ರಶ್ಯಾ ಕ್ರಾಂತಿಗೆ ನೂರು ವರ್ಷ

Update: 2017-11-11 17:24 GMT
Editor : ಲಲಿತಾ

ಕ್ರಾಂತಿಯು ಹುಟ್ಟುಹಾಕಿದ ಪ್ರಭಾವ ಮತ್ತು ಸ್ಫೂರ್ತಿ, ಅದರ ನಂತರ ಪರ್ಯಾಯವಾದ ಹಾಗೂ ಹಳೆಯದಕ್ಕಿಂತಲೂ ಅಪಾರವಾಗಿ ಶ್ರೇಷ್ಠವಾದ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಲು ನಡೆಸಿದ ಪ್ರಯತ್ನಗಳು ಚರಿತ್ರೆಯ ಮತ್ತು ಮಾನವ ಕುಲದ ಭವಿಷ್ಯದ ಬೆಳವಣಿಗೆಯ ಮೇಲೆ ಅಳಿಸಲಾಗದ ಗುರುತನ್ನು ಉಳಿಸಿವೆ. ಅದು 20ನೆ ಶತಮಾನದ ಎಲ್ಲಾ ಪ್ರಮುಖ ಹೋರಾಟಗಳ ಮೇಲೆ ಮತ್ತು ವಿಮೋಚನಾ ವಿದ್ಯಮಾನದ ಮೇಲೆ ಬೀರಿರುವ ಪ್ರಭಾವ ಸಾಟಿಯಿಲ್ಲದ್ದು. ಸಮಾಜವನ್ನು ಪರಿವರ್ತಿಸುವ ಪಣತೊಟ್ಟಿರುವ ಜನರ ಪಾಲಿಗೆ ಇಂದಿಗೂ ಬಹು ಪ್ರಸ್ತುತವಾದುದು.

2017ರ ನವೆಂಬರ್ 7ಕ್ಕೆ ರಶ್ಯಾ ಕ್ರಾಂತಿಗೆ 100 ವರ್ಷ. ರಶ್ಯಾ ಕ್ರಾಂತಿಯ ಶತ ಮಾನೋತ್ಸವವನ್ನು ಅನೇಕ ಎಡಪಂಥೀಯ ಸಂಘಟನೆಗಳು ಆಚರಿಸುತ್ತಿವೆ. ಮಿಕ್ಕವರು ತಮಗೆ ಸಂಬಂಧವಿಲ್ಲ ಎಂಬಂತೆಯೂ ಇದ್ದಾರೆ. ಇದು ಗತ ವೈಭವವನ್ನು ಕೊಂಡಾಡುವ ಆಚರಣೆಯೂ ಆಗಬಾರದು, ಮನುಕುಲದ ಇತಿಹಾಸದ ಬಹುಮುಖ್ಯ ಮೈಲಿಗಲ್ಲೊಂದನ್ನು ಮರೆಯುವುದೂ ಆಗಬಾರದು. ರಶ್ಯಾ ಕ್ರಾಂತಿಯ ಸಂದರ್ಭವು ಸಮಾನತೆಯನ್ನು ಆಶಿಸುವವರಿಗೆ ನೀಡಿದ ಪಾಠಗಳನ್ನು ಹೆಕ್ಕಿಕೊಳ್ಳುವ ಅವಕಾಶವಾಗಬೇಕು.

ರಶ್ಯಾ ಕ್ರಾಂತಿಯ ಫಲಾನುಭವಿಗಳು ಕೇವಲ ರಷ್ಯನ್ ಜನತೆ ಮಾತ್ರವಲ್ಲ. ನಾವು, ನೀವು ಮತ್ತು ಇಡೀ ಜಗತ್ತಿನ ಜನತೆ ರಶ್ಯಾ ಕ್ರಾಂತಿಗೆ ಋಣಿಗಳು. ಆರಂಭಿಕ 20ನೆ ಶತಮಾನವು ಒಂದೆಡೆ ಬ್ರಿಟಿಷ್, ಸ್ಪೇನ್, ಫ್ರೆಂಚ್ ಮುಂತಾದ ವಸಾಹತುಶಾಹಿಗಳ ಕಪಿಮುಷ್ಟಿಯಲ್ಲಿತ್ತು. ಮತ್ತೊಂದೆಡೆ ರಶ್ಯಾವು ಝಾರ್ ದೊರೆಯಂತಹ ಕ್ರೂರ ಊಳಿಗಮಾನ್ಯ ರಾಜರುಗಳ ಪಾದದಡಿಯಲ್ಲಿ ನಲುಗುತ್ತಿತ್ತು. ಇವರುಗಳ ಬಂಧನದಿಂದ ಹೊರಬಂದು ದುಡಿಯುವವರ ಪತಾಕೆಯನ್ನು ಇಡೀ ಜಗತ್ತಿನ ಜನತೆ ನೋಡುವಂತೆ ಉತ್ತುಂಗಕ್ಕೆ ಹಾರಿಸಿದ ಮೊತ್ತಮೊದಲ ದೇಶ ರಶ್ಯಾ. ಶ್ರಮಜೀವಿಗಳ ರಶ್ಯಾ ಕ್ರಾಂತಿಯು ಜಗತ್ತಿನ ಎಲ್ಲಾ ರೀತಿಯ ಹೋರಾಟನಿರತ ಜನತೆಗೆ ಹೊಸ ಸ್ಫೂರ್ತಿಯನ್ನು ನೀಡಿತು, ಅವರ ಮುಂದೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು. ಸಮಾಜವಾದದ ಚಳವಳಿಗಳ ಚೈತನ್ಯವನ್ನು ಹೆಚ್ಚಿಸಿತು. ರಶ್ಯಾ ಕ್ರಾಂತಿಯೊಂದಿಗೆ ಜಗತ್ತಿನಲ್ಲಿ ಪರ್ಯಾಯವೊಂದು ವಾಸ್ತವವಾಗಿ ಜನರ ಮುಂದೆ ಬಂದು ನಿಂತಿತು.

