ಕರ್ನಾಟಕದ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು

Update: 2017-11-11 18:13 GMT

ಶ್ರೀಯುತ ರವಿಕುಮಾರ್ ಬಾಗಿ ಅವರ ಸಂಶೋಧನಾ ಪ್ರಬಂಧ ಕರ್ನಾಟಕದ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು ಇತ್ತೀಚಿಗೆ ಪ್ರಕಟಗೊಂಡಿದೆ, 1960-70ರ ದಶಕದ ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳೇ ಅಧ್ಯಯನ ವಿಷಯವಾಗಿದ್ದು ಈ ಸಂದರ್ಭದಲ್ಲಿ ನಡೆದಂತಹ ಸಾಂಸ್ಕೃತಿಕ ಜಾಥಾಗಳು ಮತ್ತು ಸಾಮಾಜಿಕ ಚಳವಳಿಗಳು ಅಧ್ಯಯನಕ್ಕೊಳಪಟ್ಟಿವೆ. ಕರ್ನಾಟಕದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಲನಶೀಲತೆಯನ್ನು ಗುರುತಿಸುವ ಮುಖಾಂತರ ಸಮಾಜದಲ್ಲಿ ಚಳವಳಿ ಮತ್ತು ಜಾಥಾಗಳು ರೂಪುಗೊಂಡ ಹಿನ್ನೆಲೆ, ಸಮಾಜಕ್ಕೆ ಅವುಗಳು ಸ್ಪಂದಿಸಿದ ವಿಧಾನ, ಅದರ ಪರಿಣಾಮ, ಉಂಟಾದ ಬದಲಾವಣೆಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.

ಚಳವಳಿಗಳು ಮತ್ತು ಜಾಥಾಗಳ ಹಿನ್ನೆಲೆಯಲ್ಲಿ ಕರ್ನಾಟಕದ ಸಾಮಾಜಿಕ ಇತಿಹಾಸವನ್ನು ವರ್ತಮಾನದ ತಲ್ಲಣಗಳೊಂದಿಗೆ ಯೋಚಿಸುವಂತೆ ಮಾಡುತ್ತದೆ, ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳು ಕಳೆದ ಐದು ದಶಕಗಳಿಂದ ಎದುರಿಸುತ್ತಿರುವ ರಾಜಕೀಯ, ಸಾಂಸ್ಕೃತಿಕ ಆಕ್ರಮಣಗಳನ್ನು ನಿಚ್ಚಳವಾಗಿ ಗುರುತಿಸಿದೆ ಹಾಗೂ ಅದರ ಪರಿಣಾಮ ಮತ್ತು ಅವುಗಳ ಕಾರ್ಯ ವಿಧಾನವನ್ನು ತಿಳಿಸುವುದರ ಜೊತೆಗೆ ಆ ಶಕ್ತಿಗಳ ಯೋಚನೆಯ ವಿರುದ್ಧವಾಗಿ ರೂಪಗೊಳ್ಳುವ ಸಂಘಟಣೆಗಳು ಯಾವ ರೀತಿ ಬೆಳೆಯುತ್ತಾ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತದೆ ಎಂಬುದನ್ನು ತಿಳಿಸುತ್ತದೆ.

