ಹಸಿದು ಕುಸಿಯುತ್ತಿರುವ ಭಾರತದ ಜನಜೀವನ

Update: 2017-11-11 17:40 GMT

2017ರ ಜಾಗತಿಕ ಹಸಿವಿನ ಸೂಚ್ಯಂಕವು ಪ್ರಕಟಗೊಂಡಿದೆ. ಈ ಹಸಿವಿನ ಸೂಚ್ಯಂಕದಲ್ಲಿ ಕಳೆದ ವರ್ಷ 97ನೆ ಸ್ಥಾನದಲ್ಲಿದ್ದ ಭಾರತವು ಈ ವರ್ಷ ಇನ್ನೂ 3 ಸ್ಥಾನ ಕುಸಿದು 100ನೆ ಸ್ಥಾನಕ್ಕೆ ಇಳಿದಿದ್ದು ತನ್ನ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ನೇಪಾಳ, ಇರಾಕ್‌ಗಿಂತ ಕೆಳಗೆ ದೂಡಲ್ಪಟ್ಟಿದೆ. ಬಹಳಷ್ಟು ಆತಂಕಕಾರೀ ಬೆಳವಣಿಗೆಯಾದ ಈ ವಿದ್ಯಮಾನವು ಉಂಟಾಗಲು ಗಂಭೀರ ವಾದ ಕಾರಣಗಳು ಇದ್ದು ಅವೆಲ್ಲವೂ ಸಹ ನಮ್ಮ ದೇಶದ ಮಾಧ್ಯಮಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಮರೆಮಾಚಲ್ಪಡುತ್ತಿದೆ.

ಜಾಗತಿಕ ಹಸಿವಿನ ಸೂಚ್ಯಂಕವು ಹೇಗೆ ನಿರ್ಧರಿಸಲ್ಪಡುತ್ತದೆ?:

ಈಗಿನ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಜಗಳಗಳನ್ನು ಒಂದೆಡೆ ಇಟ್ಟು ಈ ಬಗ್ಗೆ ಗಂಭೀರವಾಗಿ ನೋಡಿದರೆ ಹಸಿವಿನ ಸೂಚ್ಯಂಕದ ಸ್ಥಿತಿಯ ಗಂಭೀರತೆಯು ನಮಗೆ ಅರಿವಾಗುತ್ತದೆ. ಅದಕ್ಕೂ ಮುನ್ನ ಈ ಸೂಚ್ಯಂಕವು ಯಾವುದರ ಆಧಾರದ ಮೇಲೆ ಮತ್ತು ಹೇಗೆ ನಿರ್ಧರಿಸ ಲ್ಪಡುತ್ತದೆ ಎಂಬುದನ್ನು ಸಹ ನಾವು ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ.

ಇದರಲ್ಲಿ ಹಸಿವೇ ಇಲ್ಲದ ಸ್ಥಿತಿಯನ್ನು ಶೇ.0 ಎಂದು ಗುರುತಿಸಲಾಗುತ್ತದೆ ಮತ್ತು ವಿವಿಧ ಮಟ್ಟದ ಆಧಾರದ ಮೇಲೆ ಹಸಿವಿನ ತೀವ್ರತೆಯನ್ನು ಗುರುತಿಸಲಾಗುತ್ತದೆ. ಅಲ್ಲದೇ ಈ ವಿಭಾಗದಲ್ಲಿ ಭಾರತದ ಸ್ಥಿತಿಯು ಗಂಭೀರ ಹಸಿವಿನ ಸ್ವರೂಪದ ಹಂತವನ್ನು ತಲುಪಿದ್ದು ಆತಂಕಕಾರಿಯಾಗಿರುವ ಸಂಗತಿಯಾಗಿದೆ. ಮುಖ್ಯವಾಗಿ ಈ ಸೂಚ್ಯಂಕವನ್ನು ನಾಲ್ಕು ವಿಭಾಗಗಳಲ್ಲಿ ಗುರುತಿಸಲಾಗುತ್ತದೆ.

