ಪ್ರಧಾನ ದಾರೆಗೆ ತರುವುದೆಂದರೇನು?

Update: 2017-11-11 18:06 GMT

ಭಾಗ1

ಆಳು ನೋಡಿದರೆ ಅಲಂಕಾರ

ಈ ಶತಮಾನದ ಅತ್ಯಂತ ದೊಡ್ಡ ವ್ಯಂಗ್ಯವೆಂದರೆ ದುಬಾರಿಯ ಮತ್ತು ವೈಭವದ ಉಡುಪೊಂದನ್ನು ತಯಾರು ಮಾಡಿ ಅದಕ್ಕೆ ದೇಹವನ್ನೇ ಒಳಪಡಿಸದಿರುವುದು, ಅಥವಾ ಹೀಗೂ ಹೇಳಬಹುದೇನೋ; ಬಾರಿ ಬಾರಿ ಅಡುಗೆ ಪಾತ್ರೆಗಳಲ್ಲಿ ಅಡುಗೆಯೇ ಇಲ್ಲದೇ, ಅದನ್ನು ತೋರಿಸುತ್ತಾ ಎಲ್ಲರಿಗೂ ಹೊಟ್ಟೆ ತುಂಬಿಸುವ ಮಾತುಗಳನ್ನಾಡುವುದು. ಸರಳವಾಗಿ ಹೇಳುವುದಾದರೆ, ಆಳು ನೋಡಿದರೆ ಅಲಂಕಾರ. ಬಾಳು ನೋಡಿದರೆ ಬಣಬಣ.

ಎಂತಹ ಗುಡಿಸಲುಗಳಲ್ಲಿ, ಕೊಳೆಗೇರಿಗಳಲ್ಲಿ, ಬಡವರ ಹಟ್ಟಿಗಳಲ್ಲಿ ನೋಡಿದರೂ ಡಿಶ್ ಆಂಟೆನಾಗಳು ಕಾಣುತ್ತವೆ. ಹುಡುಗರ ಕೈಗಳಲ್ಲಿ ಆಧುನಿಕತೆಯ ಪ್ರತಿಯಾಗಿ ಮೊಬೈಲ್ ಫೋನ್‌ಗಳಿವೆ. ಇನ್ನು ಕೇಶವಿನ್ಯಾಸಗಳು, ಅವುಗಳಿಗೆ ಹಚ್ಚಿರುವ ಬಣ್ಣಗಳು, ನವೀನ ಯುಗದ ಉಡುಗೆ ತೊಡುಗೆಗಳು ಎಲ್ಲವೂ ಅವರಿಗೆ ದೊರಕುತ್ತಿವೆ. ಆದರೆ ಅವರಿಗೆ ಆಲೋಚಿಸಲೇ ಬರುವುದಿಲ್ಲ. ವಿಚಾರಗಳೇ ತಿಳಿದಿರುವುದಿಲ್ಲ. ಕ್ರಿಯೆಗೆ ಸರಿಯಾಗಿ ಒಂದು ಪ್ರತಿಕ್ರಿಯೆ ಕೊಡಲೂ ಬರುವುದಿಲ್ಲ. ತಮ್ಮ ಬದುಕಿನ ಅಗತ್ಯವೇನೆಂದು ಗುರುತಿಸಲು ಬರುತ್ತಿಲ್ಲ. ಇದೇ ಅತೀ ದೊಡ್ಡ ಸಮಸ್ಯೆ. ತಮ್ಮ ಶಕ್ತಿ, ಸಮಯ ಮತ್ತು ಇರುವ ಅತ್ಯಲ್ಪ ಸಂಪನ್ಮೂಲವನ್ನು ಎಲ್ಲಿ, ಹೇಗೆ, ಯಾವುದಕ್ಕೆ ತೊಡಗಿಸಬೇಕೆಂದೇ ತಿಳಿದಿಲ್ಲ. ಹಾಗಾಗಿ ಬಣಗುಟ್ಟುವ ಬಾಳನ್ನು ಬದುಕುತ್ತಿರುವ ಆಳು ಅಲಂಕಾರವಾಗಿ ಕಾಣುತ್ತಾನೆ. ಇಂದಿನ ಶಿಕ್ಷಣ ವ್ಯವಸ್ಥೆಯ ಕತೆ ಇದೇ ಆಗಿದೆ. ಅಲಂಕಾರದ ತೋರಿಕೆ. ಬಾಳು ಬಣಗುಟ್ಟುತ್ತಿದೆ. ಅದರಲ್ಲಿಯೂ ಮಕ್ಕಳ ವಿಷಯದಲ್ಲಿ. ಇನ್ನು ತಳವರ್ಗದ ಮತ್ತು ದಮನಿತ ಮಕ್ಕಳ ಶಿಕ್ಷಣ ವ್ಯವಸ್ಥೆಯಂತೂ ಕೇಳುವುದೇ ಬೇಡ. ತಳವಿಲ್ಲದ ಪಾತಾಳ. ಮುಖ್ಯವಾಗಿ ಮುಖ್ಯವಾಹಿನಿ ಎಂದರೇನೆಂದು ತಿಳಿದುಕೊಳ್ಳಬೇಕಾದ ಅಗತ್ಯ ಇಡೀ ಶಿಕ್ಷಣವ್ಯವಸ್ಥೆಗೇ ಇದೆ. ಮುಖ್ಯವಾಹಿನಿ

