್ದವೆಂದರೆ ಟಿಪ್ಪು ಮಡಿದ ನಂತರ ರಾಬರ್ಟ್ ಕ್ಲೈವ್ ದಂಪತಿಕೆಲವು ಕುದುರೆಗಳನ್ನು ಬ್ರಿಟನ್‌ಗೆ ಸಾಗಿಸುತ್ತಾರೆ. ಟಿಪ್ಪು ಸುಲ್ತಾನನ ನೆಚ್ಚಿನ ಕುದುರೆ ಅರಬ್ ಮೇರ್ ಅನ್ನು ಶ್ರೀರಂಗಪಟ್ಟಣದಿಂದ ವೇಲ್ಸ್‌ಗೆ ಕಳುಹಿಸಲಾಗುತ್ತದೆ. ‘ಬೆಣ್ಣೆ ಛಾವಡಿ’ ಎಂದು ಹೆಸರಿಸಿ ಹೈನುಗಾರಿಕೆಯನ್ನು ಟಿಪ್ಪು ಸ್ಥಾಪಿಸಿದ್ದ. ನಂತರದಲ್ಲಿ ಇದೇ ಬೆಣ್ಣೆ ಛಾವಡಿ ‘ಅಮೃತ ಮಹಲ್’ ಇಲಾಖೆಯಾಯಿತು. ಎತ್ತುಗಳು ಮತ್ತು ಗೂಳಿಗಳ ಸಂತಾನೋತ್ಪತ್ತಿಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಹಳ್ಳೀಕಾರ್ ತಳಿಯ ಗೂಳಿಗಳನ್ನು ಸೇನೆಯ ಫಿರಂಗಿಗಳನ್ನು ಎಳೆಯಲು ಬಳಸಲಾಗುತ್ತಿದ್ದು ಈ ಎತ್ತುಗಳು ಎರಡೂವರೆ ದಿನಗಳಲ್ಲಿ 100 ಮೈಲಿಗಳನ್ನು ಕ್ರಮಿಸುತ್ತಿದ್ದವು.

ಹೀಗೆ ಯುದ್ಧಕ್ಕೆ ಮತ್ತು ಕೃಷಿಗೆ ಸಂಬಂಧಿಸಿದ ವಿವಿಧ ಪಶು ಸಾಕಣೆಯನ್ನು ಟಿಪ್ಪು ಸುಲ್ತಾನ ಬಹುವಾಗಿ ಉತ್ತೇಜಿಸಿದ್ದ. ಟಿಪ್ಪು ಸುಲ್ತಾನನ ಸಾಮ್ರಾಜ್ಯದಲ್ಲಿ ವಿಫುಲವಾಗಿದ್ದ ಐನಾತಿ ಎತ್ತು, ಗೂಳಿ ಮುಂತಾದವನ್ನು ಶ್ರೀರಂಗಪಟ್ಟಣದ ಆಕ್ರಮಣದ ನಂತರ ಬ್ರಿಟಿಷರು ತಮ್ಮ ಯುದ್ಧಕಾರಣಕ್ಕೆ ಬಳಸಿಕೊಳ್ಳಲು ವಶಕ್ಕೆ ಪಡೆದರು.

ಕರ್ನಾಟಕಕ್ಕೆ ರೇಷ್ಮೆ ಬೆಳೆಯನ್ನು ಪರಿಚಯಿಸಿದವ ಟಿಪ್ಪು ಸುಲ್ತಾನ. ಕೃಷಿಯ ಬಗ್ಗೆ ಟಿಪ್ಪು ಸುಲ್ತಾನನ ಕ್ರಮಗಳು, ಕಾಳಜಿಗಳು ಎಷ್ಟು ಆಳವಾದವುಗಳೆಂದರೆ, ರೇಷ್ಮೆಯ ಉತ್ತಮ ತಳಿ ಹುಡುಕಾಟಕ್ಕಾಗಿ ಜನರನ್ನು ನಿಯೋಜಿಸುತ್ತಾನೆ, ಬಂಗಾಳ, ಚೀನಾ ಮುಂತಾದ ಪ್ರದೇಶಗಳಿಗೆ ಅವರನ್ನು ಕಳುಹಿಸುತ್ತಾನೆ. ಹಾಗೆ ತರಿಸಿಕೊಂಡ ಮೊಟ್ಟೆಗಳಾಗಿರಲಿ, ಹುಳಗಳಾಗಿರಲಿ, ಅವುಗಳನ್ನು ಸಾಕಣೆೆ ಮಾಡುವ ಕ್ರಮಗಳನ್ನು ಕಲಿತುಕೊಳ್ಳುವುದಕ್ಕಾಗಿ ಆ ಪ್ರದೇಶದ ಕೃಷಿಕರನ್ನೇ ಕರೆಸಿಕೊಂಡು ಸಂಭಾವನೆ ನೀಡುತ್ತಾನೆ. ಹಲವು ಪ್ರದೇಶಗಳ ಹುಡುಕಾಟ ಮತ್ತು ಪ್ರಯೋಗಗಳ ನಂತರ ಟಿಪ್ಪು ದಕ್ಷಿಣ ಚೀನಾದ ತಳಿಯಿಂದ ಉತ್ತಮ ರೇಷ್ಮೆ ಉತ್ಪಾದನೆಯನ್ನು ಸಾಧಿಸುತ್ತಾನೆ.

Writer - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Editor - ಡಾ॥ ಲಕ್ಷ್ಮೀಪತಿ.ಸಿ.ಜಿ

contributor

Similar News