ಮೊದಲನೆಯದು ಒಟ್ಟು ಇರುವ ಜನಸಂಖ್ಯೆಗೆ ಅನುಗುಣವಾಗಿ ಇರುವ ಅಪೌಷ್ಟಿಕತೆಯ ಪ್ರಮಾಣ.ಎರಡನೆಯದಾಗಿ ಒಟ್ಟು ಇರುವಂತಹ ಐದು ವರ್ಷದ ಒಳಗಿನ ಮಕ್ಕಳಲ್ಲಿ ತಮ್ಮ ಎತ್ತರಕ್ಕೆ ಸರಿಯಾಗಿ ತೂಕ ಹೊಂದಿಲ್ಲದೇ ಇರುವ ಮಕ್ಕಳ ಸಂಖ್ಯೆ ಅಥವಾ ಅನುಪಾತ. ಮೂರನೆಯದಾಗಿ ಐದು ವರ್ಷದ ಒಳಗಿನ ಮಕ್ಕಳು ಸುದೀರ್ಘ ಅಪೌಷ್ಟಿಕತೆ ಯಿಂದಾಗಿ ತಮ್ಮ ವಯಸ್ಸಿಗೆ ಸರಿಯಾದ ತೂಕವನ್ನು ಹೊಂದಿಲ್ಲದೇ ಇರುವ ಸ್ಥಿತಿ. ಕೊನೆಯದಾಗಿ ಅನಾ ರೋಗ್ಯಕರ ಪರಿಸರ ಮತ್ತು ಅಪೌಷ್ಟಿಕತೆಯ ಕಾರಣ ದಿಂದಾಗಿ ಮರಣ ಹೊಂದುವ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಸಂಖ್ಯೆ (ಶಿಶು ಮರಣ ದರ).

ಈ ಮೇಲ್ಕಂಡ ನಾಲ್ಕು ಕಾರಣಗಳು ಮಾತ್ರವಲ್ಲದೇ ಒಂದು ದೇಶದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳನ್ನು ಅಲ್ಲಿಯ ಜನರಿಗೆ ಹಂಚುವ ಪ್ರಮಾಣಮತ್ತು ಆಹಾರ ಧಾನ್ಯಗಳ ನಿರ್ವಹಣೆ ಹಾಗೂ ಅಧಿಕಾರ ಕೇಂದ್ರಗಳ ನಿರ್ಧಾರದ ಮೇಲೂ ಸಹ ಜಾಗತಿಕ ಹಸಿವಿನ ಸೂಚ್ಯಂಕವು ನಿರ್ಧರಿಸ ಲ್ಪಡುತ್ತದೆ. ಈ ಸೂಚ್ಯಂಕವನ್ನು ನಿರ್ಧರಿಸಲು ಜಾಗತಿಕ ಮಟ್ಟದ ವಿಶ್ವಸಂಸ್ಥೆ, ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಕೇಂದ್ರದ (ಐಎಫ್‌ಪಿಆರ್‌ಐ) ವರದಿಯ ಅಂಕಿ ಅಂಶಗಳನ್ನೂ ಸಹ ಪಡೆದುಕೊಳ್ಳಲಾಗುತ್ತದೆ. ತಾವು ಬೆಳೆದ ಆಹಾರದ ಮೇಲೆ ರೈತರಿಗೆ ಇರುವ ಹಕ್ಕು ಸ್ವಾಮ್ಯಗಳನ್ನು ಗಮನಿಸಿದರೆ ಬಹಳಷ್ಟು ಬೇಸರ ಮಾಡಿಕೊಳ್ಳಬೇಕಾದಂತಹ ಅನಿವಾರ್ಯತೆ ಎದುರಾಗುತ್ತದೆ. ಕಾರಣ ಈ ಅಂಶವೂ ಸಹ ಹಸಿವಿನ ಸೂಚ್ಯಂಕವನ್ನು ನಿರ್ಧರಿಸುತ್ತದೆ.