     ಯಾವ ವಿಚಾರ, ವಿಜ್ಞಾನ, ತಂತ್ರಜ್ಞಾನ, ವ್ಯವಸ್ಥೆಗಳು ತಮ್ಮ ಬದುಕಿನ ದಿಕ್ಕನ್ನು ಘನತೆಯಿಂದ ಶಿಕ್ಷಣ ಪಡೆಯಲು, ಆಹಾರ ಹೊಂದಲು, ಆರೋಗ್ಯವಾಗಿರಲು, ತಲೆಯ ಮೇಲೆ ಸೂರು ಕಾಣಲು, ಸಂಘಜೀವಿಯಾಗಿದ್ದುಕೊಂಡು ಪರಸ್ಪರ ಅರಿಯುತ್ತಾ, ಗೌರವಿಸುತ್ತಾ ಸಾಮೂಹಿಕವಾಗಿ ಬದುಕಲು ಸಾಧ್ಯವಾಗುವಂತಹ ಒಂದು ಹರಿವೇ ಮುಖ್ಯವಾಹಿನಿ. ಮುಖ್ಯವಾಹಿನಿ ಎಂದರೆ ಯಾವುದು ಅಲ್ಲ ಎನ್ನುವುದನ್ನು ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವ ವಿಚಾರವಾಗಿದೆ.

1.ಮುಖ್ಯವಾಹಿನಿ ಎಂದರೆ ಯಾವುದೋ ಒಂದು ವ್ಯಾಪಕವಾಗಿರುವ ಸಂಸ್ಕೃತಿ ಅಥವಾ ಅದರ ಅನುಕರಣೆ ಅಲ್ಲ.

2.ಬಹಳಷ್ಟು ಜನರು ಪೂಜಿಸುವ ದೇವರನ್ನು ಆರಾಧಿಸುವುದೋ, ಬಹುಸಂಖ್ಯಾತರ ಧರ್ಮವನ್ನು ಅನುಸರಿಸುವುದೋ, ಎಲ್ಲರೂ ಒಪ್ಪುವ ಉಡುಗೆ ಮತ್ತು ತೊಡುಗೆಗಳನ್ನು ಹೊಂದುವುದೋ ಅಲ್ಲ.

3.ಕ್ಲಾಸಿಕಲ್ ಅಥವ ಶಾಸ್ತ್ರೀಯ ಎಂದು ಗುರುತಿಸಲ್ಪಟ್ಟಿರುವುದೋ, ಮೇಲ್ವರ್ಗದ ಜನರು ಅನುಸರಿಸುವಂತಹ ಅಥವಾ ಅನುಮೋದಿಸುವಂತಹ ವಿಷಯ ಮತ್ತು ಕ್ಷೇತ್ರಗಳೋ ಏನಲ್ಲ.

4.ನವನವೀನ ಪಟ್ಟಣಗಳಲ್ಲಿ ವಾಸ ಮಾಡುವುದಲ್ಲ.