ಈ ಸಮಾಜವಾದಿ ಪರ್ಯಾಯವನ್ನು ನಾಶಗೊಳಿಸಲು ಮುಸ್ಸೊಲೋನಿ, ಹಿಟ್ಲರ್ ಮುಂತಾದವರ ಮುಂದಾಳತ್ವದಲ್ಲಿ ಫ್ಯಾಶಿಸಂ ಮುನ್ನೆಲೆಗೆ ಬಂದಿತು. ‘ರಾಷ್ಟ್ರೀಯ ಸಮಾಜವಾದ’ದ ಹೆಸರಿನಲ್ಲಿ ಜನರನ್ನು ಮತ್ತು ಜಗತ್ತನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ನೆತ್ತರ ಹೊಳೆಯ ದಮನವನ್ನು ಹಾಗೂ ಯುದ್ಧಗಳನ್ನು ಆರಂಭಿಸಿತು. ಫ್ಯಾಶಿಸಂನಿಂದ ಜಗತ್ತನ್ನು ಉಳಿಸಲು ದೊಡ್ಡ ಸಂಘರ್ಷ ಆರಂಭವಾಯಿತು. ಇದಕ್ಕೂ ಮುಂದಾಳತ್ವ ನೀಡಿದ್ದು ಮತ್ತು ಫ್ಯಾಶಿಸ್ಟ್ ಶಕ್ತಿಗಳಿಗೆ ಮಾರಣಾಂತಿಕ ಹೊಡೆತ ನೀಡಿದ್ದು ಕ್ರಾಂತಿಕಾರಿ ರಶ್ಯಾ ಜನತೆ ಎಂಬುದನ್ನು ನಾವು ಮರೆಯಬಾರದು.

ಇದರ ನಂತರ ಚೀನಾ, ಪೋಲೆಂಡ್, ಹಂಗೇರಿ, ಬಲ್ಗೇರಿಯಾ, ಕ್ಯೂಬಾ, ಕೊರಿಯಾ, ವಿಯೆಟ್ನಾಂ ಮುಂತಾದ ಅನೇಕ ದೇಶಗಳಲ್ಲಿ ಕ್ರಾಂತಿಗಳು ಸಂಭವಿಸಿದವು. ರಾಷ್ಟ್ರೀಯ ಹೋರಾಟಗಳಿಗೂ ಈ ಕ್ರಾಂತಿಗಳು ಶಕ್ತಿ ತುಂಬಿದವು. ಭಾರತವನ್ನೂ ಒಳಗೊಂಡಂತೆ ಜಗತ್ತಿನ ಅನೇಕ ದೇಶಗಳು ವಸಾಹತುಶಾಹಿಗಳ ನೇರ ಹಿಡಿತದಿಂದ ಸಿಡಿದೆದ್ದು ಹೊರಬಂದವು. ಇಡೀ ಜಗತ್ತಿನಲ್ಲಿ ಶೋಷಕರು ಹಾಗೂ ಶೋಷಿತರ ನಡುವಿನ ಬಲಾಬಲಗಳ ತಕ್ಕಡಿ ಶೋಷಿತರ ಕಡೆ ತೂಗತೊಡಗಿತು. ಶೋಷಕರಲ್ಲಿ ನಡುಕ ಆರಂಭವಾಯಿತು. ಅವರು ಕಲ್ಯಾಣ ಪ್ರಭುತ್ವದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಮತ್ತೆ ಜನಸಾಮಾನ್ಯರನ್ನು ತಮ್ಮ ಹಿಡಿತದಲ್ಲಿ ತಂದುಕೊಳ್ಳಲು ಹವಣಿಸತೊಡಗಿದರು. ಭೂ ಸುಧಾರಣೆ, ಪಡಿತರ ಹಂಚಿಕೆ, ಮೀಸಲಾತಿ, ಸಬ್ಸಿಡಿ, ನಿರುದ್ಯೋಗ ಭತ್ಯೆ ಇತ್ಯಾದಿ ಸುಧಾರಣಾ ಯೋಜನೆಗಳೆಲ್ಲಾ ಬಂದಿದ್ದು ಈ ಕಾರಣಕ್ಕಾಗಿಯೆ.

1990ರ ದಶಕ ರಶ್ಯಾ ಕ್ರಾಂತಿಯ ಅಂತಿಮ ಕುಸಿತವನ್ನು, ಅದೇ ಸಂದರ್ಭದಲ್ಲಿ ಜಾಗತೀಕರಣದೊಂದಿಗೆ ಮತ್ತೆ ಸಾಮ್ರಾಜ್ಯಶಾಹಿಯ ವಿಜೃಂಭಣೆಯನ್ನು ನಾವು ನೋಡುತ್ತೇವೆ. 1917ರಲ್ಲಿ ಆರಂಭವಾದ ಕ್ರಾಂತಿಯ ಪಯಣ ರಶ್ಯಾದಲ್ಲಿ ಅನೇಕ ಪವಾಡ ಸದೃಶ ಬದಲಾವಣೆಗಳಿಗೆ ಕಾರಣವಾಯಿತು, ಜಗತ್ತಿನ ಜನರಿಗೆ ಪರ್ಯಾಯದ ಬಯಕೆಗೆ ಸ್ಫೂರ್ತಿಯುತ ಸಂಭವನೀಯತೆ ವಿಶ್ವಾಸವನ್ನು ನೀಡಿತು. ಅನೇಕ ಕ್ರಾಂತಿಗಳಿಗೆ ಪ್ರೇರಣೆಯಾಯಿತು. ಬಂಡವಾಳಶಾಹಿ ವ್ಯವಸ್ಥೆಗಳೂ ಸುಧಾರಣಾವಾದಿ ಹಾದಿ ತುಳಿಯುವ ಅನಿವಾರ್ಯತೆಯನ್ನು ಸೃಷ್ಟಿಸಿತು. ಆದರೆ ಈ ಪಯಣ 70 ವರ್ಷಗಳವರೆಗೆ ಸಾಗಿ ಹೆಚ್ಚುಕಡಿಮೆ ಅಂತ್ಯಕಂಡಿತು.