ಪ್ರಜಾಪ್ರಭುತ್ವವು ಅಸ್ತಿತ್ವವಿರುವ ನಮ್ಮ ದೇಶದಲ್ಲಿ ಜನಾದೇಶದ ಮೇರೆಗೆ ಅಧಿಕಾರ ಕೇಂದ್ರವು ಆಗಾಗ್ಗೆ ಬದಲಾಗುತ್ತಲೇ ಇರುತ್ತದೆ. ಹೀಗೆ ಬದಲಾದ ಅಧಿಕಾರ ಕೇಂದ್ರವು ಕೈಗೊಳ್ಳುವ ನಿರ್ಧಾರವು ಒಂದು ದೇಶದ ಹಸಿವಿನ ಸೂಚ್ಯಂಕದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಸಂಕ್ಷಿಪ್ತವಾದ ಅಂಕಿ ಅಂಶಗಳಿಂದ ಈ ಪ್ರಮಾಣವನ್ನು ಕೆಳಕಂಡಂತೆ ಗಮನಿಸಬಹುದು.

2013ನೆ ವರ್ಷದ ಕೊನೆಯಲ್ಲಿ ಭಾರತವು ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ 119 ದೇಶಗಳ ಪೈಕಿ 55ನೆ ಸ್ಥಾನದಲ್ಲಿತ್ತು. ಆದರೆ 2016ರ ವೇಳೆಗೆ ಅದು ಭಾರೀ ಕುಸಿತ ಕಂಡು 97ನೆ ಸ್ಥಾನಕ್ಕೆ ತಳ್ಳಲ್ಪಟ್ಟಿತು. ನಂತರ ಈಗ ಅಂದರೆ 2017ರ ಹೊತ್ತಿಗೆ ಈ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನವು ಮತ್ತಷ್ಟು ಕುಸಿದಿದ್ದು 100ನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇಲ್ಲಿ ಪ್ರಮುಖ ವಾಗಿ ಗಮನಿಸಬೇಕಾದ ಅಂಶವೆಂದರೆ 2013ರ ವೇಳೆಗೆ ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವು ಅಸ್ತಿತ್ವದಲ್ಲಿತ್ತು ಮತ್ತು 2016 ಮತ್ತು 2017 ರ ಅವಧಿಯಿಂದ ಕೇಂದ್ರದೊಳಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ ಎಂಬುದು. ಜಾಗತಿಕ ಹಸಿವಿನ ಸೂಚ್ಯಂಕವು ರೂಪುಗೊಳ್ಳಲು ಆಯಾ ದೇಶದ ಅಧಿಕಾರ ಕೇಂದ್ರ ವು ತಮ್ಮ ದೇಶದೊಳಗೆ ರೂಪಿಸುವ ಆಹಾರ ಮತ್ತು ಆರ್ಥಿಕ ನೀತಿಗಳು ಪ್ರಮುಖ ಪಾತ್ರವಹಿಸುವ ಕಾರಣಕ್ಕಾಗಿ ಇದನ್ನು ಒತ್ತಿ ಹೇಳಬೇಕಾಗಿದೆ.

ಭಾರತಕ್ಕೆ ಸಹಾಯ ಮಾಡುವಂತಹ ವೆಲ್ತ್ ಹಂಗರ್ ಲೈಫ್ ಸಂಸ್ಥೆಯ ನಿರ್ದೇಶಕಿಯಾದ ನಿವೇದಿತಾ ವರ್ಷ್ನೇಯಾ ಅವರು ‘‘ಭಾರತದಲ್ಲಿ ಈಗೀಗ ಅಧಿಕಾರ ಕೇಂದ್ರದ ನೀತಿಗಳ ಕಾರಣದಿಂದ ಎಲ್ಲಾ ಕ್ಷೇತ್ರದಲ್ಲಿ ಉಂಟಾಗಿ ರುವ ಅಸಮಾನತೆಯ ಕಾರಣದಿಂದಾಗಿ, ಭಾರತದಲ್ಲಿ ಆಹಾರ ಮತ್ತು ಪೌಷ್ಠಿಕತೆ ಭದ್ರತೆಯ ಪ್ರಮಾಣ ತೀವ್ರ ಕುಸಿತ ಕಂಡಿದೆ’’ ಎಂದು ಹೇಳುತ್ತಾರೆ. ಇದಕ್ಕೆ ಪೂರಕವೆಂಬಂತೆ 2000ದ ಅವಧಿಯಲ್ಲಿ ಶೇ.29ಕ್ಕೆ ಇಳಿಕೆ ಕಂಡಿದ್ದ ಶಿಶು ಕ್ಷೀಣತೆಯ ಪ್ರಮಾಣವು 2016ರಲ್ಲಿ ಶೇ.38.4ರಷ್ಟು ಅಪಾಯಕಾರಿ ಏರಿಕೆಯನ್ನು ಕಂಡಿದೆ.