5.ಎಲ್ಲರೂ ಉಪಯೋಗಿಸುವಂತಹ ಇಲೆಕ್ಟ್ರಾನಿಕ್ಸ್ ಗೆಜೆಟ್‌ಗಳನ್ನು ಉಪಯೋಗಿಸುವುದಲ್ಲ. ಎಲ್ಲಾ ಜನರೂ ನೋಡುವಂತಹ ಟಿವಿ ಸೀರಿಯಲ್ಸ್, ಸಿನೆಮಾ ಮತ್ತು ರಿಯಾಲಿಟಿ ಶೋಗಳನ್ನು ನೋಡುವುದಲ್ಲ.

6.ಇನ್ನೂ ಮುಖ್ಯವಾಗಿ ಎಲ್ಲೋ ಹಳ್ಳಿಗಾಡಲ್ಲಿ ಇರುವವರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ವಾಹಿನಿಯವರ ತಾಳಕ್ಕೆ ಕುಣಿಯುವುದಲ್ಲ. ಹಾಗಾದರೆ ನಿಜವಾಗಿ ಪ್ರಧಾನಧಾರೆ ಅಥವಾ ಮುಖ್ಯವಾಹಿನಿ ಅಂದರೇನು?

ಮುಖ್ಯವಾಹಿನಿಗೆ ಬರುವಂತಹ ಶಿಕ್ಷಣವನ್ನು ಎಲ್ಲಾ ವರ್ಗದ, ಎಲ್ಲಾ ಹಿನ್ನೆಲೆಗಳ ಮಕ್ಕಳಿಗೆ ಕೊಡುವುದೆಂದರೇನು? ಅದರಲ್ಲೂ ಪಟ್ಟಣದ ದುಬಾರಿ ಶಾಲೆಗಳಲ್ಲಿ ಓದುವ ಮಕ್ಕಳು ಮುಖ್ಯವಾಹಿನಿಯಲ್ಲಿದ್ದಾರೆ ಮತ್ತು ಇಂಗ್ಲಿಷ್ ವಿದ್ಯಾಭ್ಯಾಸ ಪಡೆಯುತ್ತಿರುವವರು ಪ್ರಧಾನಧಾರೆಯಲ್ಲಿದ್ದಾರೆ ಎಂಬ ಅತ್ಯಂತ ತಿಳಿಗೇಡಿತನದ ಪರಿಕಲ್ಪನೆಯನ್ನು ನಮ್ಮಲ್ಲಿ ಹೊಂದಿದ್ದಾರೆ.

ಮುಖ್ಯವಾಹಿನಿಯ ಶಿಕ್ಷಣ

ಶಿಕ್ಷಕರು ಮತ್ತು ಪೋಷಕರು ಮಕ್ಕಳು ಯಾವುದೇ ರೀತಿಯ ಮತ್ತು ಯಾವುದೇ ಕ್ಷೇತ್ರದ ಶಿಕ್ಷಣವನ್ನು ಪಡೆಯುತ್ತಿದ್ದರೂ, ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳನ್ನು ಮಾಡಬೇಕೆಂದರೆ ಮಾಡಬೇಕಾಗಿರುವುದು ಇವುಗಳನ್ನು.

1.ನಮ್ಮ ಮೂಲಭೂತ ಸೌಕರ್ಯಗಳು ಮತ್ತು ಹಕ್ಕುಗಳಾದ ಆಹಾರ, ಆರೋಗ್ಯ, ವಸತಿ, ಶಿಕ್ಷಣ ಮತ್ತು ಜನ ಸಂಪರ್ಕ ಇವುಗಳು ದೊರಕುವಂತಹ ಮೂಲಗಳು, ವ್ಯವಸ್ಥೆಗಳು, ಅವಕಾಶಗಳು ಮತ್ತು ಸರಿಯಾದ ಬಳಕೆಗಳು; ಇವುಗಳ ಬಗ್ಗೆ ಮಾಹಿತಿ, ಅರಿವು ಮತ್ತು ಪಡೆಯುವ ವಿಧಾನಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನಗಳನ್ನು ಹೊಂದುವುದರಿಂದ ಮುಖ್ಯವಾಹಿನಿಯನ್ನು ಪ್ರವೇಶಿಸುವಂತಾಗುತ್ತದೆ.