70 ವರ್ಷದ ಅದರ ಪಯಣದಲ್ಲಿ ಅನೇಕ ತಪ್ಪುಗಳು ನಡೆದವು. ಅದರಿಂದಾಗಿಯೇ ಅದು ಒಳಗಿನಿಂದಲೇ ಕೃಷಗೊಂಡು ಕುಸಿಯಿತು. ಈ ತಪ್ಪು ಗಳ ಕುರಿತ ಚರ್ಚೆಯೂ ಬಹಳ ಮುಖ್ಯವಾದದ್ದೆ. ಪ್ರಸ್ತುತ ಸಂದರ್ಭದಲ್ಲಿ ಇಡೀ ಜಗತ್ತಿನ ಶೋಷಕರನ್ನು ತಲ್ಲಣಗೊಳಿಸಿದ, ಇಡೀ ಜಗತ್ತಿನ ದುಡಿಯುವ ಜನತೆಯನ್ನು ಹೋರಾಟಕ್ಕೆ ಹುರಿದುಂಬಿಸಿದ ‘ಆ ಮೊದಲ ಮಹಾನ್ ಕ್ರಾಂತಿ’ ಹೇಗೆ ಸಾಕಾರಗೊಂಡಿತು ಎಂಬುದರ ಕುರಿತು ಚರ್ಚಿಸುವ ಅಗತ್ಯವಿದೆ ಮತ್ತು ಆ ಕ್ರಾಂತಿಯಿಂದ ಮಾನವ ಜನಾಂಗದ ಮುಂದಿನ ನಡಿಗೆಗೆ ಬೆಳಕಾಗಬಲ್ಲ ಸಾರವನ್ನು ತೆಗೆದುಕೊಳ್ಳಬೇಕಿದೆ.

ಇಂದು ಜಗತ್ತಿನ ಬಹುತೇಕ ಜನರ ಬಹಳಷ್ಟು ದೈನಂದಿನ ಅಗತ್ಯಗಳು ಮತ್ತು ಚಟುವಟಿಕೆಗಳು ನೇರವಾಗಿ ಹಾಗೂ ಪರೋಕ್ಷವಾಗಿ ಬಂಡವಾಳಶಾಹಿಯೊಂದಿಗೆ ತಳಕು ಹಾಕಿಕೊಂಡಿದ್ದು, ಜಗತ್ತು ಬಂಡವಾಳಶಾಹಿಯ ಹಿಡಿತ ಮತ್ತು ಥಳುಕಿನ ಭ್ರಾಂತಿಯಲ್ಲಿ ಬಿಗಿಯಾಗಿ ಸಿಕ್ಕಿಕೊಂಡಿರುವಂತೆ ಕಾಣುತ್ತಿದೆ. ಮತ್ತೊಂದೆಡೆ, ಜಗತ್ತಿನ ಬಹುಪಾಲು ಜನತೆಯ ಮನಸ್ಸಿನಲ್ಲಿ ಅಸಮಾಧಾನ ಆಳವಾಗಿ ಮನೆಮಾಡಿದ್ದು, ಆಳುವ ಪ್ರತಿಷ್ಠಿತ ವರ್ಗಗಳ ವಿರುದ್ಧ ಮತ್ತು ಬಂಡವಾಳಶಾಹಿ ಆಕ್ರಮಣದ ವಿರುದ್ಧ ನಾನಾ ಮಟ್ಟದಲ್ಲಿ ನಾನಾ ರೂಪದ ಪ್ರತಿರೋಧ ಹೆಚ್ಚುತ್ತಿದೆ. ಬಂಡವಾಳಶಾಹಿ ವ್ಯವಸ್ಥೆ ಹೊರಗೆ ಎಷ್ಟೇ ಕಂಗೊಳಿಸುತ್ತಿರುವಂತೆ ಕಂಡುಬಂದರೂ ವಾಸ್ತವದಲ್ಲಿ ಅದು ತನ್ನ ಕಾಲ ಮೇಲೆ ತಾನೇ ಎತ್ತಿಹಾಕಿಕೊಳ್ಳುತ್ತಿರುವ ಕಲ್ಲಿನ ಏಟಿನಿಂದ ತತ್ತರಿಸುತ್ತಿದೆ. ಸಮಾಜವಾದಿ ಕನಸನ್ನು ಪೂರ್ತಿಯಾಗಿ ವಾಸ್ತವಕ್ಕಿಳಿಸಲು ಹಾಗೂ ಗಳಿಸಿದ್ದನ್ನು ದೀರ್ಘಕಾಲ ಉಳಿಸಿಕೊಳ್ಳಲು ಈವರೆಗೂ ಸಾಧ್ಯವಾಗದೇ ಹೋಗಿದ್ದರೂ, ಬಂಡವಾಳದ ಕೂಪದಿಂದ ಬಿಡುಗಡೆಗೊಳ್ಳುವ ಪರ್ಯಾಯದ ಬೆಳಕು ಕಾಣಸಿಗುವುದು ಸಮಾಜವಾದಿ ಮುನ್ನೋಟದಲ್ಲೇ ಆಗಿದೆ.

ಈ ಹಿಂದಿನ ಕ್ರಾಂತಿಗಳು ದಮನಿತ ಜನತೆಯ ಚರಿತ್ರೆಯ ಹಾದಿಯಲ್ಲಿ ಉಜ್ವಲವಾದ ಹೆಗ್ಗುರುತುಗಳು ಎಂಬುದನ್ನು ಒಪ್ಪಲೇಬೇಕು. ಕ್ರಾಂತಿಗಳಲ್ಲಿ ಸ್ವತಃ ಪಾಲ್ಗೊಳ್ಳುವ ಅದೃಷ್ಟ ಹೊಂದಿದ್ದವರಿಗೆಲ್ಲ ಅವು ವಾಸ್ತವಿಕ ಆಚರಣೆಯಲ್ಲಿ ಮಹತ್ತರವಾದ ಪಾಠಗಳನ್ನು ಕಲಿಸಿದ ಅನುಭವಗಳಾದರೆ, ಭವಿಷ್ಯದ ಪೀಳಿಗೆಗಳಿಗೆ ಅವು ಸಾಮಾಜಿಕ ನಿಯಮಗಳನ್ನು, ವೈರುಧ್ಯಗಳನ್ನು ಹಾಗೂ ಅವುಗಳನ್ನು ಪರಿಹರಿಸುವ ಮಾರ್ಗಗಳ ವಿಶಾಲ ಜ್ಞಾನದ ಕಣಜಗಳಾಗಿ ಉಳಿದುಕೊಂಡಿವೆ. ಕ್ರಾಂತಿಗಳ ಮೂಲಕ ಸಾಕಾರಗೊಳಿಸಲಾದ ಕೆಲವು ಸಾಧನೆಗಳು ಇಂದಿನ ಸಂದರ್ಭದಲ್ಲಿ ನೋಡಿದಾಗ ಪವಾಡಗಳೆನಿಸುತ್ತವೆ. ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಜನತೆಯ ಅದೃಶ್ಯ ಅಂತಃಸಾಮರ್ಥ್ಯದ ಜೀವಂತ ಮಾದರಿ ಅಥವಾ ಉದಾಹರಣೆಗಳಾಗಿ ಇಂದಿಗೂ ಕಂಗೊಳಿಸುತ್ತಿರುವ ಆ ಎಲ್ಲಾ ಕ್ರಾಂತಿಗಳ ಚರಿತ್ರೆಯ ಬಗ್ಗೆ ನಾವು ಇನ್ನೂ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ.