ಇನ್ನು ಅಪೌಷ್ಟಿಕತೆಯ ಪ್ರಮಾಣವು ಶೇ.30ಕ್ಕೆ ಏರಿಕೆ ಕಂಡಿದ್ದು ಏಷ್ಯಾದ ದೇಶಗಳ ಒಟ್ಟಾರೆ ಅಂಕಿ ಅಂಶಗಳ ಮೇಲೆ ಕೆಟ್ಟ ಪ್ರಭಾವ ಬೀರಿದೆ. ಈ ವರ್ಷದಲ್ಲಿ ದಕ್ಷಿಣ ಆಫ್ರಿಕಾವನ್ನು ಬಿಟ್ಟರೆ ಭಾರತದಲ್ಲೇ ಅತ್ಯಂತ ಕೆಟ್ಟದಾಗಿ ಆಹಾರ ನೀತಿಗಳನ್ನು ನಿರ್ವಹಿಸಲಾಗಿದೆ. ಆಹಾರದ ಮೇಲಿನ ಸ್ವಾವಲಂಬನೆಯ ದರವೂ ಸಹ ತೀವ್ರಗತಿಯಲ್ಲಿ ಕುಸಿತ ಕಂಡಿದ್ದು, ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದ್ದ ದೇಶಕ್ಕೆ ಆತಂಕಕಾರಿಯಾಗಿ ಪರಿಣಮಿಸಿದೆ.

ನರೇಂದ್ರ ಮೋದಿಯವರು 2014ರಲ್ಲಿ ಅಧಿಕಾರ ವಹಿಸಿಕೊಳ್ಳುವ ವೇಳೆಗೆ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿ 119 ದೇಶಗಳ ಪೈಕಿ 55ನೆ ಸ್ಥಾನದಲ್ಲಿದ್ದ ಭಾರತವು 2017ರ ಹೊತ್ತಿಗೆ 100ನೆ ಸ್ಥಾನಕ್ಕೆ ತಲುಪಿದ್ದು ಆರ್ಥಿಕವಾಗಿ ಹಿಂದುಳಿದ ಬಾಂಗ್ಲಾದೇಶ, ಇರಾಕ್, ನೇಪಾಳ ದೇಶಕ್ಕಿಂತಲೂ ಹೀನಾಯವಾದ ಸ್ಥಿತಿಯನ್ನು ತಲುಪಿದ್ದು, ಉಪಖಂಡವೆನಿಕೊಂಡ ದೇಶಕ್ಕೆ ಮಾರಕವಾದ ಬೆಳವಣಿಗೆ ಆಗಿದೆ.