2.ನಮ್ಮ ಆಸಕ್ತಿಯ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳ ಅರಿವು ಇರಬೇಕು. ಅದು ಪುಸ್ತಕಗಳ ಮೂಲಗಳಾಗಲಿ, ಅಂತರ್ಜಾಲದ ಬಳಕೆಗಳಿಂದಾಗಲಿ, ವ್ಯಕ್ತಿಗಳ ಮಾತುಕತೆಗಳಿಂದಾಗಲಿ, ಸ್ಥಳ ಮತ್ತು ವಸ್ತುಗಳನ್ನು ಗುರುತಿಸುವುದರಿಂದಾಗಲಿ, ದೊರಕುವ ವಿವಿಧ ವಸ್ತುಗಳನ್ನು ಗಮನಿಸುವುದರಿಂದಾಗಲಿ, ಸಭೆೆ ಮತ್ತು ಸಂವಾದ ಕಾರ್ಯಕ್ರಮಗಳಿಂದಾಗಲಿ; ಒಟ್ಟಾರೆ ಮಾಹಿತಿಗಳನ್ನು ಕಲೆಹಾಕಲು, ನಮ್ಮ ಆಸಕ್ತಿಯ ವಿಷಯಗಳಿಗೆ ಪೂರಕವಾಗಿರುವಂತಹ, ಬಲಗೊಳಿಸುವಂತಹ ಎಲ್ಲಾ ಬಗೆಯ ಸಂಪನ್ಮೂಲಗಳನ್ನು ಅವನು ಅರಿಯುತ್ತಿದ್ದಾನೆಂದರೆ ಮುಖ್ಯವಾಹಿನಿಯಲ್ಲಿದ್ದಾನೆಂದೇ ಅರ್ಥ.

3.ರೂಢಿಯಲ್ಲಿರುವ ತಮ್ಮದೊಂದು ಬದುಕುವ ರೀತಿ ಮತ್ತು ಜೀವನ ಶೈಲಿಯ ಬಗ್ಗೆ ಸ್ಪಷ್ಟ ಅರಿವು ಇದ್ದು, ಅದರಂತೆಯೇ ಇತರರೂ ಬದುಕುವ ರೀತಿ ಮತ್ತು ಜೀವನ ಶೈಲಿಯ ಬಗ್ಗೆ ಮಾಹಿತಿ ಮತ್ತು ಅರಿವು, ಮುಖ್ಯವಾಗಿ ಇತರರದ್ದರ ಬಗ್ಗೆ ಕುತೂಹಲ ಮತ್ತು ಸ್ವೀಕೃತಿಯ ಸಹನೆಯನ್ನು ಬೆಳೆಸಿಕೊಳ್ಳುವುದರಿಂದ ಮುಖ್ಯವಾಹಿನಿಗೆ ಅರ್ಹರಾಗುತ್ತಾರೆ.

4.ಕೊಟ್ಟದ್ದನ್ನು ಪಡೆದು, ಇಟ್ಟಂತೆ ಇದ್ದು, ಕರೆದಂತೆ ನಡೆಯುವುದು ನಮ್ಮ ಬಾಳು ಎಂಬ ಯಥಾಸ್ಥಿತಿವಾದವನ್ನು ಒಪ್ಪದೇ, ನಮ್ಮನ್ನು ಪ್ರಭಾವಿಸುವಂತಹ ವ್ಯವಸ್ಥೆ, ಸಂಪ್ರದಾಯ ಮತ್ತು ಸಮುದಾಯದ ಧೋರಣೆಗಳನ್ನು, ಅಹಿತಕರವಾದಾಗ ಪ್ರಶ್ನಿಸುವ, ಪ್ರತಿಭಟಿಸುವ ಮತ್ತು ಎದುರಾಗಿ ನಿಲ್ಲುವ ಮನಸ್ಥಿತಿಯನ್ನು ಮತ್ತು ಧೈರ್ಯವನ್ನು ಬೆಳೆಸಿಕೊಳ್ಳುವ ವ್ಯಕ್ತಿ ಮತ್ತು ಪೀಳಿಗೆಗಳು ಮುಖ್ಯವಾಹಿನಿಯಲ್ಲಿ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಳ್ಳುತ್ತದೆ.