ರಶ್ಯಾದ ಕ್ರಾಂತಿಯು ಅನೇಕ ಏರಿಳಿತಗಳ ಲಯಗಳಿಂದ ಕೂಡಿದ್ದು ಬಹಳ ಆಸಕ್ತಿದಾಯಕವಾಗಿದೆ. ಪರಸ್ಪರ ವಿರುದ್ಧವಾದ ಸಾಮಾಜಿಕ ಶಕ್ತಿಗಳ ನಡುವೆ ಪರಿಹರಿಸಲಾಗದಂತಹ ತೀಕ್ಷ್ಣವಾದ ಸಂಘರ್ಷವಿದ್ದುದು, ಅವುಗಳ ನ್ಯಾಯೋಚಿತವಾದ ಪರಿಹಾರದ ಸಾಧ್ಯತೆಯ ಹಾದಿ ತೆರೆದುಕೊಂಡದ್ದು, ದಮನಿತ ವರ್ಗಗಳಿಂದ ಸ್ವಯಂಸ್ಫೂರ್ತಿಯಿಂದ ಸಂಘಟಿತ, ಸಮರಶೀಲ ಪ್ರತಿರೋಧ ಸತತವಾಗಿ ಬೆಳೆದುದು, ಹಾಗೂ ಪಕ್ಷದ ಪ್ರಜ್ಞಾಪೂರ್ವಕವಾದ ಪಾತ್ರ - ಈ ಎಲ್ಲ ವಸ್ತುನಿಷ್ಠ ಪರಿಸ್ಥಿತಿಗಳು ಮೇಳೈಸಿದ್ದರಿಂದಲೇ ರಷ್ಯದ ಕ್ರಾಂತಿಯನ್ನು ಪರಿಕಲ್ಪಿಸಿ ಸಾಧಿಸಲು ಸಾಧ್ಯವಾಯಿತು ಎನ್ನುವುದು ಈ ಚರಿತ್ರೆಯ ಒಂದೇ ಓದಿನಿಂದ ಯಾರಿಗಾದರೂ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಸಾರಾಂಶದಲ್ಲಿ ಹೇಳುವುದಾದರೆ ವಸ್ತುನಿಷ್ಠ ಮತ್ತು ಸಬ್ಜೆಕ್ಟಿವ್ ಪರಿಸ್ಥಿತಿಗಳೆರಡೂ ಕ್ರಾಂತಿಗೆ ಪಕ್ವವಾಗಿದ್ದವು. ಸಾಮ್ರಾಜ್ಯಶಾಹಿ ಶಕ್ತಿಗಳ ನಡುವೆ ಯುದ್ಧ ನಡೆಯುತ್ತಿದ್ದ ಕಾರಣ ಅವು ರಷ್ಯದ ಆಂತರಿಕ ವಿಚಾರದಲ್ಲಿ ತಕ್ಷಣವೇ ತಲೆ ಹಾಕುವುದು ಅಸಾಧ್ಯವಾಗಿತ್ತು. ಸ್ಥಳೀಯ ದಮನಕಾರಿ ವರ್ಗ ದುರ್ಬಲವಾಗಿತ್ತು, ಜನತೆಯೆದುರು ನಗ್ನವಾಗಿ ಬಯಲಾಗಿತ್ತು, ಜನತೆಯಿಂದ ದೂರವಾಗಿ ಏಕಾಂಗಿಯಾಗಿತ್ತು. ದೇಶಾದ್ಯಂತ ಅಸಂತೃಪ್ತಿ ವ್ಯಾಪಿಸಿತ್ತು, ಆರ್ಥಿಕ ಸರ್ವನಾಶವುಂಟಾಗಿತ್ತು ಹಾಗೂ ಯುದ್ಧರಂಗದಲ್ಲಿ ಹತಾಶೆ ತುಂಬಿದ್ದು ಸೋಲು ಕಟ್ಟಿಟ್ಟ ಬುತ್ತಿಯೆನ್ನಿಸಿತ್ತು. ಹೀಗೆ ವಸ್ತುನಿಷ್ಠ ಪರಿಸ್ಥಿತಿಗಳು ವ್ಯವಸ್ಥೆಯ ಬದಲಾವಣೆಗೆ ಸಿದ್ಧವಾಗಿದ್ದವು.