ಇನ್ನೂ ದುರಂತವೆಂದರೆ ಭಾರತದ ಔದ್ಯೋಗಿಕ ವಲಯವೂ (3 ವಲಯಗಳು) ಸಹ ಅಕ್ಷರಸ್ಥ ಯುವಕ/ಯುವತಿಯರಿಗೆ ಉದ್ಯೋಗ ಗಳನ್ನು ಸೃಷ್ಟಿಸಲು ವಿಫಲವಾಗುತ್ತಿದ್ದು ತಿಂಗಳಿಗೆ ಒಂದು ಮಿಲಿಯನ್‌ಗಿಂತ ಹೆಚ್ಚಿನ ಯುವಕ/ಯುವತಿಯರು ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಬಂದು ಬರಿಗೈಲಿ ನಿರಾಸೆಯಿಂದ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ. ಶೇ.80ಕ್ಕೂ ಹೆಚ್ಚಿನಷ್ಟು ಜನರಿಗೆ ಕೃಷಿ ಮಾಡಲೂ ಸಹ ಅವರಲ್ಲಿಭೂಮಿ ಇಲ್ಲದ ಸ್ಥಿತಿಯಿದ್ದು, ಅವರೆಲ್ಲಾ ಆರ್ಥಿಕವಾಗಿ ಉತ್ಪಾದನಾ ರಹಿತವಾಗಿ ಬದುಕುತ್ತಾ ಆತಂಕದ ಸ್ಥಿತಿಯಲ್ಲಿದ್ದಾರೆ.

ಭಾರತ ದೇಶದಲ್ಲಿ ಶೇ.60ಕ್ಕಿಂತ ಹೆಚ್ಚಿನ ಕುಟುಂಬಗಳು ಕೃಷಿ ಉತ್ಪಾದನೆ ಯಲ್ಲಿ ತೊಡಗಿವೆೆ. ಹೀಗಿದ್ದರೂ ಸುಲಭವಾಗಿ ಅಹಾರ ಸ್ವಾವಲಂಬನೆ ಯನ್ನು ಸಾಧಿಸಬೇಕಿದ್ದ ಭಾರತ ದೇಶವು ಹಸಿವಿನಿಂದ ಬಳಲುತ್ತಿದೆ. ಇನ್ನು ಕೃಷಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಟ್ಟು ಶೇ.55ರಷ್ಟು ಜನರು ನೇರವಾಗಿ ಈ ವಲಯದಲ್ಲಿದ್ದು ಇವರಿಗಾಗಿ ಸರಕಾರವು ಹೂಡಿಕೆ ಮಾಡಿ ರುವ ಪ್ರಮಾಣ ಶೇ.4 ಮಾತ್ರವೇ ಆಗಿದೆ. ಇದರಿಂದಾಗಿ ಕೃಷಿ ಉತ್ಪಾದನೆ ಯು ಗಂಭೀರ ಪ್ರಮಾಣದಲ್ಲಿ ಕಡಿಮೆಗೊಂಡಿದ್ದು ಹಸಿವು ಮತ್ತು ಅಪೌಷ್ಟಿಕತೆಯ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯು ಹೇಳುತ್ತದೆ.

ಉತ್ತಮವಾದ ಸರಕಾರ ಬಂತು ಎಂದು ಸಾರ್ವಜನಿಕರು ಸಂಭ್ರಮ ಪಟ್ಟಿದ್ದಕ್ಕೆ ಸರಕಾರವು ತನ್ನ ಅವಿವೇಕಿ ಆರ್ಥಿಕ ಕ್ರಮಗಳ ಮೂಲಕ ಅವರ ಮೇಲೆ ಚಾಟಿ ಬೀಸಿದೆ. ಸಾಕಷ್ಟು ಆಸ್ತಿ ಪಾಸ್ತಿ, ಹಣ, ಸಮಯ ಮತ್ತು ಸಂಪನ್ಮೂಲ ವ್ಯರ್ಥವಾಗಿ ಜನರು ನೇರವಾದ ಆರ್ಥಿಕ ತೊಂದರೆಯನ್ನು ಅನುಭವಿಸಿ ಸಣ್ಣ ಪ್ರಮಾಣದ ವ್ಯಾಪಾರಿಗಳು ಮತ್ತು ಉತ್ಪಾದನಾ ಕ್ಷೇತ್ರಗಳು ತತ್ತರಿಸಿಹೋಗಿರುವ ಸಂದರ್ಭದಲ್ಲೂ ಸಹ ಮೋದಿಯ ಸರಕಾರವು ದೇಶವು ಅಭಿವೃದ್ಧ್ದಿ ಹೊಂದುತ್ತಿದೆ ಎಂಬ ಭ್ರಮೆಯನ್ನು ಹುಟ್ಟು ಹಾಕಿದೆ.