5.ಆಡಳಿತ ವ್ಯವಸ್ಥೆಯ ಮತ್ತು ಸರಕಾರಗಳ ಒಲವು, ನಿಲುವು ಮತ್ತು ನಡೆಗಳನ್ನು ಗಂಭೀರವಾಗಿ ಗಮನಿಸುತ್ತಾ, ಸಾಮಾಜಿಕವಾಗಿ ಅದರ ನಡೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ನೇರ ಭಾಗವಾಗುವುದು ಮುಖ್ಯವಾಹಿನಿಯಲ್ಲಿರುವುದರ ಒಂದು ಮುಖ್ಯ ಲಕ್ಷಣ.

6.ಸಮಾಜದಲ್ಲಿರುವ ಮತ್ತು ಚಾಲ್ತಿಯಲ್ಲಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಮತ್ತು ಅದರ ವಿಷಯವಾಗಿ ತಮ್ಮ ಪ್ರತಿಕ್ರಿಯೆ ಮತ್ತು ಪ್ರತಿಸ್ಪಂದನಗಳನ್ನು ಅಭಿವ್ಯಕ್ತಿಗೊಳಿಸುವುದು ಮತ್ತು ದಾಖಲು ಮಾಡುವುದು ಕೂಡ ಮುಖ್ಯವಾಹಿನಿಯಲ್ಲಿರುವುದರ ಮುಖ್ಯಾಂಶವಾಗಿದೆ.

7.ತನ್ನ ರೂಢಿ ಅಥವಾ ಆಸಕ್ತಿಗೆ ಹೊರತಾದ ಸಂಸ್ಕೃತಿ ಮತ್ತು ಜೀವನ ಶೈಲಿಗಳನ್ನು ಅನುಸರಿಸುತ್ತಿರುವವರ ಸ್ನೇಹ, ಸಾಮಾಜಿಕವಾಗಿ ಕೊಡುಕೊಳ್ಳುವಿಕೆ, ಮುಕ್ತ ಸಂವಾದಗಳು ಮುಖ್ಯವಾಹಿನಿಯಲ್ಲಿರುವವರ ಲಕ್ಷಣಗಳೇ ಆಗಿವೆ. ಇಂತಹ ಮನಸ್ಥಿತಿಯನ್ನು ಹೊಂದದೇ ಇರುವ ವ್ಯಕ್ತಿಗಳು ಎಷ್ಟು ಪ್ರಖ್ಯಾತರಾಗಿದ್ದರೂ, ಎಷ್ಟು ತಮ್ಮ ವೈಯಕ್ತಿಕ ಸಾಧನೆಗಳನ್ನು ಮಾಡಿದ್ದರೂ ತಮ್ಮದೇ ಕಾಲುವೆಯಲ್ಲಿರುವವರೇ ಹೊರತು ಮುಖ್ಯವಾಹಿನಿಯಲ್ಲಿರುವವರಲ್ಲ.

8.ಆಹಾರ ಪದ್ಧತಿ, ಉಡುಗೆ ತೊಡುಗೆಗಳು, ಕಲಿಕೆ ಮತ್ತು ಬದುಕುವ ವಿಧಾನಗಳು ಇವುಗಳ ತಾರತಮ್ಯಗಳನ್ನು ಗುರುತಿಸುವ ಮತ್ತು ಪ್ರಶಂಸಿಸದೇ ಇದ್ದರೂ, ಅಳವಡಿಸಿಕೊಳ್ಳದೇ ಇದ್ದರೂ, ಅವುಗಳ ಇರುವಿಕೆಯನ್ನು ಮಾನ್ಯಮಾಡುವ ಗುಣವುಳ್ಳವರು ಮುಖ್ಯವಾಹಿನಿಯಲ್ಲಿ ಯೋಗ್ಯವ್ಯಕ್ತಿಗಳಾಗಿರುತ್ತಾರೆ.