ಜನತೆ ಹಸಿವಿನಿಂದ ಕಂಗೆಟ್ಟಿದ್ದರು, ಕೋಪದಿಂದ ಕುದಿಯುತ್ತಿದ್ದರು. ಹಸಿವನ್ನು ನೀಗಿಸುವಂತಹ-ಬದುಕಿನ ಅತಂತ್ರತೆಯನ್ನು ಕೊನೆಗಾಣಿಸುವಂತಹ-ಶಾಂತಿಯನ್ನು ಮರುಸ್ಥಾಪನೆ ಮಾಡುವಂತಹ ಬದಲಾವಣೆಯನ್ನು ಬಯಸುತ್ತಿದ್ದರು ಹಾಗೂ ಇದೆಲ್ಲಕ್ಕಾಗಿ ಎಷ್ಟೇ ಬೆಲೆ ತೆತ್ತಾದರೂ ಹೋರಾಡಲು ಸಿದ್ಧರಿದ್ದರು. ಪಕ್ಷವು ಸೈದ್ಧಾಂತಿಕವಾಗಿಯೂ ಸಂಘಟನಾತ್ಮಕವಾಗಿಯೂ ಚೆನ್ನಾಗಿ ಸಜ್ಜಾಗಿತ್ತು. ಆತ್ಮವಿಶ್ವಾಸ, ಧೈರ್ಯಗಳಿಂದ ತುಂಬಿತ್ತು. ಎಲ್ಲಾ ದಮನಿತ ಜನತೆಗೂ ಮನವರಿಕೆಯಾಗಬಲ್ಲ ನೇರವಾದ ಘೋಷಣೆಗಳು ಮತ್ತು ಪರಿಹಾರ ಮಾರ್ಗಗಳನ್ನು ಮುಂದಿಟ್ಟಿತ್ತು, ಹಾಗೂ ಸಾಮೂಹಿಕ ಕ್ರಾಂತಿಕಾರಿ ಬಂಡಾಯದ ಮೂಲಕ ಜನತೆಯನ್ನು ವಿಜಯದೆಡೆಗೆ ಮುನ್ನಡೆಸಲು ಸಮರ್ಥವಾಗಿತ್ತು. ಜನತೆಯೇ ಕ್ರಾಂತಿಕಾರಿ ಬದಲಾವಣೆಯ ವಾಹಕರಾಗಿದ್ದು, ಪ್ರಬುದ್ಧ, ಕ್ರಿಯಾಶೀಲ ನಾಯಕತ್ವವನ್ನು ಹೊಂದಿದ್ದ ಪಕ್ಷವು ಕ್ರಾಂತಿಯನ್ನು ಸಾಧ್ಯವಾಗಿಸಿದ ವೇಗವರ್ಧಕವಾಗಿ ಪ್ರವರ್ತಿಸಿತು. ಪರಿಸ್ಥಿತಿ ಪರಿಪಕ್ವವಾಗಿದ್ದ ಸೂಕ್ತ ಸಮಯದಲ್ಲಿ, ಸರಿಯಾದ ಜಾಗಕ್ಕೆ ಬಲವಾದ ಹೊಡೆತ ನೀಡಲಾಯಿತು.

ಸಮಸ್ಯೆ ಮತ್ತು ಸಂಕೀರ್ಣತೆಗಳು ತುಂಬಿರುವಂತಹ ಇಂದಿನ ವಸ್ತುನಿಷ್ಠ ಮತ್ತು ಸಬ್ಜೆಕ್ಟಿವ್ ಪರಿಸ್ಥಿತಿಗಳಲ್ಲಿ, ಯಾವುದೇ ದೇಶದಲ್ಲೇ ಆಗಲಿ, ರಷ್ಯನ್ ಕ್ರಾಂತಿಯಂಥದ್ದನ್ನೇ ಪುನರಾವರ್ತಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದಾಗ್ಯೂ, ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಯಾವುದೇ ಪ್ರಯತ್ನಕ್ಕೆ ಈಗಲೂ ಅನ್ವಯವಾಗ ಬಲ್ಲಂತಹ ಅನೇಕ ಪ್ರಮುಖ ಅಂಶಗಳು ರಷ್ಯನ್ ಚರಿತ್ರೆಯಲ್ಲಿ ಸ್ಫುಟವಾಗಿ ಕಾಣಬರುತ್ತವೆ.

                ಲೆನಿನ್

ರಷ್ಯನ್ ಕ್ರಾಂತಿಯ ಚರಿತ್ರೆಯಲ್ಲಿ ಈ ಎಲ್ಲಾ ಅಂಶಗಳೂ ಕಣ್ಣಿಗೆ ಕಟ್ಟುವಂತೆ ಕಾಣಬರುತ್ತಿದ್ದವು. ರಷ್ಯನ್ ಕಾರ್ಮಿಕ ವರ್ಗಕ್ಕೆ ಅಸಾಧಾರಣವಾದ ರಾಜಕೀಯ ಸ್ಪಷ್ಟತೆ, ಕ್ರಾಂತಿಕಾರಿ ಚೈತನ್ಯಗಳುಳ್ಳ ಪಕ್ಷದ ನಾಯಕತ್ವ ದೊರಕಿತ್ತು. ಅದು ರಾಜಕೀಯ ಕಾಳಗಗಳಲ್ಲಿ ಚೆನ್ನಾಗಿ ಪರೀಕ್ಷೆಗೊಳಪಟ್ಟಿತ್ತು. ಅದು ಜನತೆಯನ್ನು ತಾಳ್ಮೆಯಿಂದ ಸಂಘಟಿಸಿ, ರಾಜಕೀಯ ಚಿಂತನೆಯಿಂದ ಪ್ರೇರಿತಗೊಳಿಸಿ ಕ್ರಾಂತಿಕಾರಿ ಅಧಿಕಾರ ಗ್ರಹಣಕ್ಕಾಗಿ ಸಂಸಿದ್ಧಗೊಳಿಸಿತು. ನಿರ್ಣಾಯಕ ದಾಳಿಯಲ್ಲಿ ಜನತೆಗೆ ನಾಯಕತ್ವ ವಹಿಸಲು ಅದಕ್ಕೆ ಯಥೇಚ್ಛವಾದ ಧೈರ್ಯವಿತ್ತು, ಅಂತೆಯೇ ಅದು ಗುರಿಯೆಡೆಗಿನ ಹಾದಿಯಲ್ಲಿ ಇರಬಹುದಾದ ಯಾವುದೇ ರೀತಿಯ ಅಗೋಚರ ಅಪಾಯಗಳಿಗೆ ಸಿಲುಕದಂತೆ ಜಾಗರೂಕವಾಗಿಯೂ ಇತ್ತು. ಶಾಂತಿಗಾಗಿ ಜನಸಾಮಾನ್ಯರ ಪ್ರಜಾತಾಂತ್ರಿಕ ಚಳವಳಿ, ಭೂಮಿ ವಶಕ್ಕಾಗಿ ರೈತಾಪಿಯ ಪ್ರಜಾತಾಂತ್ರಿಕ ಚಳವಳಿ, ರಾಷ್ಟ್ರೀಯ ವಿಮೋಚನೆ ಮತ್ತು ಸಮಾನತೆಗಾಗಿ ದಮನಿತ ರಾಷ್ಟ್ರೀಯತೆಗಳ ಚಳವಳಿ, ಹಾಗೂ, ಬಂಡವಾಳಶಾಹಿಯನ್ನು ಕಿತ್ತೊಗೆದು ಕಾರ್ಮಿಕ ವರ್ಗದ ಸರ್ವಾಧಿಕಾರದ ಸ್ಥಾಪನೆಗಾಗಿ ಕಾರ್ಮಿಕ ವರ್ಗದ ಸಮಾಜವಾದಿ ಚಳವಳಿ - ಇಂತಹ ವೈವಿಧ್ಯಮಯವಾದ ಕ್ರಾಂತಿಕಾರಿ ಚಳವಳಿಗಳೆಲ್ಲವನ್ನೂ ಅದು ಒಂದೇ ಕ್ರಾಂತಿಕಾರಿ ಮಹಾ ಪ್ರವಾಹವಾಗಿ ಬಹಳ ಕುಶಲತೆಯಿಂದ ಒಂದೆಡೆ ಅಣೆನೆರೆಸುವಲ್ಲಿ ಯಶಸ್ವಿಯಾಯಿತು. ಇಂತಹ ಐಕ್ಯ ಬಲದಿಂದ ಮಾತ್ರವೇ ಬಂಡವಾಳಶಾಹಿಗಳ-ಭೂಮಾಲಕರ ಆಳ್ವಿಕೆಯನ್ನು ಸೋಲಿಸಲು ಸಾಧ್ಯವಾದುದು.