ಸರಕಾರದ ಆರ್ಥಿಕ ನೀತಿಗಳನ್ನು ಸಹ ಈಗಾಗಲೇ ಸಂಪತ್ತನ್ನು ಹೊಂದಿರುವವರ ಪರವಾಗಿಯೇ ರೂಪಿಸುತ್ತಿರುವುದೂ ಸಹ ಈ ಆತಂಕಕಾರಿ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಲಾ ಗುತ್ತಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರವು ಅಸ್ತಿತ್ವಕ್ಕೆ ಬಂದ ನಂತರ ಭಾರತದ ಹಲವು ಉದ್ಯಮಿಗಳ ಆಸ್ತಿ ಮೌಲ್ಯವು ದಿಗಿಲು ಹುಟ್ಟಿಸುವಂತೆ ಏರಿಕೆ ಕಂಡಿದೆ. ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿಯವರ ಆಸ್ತಿ ಮೌಲ್ಯವು ತಮ್ಮ ಮೂಲ ಆಸ್ತಿಯ ಶೇ.67ರಷ್ಟು ಹೆಚ್ಚಾಗಿದ್ದರೆ, ಅದಾನಿ ಗ್ರೂಪ್‌ನ ಮುಖ್ಯಸ್ಥರಾದ ಗೌತಮ್ ಅವರ ಮೂಲ ಆಸ್ತಿಯ ಪ್ರಮಾಣದಲ್ಲಿ ಶೇ.67ರಷ್ಟು ಏರಿಕೆ ಕಂಡಿದೆ. ಇಷ್ಟೇ ಅಲ್ಲದೇ ಪತಂಜಲಿ ಎಂಬ ಹೆಸರಿನ ಮೂಲಕ ತನ್ನ ಉದ್ಯಮವನ್ನು ದೇಶಾದ್ಯಂತ ವಿಸ್ತರಿಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಅವರ ಆಸ್ತಿ ಮೌಲ್ಯವು ಶೇ.78ರಷ್ಟು ಏರಿಕೆ ಕಂಡಿದ್ದು, ದೇಶದ ಹಲವಾರು ಕಡೆ ಮೂಲಸೌಕರ್ಯಗಳ ರೂಪದಲ್ಲಿಯೂ ಆಸ್ತಿಯನ್ನು ಗಳಿಸಿದ್ದಾರೆ. ಇದಲ್ಲದೇ ಇತ್ತೀಚೆಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಶಾ ಅವರು ಅತೀ ಹೆಚ್ಚಿನ 16,000 ಪಟ್ಟು ಆಸ್ತಿ ಗಳಿಸಿದ್ದು ಮೋದಿ ಸರಕಾರದ ಆಡಳಿತ ವ್ಯವಸ್ಥೆಯು ಇದಕ್ಕೆ ಪೂರಕವಾಗಿ ವರ್ತಿಸಿದೆ.