9.ತಮ್ಮ ಪ್ರತಿಭೆ, ಆಸಕ್ತಿ, ಕೌಶಲ್ಯ, ಪ್ರಾವೀಣ್ಯತೆ; ಇವುಗಳನ್ನು ಸಮಾಜದಲ್ಲಿ ತನ್ನಂತೆಯೇ ಇರುವ ಜನರೊಂದಿಗೆ ಹಂಚಿಕೊಳ್ಳಲು ಅಥವಾ ಅವರಿಗೆ ಪ್ರದರ್ಶಿಸಲು ಹಿಂಜರಿದರೆ ಅಥವಾ ನಿರಾಕರಿಸಿದರೆ ಅವನು ಮುಖ್ಯವಾಹಿನಿಯಿಂದ ಹೊರತಾದವನು ಎಂದರ್ಥ.

10.ಒಟ್ಟಾರೆ ಮುಖ್ಯವಾಹಿನಿ ಎಂಬುದು ಯಾವುದೋ ಪ್ರಮುಖ ಧರ್ಮದ, ಸಂಸ್ಕೃತಿಯ, ರಾಜಕೀಯ ವ್ಯವಸ್ಥೆಯ, ಮನಸ್ಥಿತಿಯ ರಭಸದ ಹರಿಯುವಿಕೆಯಲ್ಲ. ಎಲ್ಲರೊಳಗೊಂದಾಗಿ ತಮ್ಮ ಬದುಕಿನ ಘನತೆಯನ್ನು ಕಾಪಾಡಿಕೊಳ್ಳುತ್ತಾ, ಇತರರ ಜೀವನ ವೌಲ್ಯವನ್ನು ಮಾನ್ಯಮಾಡುತ್ತಾ ವೈಚಾರಿಕವಾಗಿ, ತಾಂತ್ರಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ವಿಸ್ತೃತಗೊಂಡಿರುವುದೇ ಆಗಿರುತ್ತದೆ.

ಈ ಎಲ್ಲಾ ವಿಷಯಗಳನ್ನು, ಗುಣ ಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ಹಿನ್ನೆಲೆಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹ ಪ್ರಯತ್ನಗಳನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕಾಗಿದೆ. ಇಲ್ಲದೇ ಹೋದರೆ, ಅವರವರ ಕೊರೆತೊರೆಗಳನ್ನೇ ಮುಖ್ಯವಾಹಿನಿ ಎಂದುಕೊಂಡು ಕೂಪಮಂಡೂಕಗಳಾಗಿ ಉಳಿದುಕೊಂಡು ಯಾವುದೇ ನವೀನ ವಿಚಾರಗಳನ್ನು, ಅನ್ಯ ವಿಷಯಗಳನ್ನು ದೂಷಿಸಿಕೊಂಡು ಮತ್ತು ಖಂಡಿಸಿಕೊಂಡಿರುವುದರಲ್ಲಿಯೇ ತಮ್ಮ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ವ್ಯರ್ಥಗೊಳಿಸಿಕೊಳ್ಳುತ್ತಾರೆ.

ಈ ಮೇಲೆ ತಿಳಿಸಿದ ಪ್ರಧಾನಧಾರೆಯ ಅಂಶಗಳನ್ನು ಮಕ್ಕಳಿಗೆ ತರುವುದು ಪೋಷಕರಿಗೆ ಮತ್ತು ಶಿಕ್ಷಕರಿಗೆ ಕಷ್ಟ ಅಥವಾ ಅಸಾಧ್ಯವೇ ಎನ್ನಿಸುವಂತೆ ಏಕಾಗಿದೆ ಅಂದರೆ, ಅವರೇ ಪೂರ್ವಾಗ್ರಹಗಳಿಂದ ಪೀಡಿತರಾಗಿರುವುದು ಮತ್ತು ತಮ್ಮ ಒಲವು, ನಿಲುವುಗಳೇ ಶ್ರೇಷ್ಠವೆಂದೂ, ಅಂತಿಮವೆಂದೂ ಭ್ರಮಿಸಿರುವುದು.