ಬೋಲ್ಷೆವಿಕ್ ನೀತಿಯನ್ನು (ಬೋಲ್ಷೆವಿಸಂಅನ್ನು) ಇತರ ಪಕ್ಷಗಳಿಗಿಂತ ಬೇರೆಯೇ ಆಗಿ ಕಾಣುವಂತೆ ಮಾಡಿದ ಇನ್ನೂ ಒಂದು ಅಂಶವೆಂದರೆ ಅದು ತನ್ನ ಮನೋ ಧ್ಯೇಯವಾದ ಜನತೆಯ ಹಿತರಕ್ಷಣೆಯ ವಿಚಾರವನ್ನು ಭಾವುಕವಾಗಷ್ಟೇ ತೆಗೆದುಕೊಳ್ಳದೆ ವಾಸ್ತವಿಕತೆಯಿಂದ ನಿರ್ಧಾರಿತವಾಗುವ ಕ್ರಾಂತಿಯ ಪ್ರಕ್ರಿಯೆ ಹಾಗೂ ನಿಯಮಗಳಿಗೆ ಅಧೀನಗೊಳಿಸಿದ್ದು. ಈ ನಿಯಮಗಳನ್ನು ವೈಜ್ಞಾನಿಕವಾಗಿ ಶೋಧಿಸುವುದು, ಅದರಲ್ಲೂ ಮೊದಲಿಗೆ ಸಾಮಾನ್ಯ ಜನತೆಯ ಚಲನೆಯನ್ನು ನಿರ್ಧರಿಸುವ ನಿಯಮಗಳನ್ನು ಗ್ರಹಿಸುವುದು ಬೋಲ್ಷೆವಿಕ್ ವ್ಯೆಹತಂತ್ರದ ತಳಹದಿಯಾಗಿತ್ತು. ಶ್ರಮಜೀವಿಗಳ ಬೇಡಿಕೆಗಳು ಹಾಗೂ ಆವಶ್ಯಕತೆಗಳು ಮಾತ್ರವಲ್ಲದೆ ಅವರ ಬದುಕಿನ ಅನುಭವಗಳೂ ಸಹ ಹೋರಾಟದಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ವಿಚಾರವಾಗಿರುತ್ತದೆ. ಬೋಲ್ಷೆವಿಸರಿಗೆ ಜನಸಾಮಾನ್ಯರ ಸ್ವತಂತ್ರ ಅನುಭವಗಳ ಬಗ್ಗೆ ಪ್ರತಿಷ್ಠಿತ ವರ್ಗಕ್ಕಿರುವಂತಹ ತಿರಸ್ಕಾರ ಎಳ್ಳಷ್ಟೂ ಇರಲಿಲ್ಲ. ಇದೇ ಅವರಿಗೂ ಇತರರಿಗೂ ನಡುವಿನ ವ್ಯತ್ಯಾಸವಾಗಿತ್ತು; ಮತ್ತು ಅವರು ಆ ಅನುಭವಗಳನ್ನಾಧರಿಸಿ ಹೋರಾಟಗಳನ್ನು ಅಭಿವೃದ್ಧಿಪಡಿಸಿದರು. ಇದು ಅವರ ಅತ್ಯುತ್ತಮ ಅಂಶಗಳಲ್ಲೊಂದಾಗಿತ್ತು.

ಬೋಲ್ಷೆವಿಕರು ಯಾವಾಗಲೂ ಸೋವಿಯತ್ತುಗಳ ಒಳಗೆ ಇದ್ದುದಕ್ಕಿಂತಲೂ ಹೋರಾಟನಿರತ ಶ್ರಮಜೀವಿ ಜನತೆಯ ನಡುವೆ ಹೆಚ್ಚು ಬಲಿಷ್ಠರಾಗಿದ್ದರು. ಕಾರ್ಮಿಕರನ್ನು ಸಮರಶೀಲವಾಗಿ ನಿರಂತರ ಸಂಘಟಿಸುವುದರ ಜೊತೆಜೊತೆಗೆ, ಅವರು ಕೊಸರಾಟ ನಡೆಸುವ ಕಷ್ಟದ ಘಳಿಗೆಗಳಲ್ಲೂ, ಬೀದಿಯಲ್ಲಿ ಕಠಿಣವಾದ ಹೋರಾಟಗಳ ಸಮಯದಲ್ಲೂ ಸಾವನ್ನು ಸಹ ಲೆಕ್ಕಿಸದೆ ಅವರೊಂದಿಗೇ ಇರುವುದು ಬೋಲ್ಷೆವಿಕರ ನೀತಿ ಮತ್ತು ಆಚರಣೆಯಾಗಿತ್ತು. ಸನ್ನಿವೇಶದ ಬಗೆಗೆ ಹಾಗೂ ಸಂಭಾವ್ಯ ನಕಾರಾತ್ಮಕ ಪರಿಣಾಮದ ಬಗೆಗೆ ಕಾರ್ಮಿಕರಿಗಿಂತ ಉತ್ತಮವಾದ ಅಸೆಸ್‌ಮೆಂಟ್ ಇದ್ದು ಅದರಿಂದಾಗಿ ಕಾರ್ಮಿಕರ ನಿಲುವಿನೊಂದಿಗೆ ಅವರಿಗೆ ಭಿನ್ನಾಭಿಪ್ರಾಯ ಇದ್ದಾಗಲೂ ಈ ನೀತಿ ಮತ್ತು ಆಚರಣೆಯಲ್ಲಿ ಚ್ಯುತಿ ಇರಲಿಲ್ಲ ಎನ್ನುವುದನ್ನು ಕಾಣಬಹುದು.