ಒಟ್ಟಾರೆ ಭಾರತದಲ್ಲಿ ಬಹಳಷ್ಟು ಮಕ್ಕಳು ಒಂದೆಡೆ ತೀವ್ರವಾದ ಹಸಿವು, ಅಪೌಷ್ಟಿಕತೆ, ಕುಂಠಿತ ಬೆಳವಣಿಗೆಯಿಂದ ಬಳಲುತ್ತಾ ಗಂಭೀರ ಸ್ಥಿತಿಯನ್ನು ಅನುಭವಿಸುತ್ತಿದ್ದರೆ ಇನ್ನೊಂದೆಡೆ ಶ್ರೀಮಂತರ ಆಸ್ತಿಯನ್ನು ಅರ್ಥಹೀನವಾಗಿ ಹೆಚ್ಚಳ ಮಾಡುವತ್ತ ಮೋದಿ ಸರಕಾರದ ಪ್ರಮುಖ ಆರ್ಥಿಕ ನೀತಿಗಳು ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ದೇಶದ ಶೇ.2 ಜಿಡಿಪಿ ಆರ್ಥಿಕ ದರದ ಕುಸಿತಕ್ಕೆ ಮೋದಿಯ ಸರಕಾರವು ಕಾರಣವಾಗಿದೆ. ತನ್ನ ಅಧಿಕಾರಾವಧಿ ಮುಗಿಯುವ ವೇಳೆಗೆ ಭಾರತದ ಬಡವರ ಸ್ಥಿತಿ ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಎಷ್ಟರ ಮಟ್ಟಿಗೆ ಹದಗೆಡಿಸಲಿದೆ ಎಂಬುದರ ಬಗ್ಗೆ ಬಹಳಷ್ಟು ಜನ ಆರ್ಥಿಕ ತಜ್ಞರು ಆತಂಕಗೊಂಡಿದ್ದಾರೆ. ಇದರೊಂದಿಗೆ ಈ ದೇಶದ ಜನಸಾಮಾನ್ಯರು ಹಾಗೂ ನಮ್ಮಲ್ಲಿ ಗಂಭೀರವಾಗಿ ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಿರುವ ಯುವಕ/ಯುವತಿಯರೂ ಸಹ ಈ ಬಗ್ಗೆ ತೀವ್ರ ಆತಂಕಗೊಂಡಿದ್ದು, ತಮ್ಮ ಅಸ್ಪಷ್ಟವಾದ ಭವಿಷ್ಯದ ಕನಸನ್ನು ಹೊತ್ತು ನೋವಿನಲ್ಲಿ ಬದುಕುತ್ತಿದ್ದಾರೆ ಎಂಬುದಂತೂ ಸತ್ಯ.

ವಿಶ್ವ ಹಸಿದವರ ಸೂಚ್ಯಂಕ ಕಿರುಪಟ್ಟಿ

ಭಾರತದ ಕಡೆಗಣಿತರ ವರದಿಯೊಂದಿಗೆ ಪರಿಶೀಲಿಸಬೇಕಾದ ಇನ್ನೊಂದು ವರದಿ ಎಂದರೆ ವಿಶ್ವ ಹಸಿವಿನ ಅಥವಾ ಹಸಿದವರ ಸೂಚ್ಯಂಕ. ಜರ್ಮನಿಯ ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಸಂಸ್ಥೆಯು 2006ರಿಂದ ಪ್ರತೀ ವರ್ಷ ಈ ವರದಿ ಪ್ರಕಟಿಸುತ್ತಿದೆ. 2016ರ ವರದಿಯು ಭಾರತ ಹಾಗೂ ನೆರೆಯ ದೇಶಗಳ ಜನರ ಸ್ಥಿತಿಯ ಬಗ್ಗೆ ಹೀಗೆ ಹೇಳಿದೆ.

ಇದರೊಂದಿಗೆ ಆಸ್ಟ್ರೇಲಿಯಾದ ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್ ಎಂಬ ಸಂಶೋಧನಾ ಸಂಸ್ಥೆಯು 2007ರಿಂದ ಪ್ರತೀ ವರ್ಷ ಪ್ರಕಟಿಸುತ್ತಿರುವ ವಿಶ್ವ ಶಾಂತಿಯುತ ದೇಶಗಳ ಪಟ್ಟಿಯಲ್ಲೂ ಸಹ ಭಾರತದ ಸ್ಥಾನವು ಒಟ್ಟು 162 ದೇಶಗಳ ಪೈಕಿ 138ನೆ ಸ್ಥಾನಕ್ಕೆ ಕುಸಿಯಲ್ಪಟ್ಟಿದೆ.

Writer - ರಮೇಶ್. ಎಚ್.ಕೆ ಶಿವಮೊಗ್ಗ

contributor

Editor - ರಮೇಶ್. ಎಚ್.ಕೆ ಶಿವಮೊಗ್ಗ

contributor

Similar News