ಈ ಕಾರಣದಿಂದಾಗಿಯೇ ಶಿಕ್ಷಕರು ಮತ್ತು ಪೋಷಕರು ತಾವು ವ್ಯಕ್ತಿಗತವಾಗಿ ಒಪ್ಪದೇ ಇರುವಂತಹ ವಿಷಯಗಳನ್ನೂ ಮಕ್ಕಳ ಮುಂದೆ ಪ್ರಸ್ತಾಪಿಸುವಾಗ ಅವುಗಳನ್ನು ಪ್ರಶ್ನೆಗಳನ್ನಾಗಿ ಪ್ರಸ್ತುತಪಡಿಸಬೇಕೇ ಹೊರತು, ತಮ್ಮ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಅವರಿಗೆ ಕಂಠಪಾಠ ಮಾಡಿಸಬಾರದು. ತಮ್ಮ ದೃಷ್ಟಿಯ ಕನ್ನಡಕಗಳನ್ನು ಅವರ ಕಣ್ಣುಗಳಿಗೆ ತೊಡಿಸಬಾರದು. ಏಕೆಂದರೆ ಅವರ ದೃಷ್ಟಿ ಸಾಮರ್ಥ್ಯ ನಮ್ಮದ್ದಕ್ಕಿಂತ ಮಿಗಿಲಾಗಿದ್ದಿರಬಹುದು. ನಮಗೆ ನೋಡಲು ಸಾಧ್ಯವಾಗದ್ದು ಅವರಿಗೆ ನೋಡಲು ಸಾಧ್ಯವಾಗಬಹುದು.

ನಮ್ಮ, ನಮ್ಮದು ಎಂದುಕೊಳ್ಳುವ ಯಾವುದೇ ಧಾರೆಯ ಸಿದ್ಧಾಂತಗಳಾದರೂ ಆರೋಗ್ಯಕರ ಸಮಾಜಕ್ಕೆ, ಪೀಳಿಗೆಗಳು ಆರೋಗ್ಯಕರವಾಗಿ ಬದುಕುವುದಕ್ಕೆ ಮುಖ್ಯ. ಆರೋಗ್ಯಕರವಾದ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕು ಅವರದ್ದು. ಸಮಗ್ರ ಆರೋಗ್ಯವನ್ನು ಅವರಿಗೆ ಒದಗಿಸುವುದು ನಮ್ಮ ಕರ್ತವ್ಯ. ಅವರಿಗೆ ಉಸಿರುಗಟ್ಟಿಸದೇ, ಇಕ್ಕಟ್ಟಿನ ಕೊರಕಲುಗಳಲ್ಲಿ ಇರುಕಿಸದಂತೆ ಮಾಡುವುದಷ್ಟೇ ನಮಗೆ ಮುಖ್ಯ ಎಂದು ಅರಿವಾದರೆ ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯ.

ಒಂದು ಮಾತು ನೆನಪಿನಲ್ಲಿಡೋಣ. ಇಡೀ ಜಗತ್ತಿನ ಆಗುಹೋಗು ಗಳನ್ನು ಮತ್ತು ಎಲ್ಲಾ ಬಗೆಯ ವಿದ್ಯಮಾನಗಳನ್ನು ವಿಶ್ಲೇಷಿಸುವಾಗ ಮತ್ತು ಚರ್ಚಿಸುವಾಗ ಮಕ್ಕಳನ್ನು ಮತ್ತು ಅವರ ಮುಂಬಾಳನ್ನು ಮುಂದಿಟ್ಟುಕೊಂಡರೆ ಅನಗತ್ಯವಾದಂತಹ ಆವೇಶ ಮತ್ತು ಆಟಾಟೋಪಗಳನ್ನು ಹತೋಟಿಗೆ ತರಬಹುದೆಂದು ನನ್ನ ಖಚಿತ ಅಭಿಪ್ರಾಯ. ಏಕೆಂದರೆ ಇಡೀ ಜಗತ್ತು ಶಿಶುಪ್ರಧಾನದ ಸಮಾಜದ ಅಗತ್ಯವನ್ನು ಗುರುತಿಸುವವರೆಗೂ ಯಾವ ಕ್ಷೋಭೆಗಳಿಗೂ ಅಂತ್ಯವಿಲ್ಲ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News