ರಶ್ಯಾ ಕ್ರಾಂತಿಯಲ್ಲಿ ರಾಜಕೀಯ ಪ್ರಚಾರ ಮತ್ತು ರಾಜಕೀಯ ಚಳವಳಿಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ವ್ಯಾಪಕ ಮಟ್ಟದ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಹುಟ್ಟುವುದು, ಹತ್ತಿಕ್ಕಲ್ಪಟ್ಟರೂ ಮತ್ತೆ ಮರುಹುಟ್ಟು ಪಡೆಯುತ್ತಾ ಹೆಚ್ಚುಹೆಚ್ಚು ಜನಸಮೂಹವನ್ನು ತಲುಪುತ್ತವೆ. ನಿಗಿನಿಗಿ ಕೆಂಡದಂತಹ ಕ್ರಾಂತಿಕಾರಿ ಮಾಧ್ಯಮವು ಚಿಂತನೆಗಳ ಅತ್ಯುತ್ತಮ ವಾಹಕವಾಗಿರುತ್ತದೆ. ಬೋಲ್ಷೆವಿಕ್ ಪತ್ರಿಕೆಗಳನ್ನು ಗಟ್ಟಿಯಾಗಿ ಓದುವುದು, ಸಾಧ್ಯವಿರುವ ಎಲ್ಲರಿಗೂ ಓದಿ ಹೇಳುವುದು ಮಾಡಲಾಗುತ್ತದೆ. ಕ್ರಾಂತಿಕಾರಿ ಉಬ್ಬರಗಳ ಅವಧಿಗಳಲ್ಲಿ ಅವುಗಳಲ್ಲಿನ ಬಹು ಮುಖ್ಯ ಲೇಖನಗಳನ್ನು ಕಂಠಪಾಠ ಮಾಡಿಕೊಂಡು ಹೇಳುವುದು, ಪ್ರತಿಗಳನ್ನು ಮಾಡಿ ಹಂಚುವುದು, ಸಾಧ್ಯವಿದ್ದಲ್ಲೆಲ್ಲ ಮರುಮುದ್ರಿಸುವುದು ನಡೆಯುತ್ತದೆ.

ಸಾಪೇಕ್ಷವಾಗಿ ದುರ್ಬಲವಾದ ಪಕ್ಷ ಯಂತ್ರಾಂಗ ಹಾಗೂ ಪಕ್ಷದ ಪತ್ರಿಕೆಗಳಿಗೆ ಕಡಿಮೆ ಓದುಗರು ಇದ್ದಾಗ್ಯೂ ಬೋಲ್ಷೆವಿಕ್ ವಿಚಾರಗಳು ಮತ್ತು ಘೋಷಣೆಗಳು ಜನತೆಯ ಮೇಲೆ ಮಾಂತ್ರಿಕ ಪ್ರಭಾವ ಬೀರುವಲ್ಲಿ ಯಶಸ್ವಿಯಾದವು. ಯಾಕೆಂದರೆ, ಜನಸಾಮಾನ್ಯರ ತಕ್ಷಣದ ಅಗತ್ಯಗಳು ಮತ್ತು ಬೇಡಿಕೆಗಳನ್ನಾಧರಿಸಿದ ಹಾಗೂ ಅವುಗಳಿಗೆ ಪರಿಹಾರ ಒದಗಿಸುವಂತಹ ಸರಳವೂ ನೇರವೂ ಆದ ಘೋಷಣೆಗಳ ಆಧಾರದಲ್ಲಿ ಅವರನ್ನು ಬೋಲ್ಷೆವಿಕರು ಅಣಿನೆರೆಸುತ್ತಿದ್ದುದು. ದಮನಿತ ಜನತೆಯ ಉತ್ಕಟವಾದ ಬೇಡಿಕೆಗಳಿಗೆ ಅನುರೂಪವಾಗಿರುವ ಘೋಷಣೆಗಳು ತಮಗೆ ತಾವೇ ಸಾವಿರಾರು ಹಾದಿಗಳನ್ನು ಸೃಷ್ಟಿಸಿಕೊಳ್ಳುತ್ತವೆ.

ರಷ್ಯನ್ ಕ್ರಾಂತಿಯಲ್ಲಿ ಬೋಲ್ಷೆವಿಕ್ ಪಕ್ಷಕ್ಕೆ ಅಥವಾ ರಷ್ಯನ್ ಕಾರ್ಮಿಕ ವರ್ಗಕ್ಕೆ ಒಂದು ಮುಖ್ಯ ಸ್ಥಾನವಿದೆಯಾದರೂ, ಇವುಗಳಿಂದಾಗಿಯೇ ಕ್ರಾಂತಿ ಸಂಭವಿಸಿದ್ದಲ್ಲ. ಬದಲಿಗೆ ಕ್ರಾಂತಿ ಹಾಗೂ ಆ ನಂತರ ಸೋವಿಯತ್ ಸಮಾಜದಲ್ಲಿ ಉಂಟಾದ ಬದಲಾವಣೆಗಳು ಸಂಭವಿಸಿದ್ದು ಸಮಾಜದೊಳಗಿನ ಸಾಮಾಜಿಕ ಶಕ್ತಿಗಳ ನಡುವಿನ ಸಂಘರ್ಷದ ಪ್ರಕ್ರಿಯೆಯ ಪರಿಣಾಮವಾಗಿ. ಇಂತಹ ಚಾರಿತ್ರಿಕ ಪ್ರಕ್ರಿಯೆಯ ಮೂಲಭೂತ ಶಕ್ತಿಗಳೆಂದರೆ ವರ್ಗಗಳು. ಅವುಗಳೊಳಗಿನ ಜಾತಿಗಳು, ಜೆಂಡರ್, ಜನಾಂಗಗಳು, ರಾಷ್ಟ್ರೀಯತೆಗಳು ಇತ್ಯಾದಿ. ರಾಜಕೀಯ ಪಕ್ಷಗಳು ಇವುಗಳನ್ನು ಪ್ರತಿನಿಧಿಸುತ್ತವೆ ಮತ್ತು ಅವಲಂಬಿಸಿರುತ್ತವೆ.

ಜನಸಮೂಹದೊಂದಿಗೆ ಸಂಬಂಧ ಹೊಂದಿರುವ ಬೇರಾವುದೇ ಕಾರ್ಮಿಕ ವರ್ಗದ ಪಕ್ಷದಂತೆಯೇ ಬೋಲ್ಷೆವಿಕ್ ಪಕ್ಷವೂ ಚರಿತ್ರೆಯ ಚಲನೆಯಲ್ಲಿ ಭಾಗವಹಿಸಿತೇ ಹೊರತು ಅದನ್ನು ತಾನೇ ನಿರ್ಧರಿಸಲಿಲ್ಲ. ಕ್ರಾಂತಿಕಾರಿ ಪಕ್ಷವು ಪಾಲ್ಗೊಳ್ಳುವ ಚಾರಿತ್ರಿಕ ಪ್ರಕ್ರಿಯೆಯಲ್ಲಿ ಅದರ ಮಧ್ಯಪ್ರವೇಶವು ವಿವಿಧ ರೀತಿಯಲ್ಲೂ ಇರುತ್ತದೆ ಹಾಗೂ ಅಷ್ಟೇ ವೈವಿಧ್ಯಮಯ ರೂಪಗಳನ್ನು ಪಡೆದುಕೊಳ್ಳುತ್ತದೆ. ಆದರೆ ಪಕ್ಷವು ತಾನು ಉಂಟುಮಾಡಬಯಸುವ ಪರಿಣಾಮವನ್ನು ಅತ್ಯುತ್ತಮವಾಗಿ ಸಾಧಿಸುವುದು ಅಸ್ತಿತ್ವದಲ್ಲಿರುವ ವೈರುಧ್ಯಗಳ ಬಗ್ಗೆ ಅದಕ್ಕೆ ಸರಿಯಾದ ಪಟ್ಟು ಇದ್ದಾಗ ಮಾತ್ರ. ಹೀಗೆ ಚರಿತ್ರೆಯ ಚಲನೆಯಲ್ಲಿ ಪಕ್ಷದ ಪಾಲ್ಗೊಳ್ಳುವಿಕೆಯು ಕೆಲವು ನಿರ್ದಿಷ್ಟ ಸಂದರ್ಭಗಳಡಿ ಅದು ಈ ಚಲನೆಯ ಕ್ರಮಗತಿಯನ್ನೇ ಪ್ರಭಾವಿಸುವಂತೆ ಮಾಡುತ್ತದೆ. ಅಂತಿಮವಾಗಿ ಇಲ್ಲಿ ಮತ್ತೊಮ್ಮೆ ಒತ್ತಿ ಹೇಳಬೇಕಿರುವುದೆಂದರೆ: ಕ್ರಾಂತಿಯು ಹುಟ್ಟುಹಾಕಿದ ಪ್ರಭಾವ ಮತ್ತು ಸ್ಫೂರ್ತಿ, ಅದರ ನಂತರ ಪರ್ಯಾಯವಾದ ಹಾಗೂ ಹಳೆಯದಕ್ಕಿಂತಲೂ ಅಪಾರವಾಗಿ ಶ್ರೇಷ್ಠವಾದ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಲು ನಡೆಸಿದ ಪ್ರಯತ್ನಗಳು ಚರಿತ್ರೆಯ ಮತ್ತು ಮಾನವ ಕುಲದ ಭವಿಷ್ಯದ ಬೆಳವಣಿಗೆಯ ಮೇಲೆ ಅಳಿಸಲಾಗದ ಗುರುತನ್ನು ಉಳಿಸಿವೆ. ಅದು 20ನೆ ಶತಮಾನದ ಎಲ್ಲಾ ಪ್ರಮುಖ ಹೋರಾಟಗಳ ಮೇಲೆ ಮತ್ತು ವಿಮೋಚನಾ ವಿದ್ಯಮಾನದ ಮೇಲೆ ಬೀರಿರುವ ಪ್ರಭಾವ ಸಾಟಿಯಿಲ್ಲದ್ದು. ಸಮಾಜವನ್ನು ಪರಿವರ್ತಿಸುವ ಪಣತೊಟ್ಟಿರುವ ಜನರ ಪಾಲಿಗೆ ಇಂದಿಗೂ ಬಹು ಪ್ರಸ್ತುತವಾದುದು. ಎಷ್ಟೇ ವರ್ಷಗಳ ನಂತರ ಓದಿದರೂ ನಮ್ಮ ಭಾವನೆ ಮತ್ತು ಚಿಂತನೆಗಳ ಜೊತೆ ಸಂವಾದಿಸುವ ಜೀವಂತ ಪಾತ್ರಗಳ ಜೊತೆ ನಿಲ್ಲಬಲ್ಲ, ಸಮಯದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಹಿತ್ಯವೇ ಮಹಾನ್ ಸಾಹಿತ್ಯ ಎಂಬುದು ನನ್ನ ಅನಿಸಿಕೆ. ಅದೇ ರೀತಿಯಲ್ಲಿ, ವರ್ತಮಾನಕ್ಕೆ ಪ್ರಸ್ತುತವೆನ್ನಿಸುವ ಚರಿತ್ರೆಯೇ ಮಹಾನ್ ಚರಿತ್ರೆ. ರಷ್ಯನ್ ಕ್ರಾಂತಿಯ ಇಡೀ ಚರಿತ್ರೆಯು ಇಂದಿಗೂ ಜೀವಂತಿಕೆಯನ್ನು ಸ್ಫುರಿಸುತ್ತ�

Writer - ಲಲಿತಾ

contributor

Editor - ಲಲಿತಾ

contributor

Similar News