ಈ ನಿಟ್ಟಿನಲ್ಲಿ ಬಲಪಂಥೀಯ ಹುನ್ನಾರಗಳ ವಿರುದ್ಧ ಸಮುದಾಯ ಸಾಂಸ್ಕೃತಿಕ ಸಂಘಟಣೆ, ದಲಿತ ಚಳವಳಿ, ರೈತ ಚಳವಳಿ, ಕೋಮು ವಾದಿ ವಿರೋಧಿ ಚಳವಳಿಗಳು ಕಾರ್ಯನಿರ್ವಹಿಸಿದ ವಿಧಾನ ಬಹಳ ಮಹತ್ವದ್ದು ಎನಿಸುತ್ತದೆ, ಈ ಚಳವಳಿಗಳ ತಾತ್ವಿಕ ಹಿನ್ನೆಲೆ ಜನಪರವಾದದ್ದು ಮತ್ತು ಶೋಷಕರ ವಿರುದ್ಧವಾದದ್ದು, ಈ ಅಧ್ಯಯನದಲ್ಲಿ ದಲಿತ ಬಂಡಾಯ ತಾತ್ವಿಕತೆಯ ಮೂಲಕ ವಿಸ್ತಾರ ವಾದ ಚರ್ಚೆಯನ್ನು ಸಮುದಾಯ ಮತ್ತು ದಲಿತ ಚಳವಳಿಗಳು ಮಾಡಿದರೆ ಇದನ್ನೂ ಒಳಗೊಂಡಂತೆ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ನೋಟ ಕ್ರಮಗಳು ಒಟ್ಟಾರೆ ಪ್ರಬಂಧದ ಚೌಕಟ್ಟನ್ನು ರೂಪಿಸಿವೆ.

ಇಲ್ಲಿ ಗಮನ ಸೆಳೆಯುವ ಮತ್ತೊಂದು ಅಂಶ ಜಾಥಾಗಳು. ಪ್ರತಿಭಟನೆಯ ಮುಖಾಂತರ ಬದಲಾವಣೆ ಬಯಸುವ ಜಾಥಾಗಳು ಸಾಂಸ್ಕೃತಿಕ ಅನನ್ಯತೆಗಳನ್ನೂ ಕಾಪಾಡುವ ಉದ್ದೇಶ ಹೊಂದಿರುವುದು ಗಮನಿಸಬೇಕಾದ ವಿಷಯ, ಜನಪದರ ಮೌಕಿಕ ಪರಂಪರೆಯ ಮಹಾಕಾವ್ಯಗಳ ಉದಾಹರಣೆಗಳು ಇದನ್ನು ಮತ್ತಷ್ಟು ಸೂಕ್ಷ್ಮವಾಗಿ ಆಲೋಚಿಸುವಂತೆ ಮಾಡುತ್ತವೆ, ಅನೇಕರ ಜನಪದ ಕಥಾ ನಾಯಕರ ನಡೆದಾಟ ಸಾಂಸ್ಕೃತಿಕ ಜಾಥಾಗಳ ರೂಪದ್ದು ಎಂಬುದು ಆ ಮೂಲಕ ಜಾಥಾಗಳ ಅಂದಿನ ಮತ್ತು ಇಂದಿನ ಎದುರಾಳಿಗಳನ್ನು ಅರ್ಥೈಸಿಕೊಳ್ಳುವುದು ಬಹಳ ಮುಖ್ಯ ಎನಿಸುತ್ತದೆ.

ಎಲ್ಲಾ ಚಳವಳಿಗಳೂ ಉತ್ತುಂಗವನ್ನು ತಲುಪಿ ನಶಿಸಿದ ಕಾಲ. ಇದೆಂದೂ ಹಿರಿಯರು ಪದೇ ಪದೇ ಹೇಳುತ್ತಿರುವ ಈ ಹೊತ್ತಿನಲ್ಲಿ ಚಳವಳಿಯ ಗುರಿ, ಉದ್ದೇಶಗಳು ಮತ್ತಷ್ಟು ಸ್ಪಷ್ಟಗೊಳ್ಳುವ ಮೂಲಕ ಸಮಾಜದ ವಿವಿಧ ಸೈದ್ಧಾಂತಿಕ ನೆಲೆಗಳಲ್ಲಿ ಹಂಚಿ ಒಂದೇ ಆಶಯದ ಕೆಳಗೆ ಕೆಲಸ ಮಾಡುತ್ತಿರುವ ಬೃಹತ್ ವರ್ಗ ಕೂಡಿಕೊಳ್ಳುವ ಅಗತ್ಯವೂ ನಮ್ಮೆದುರಿಗಿರುವುದನ್ನು ತಿಳಿಸುತ್ತದೆ. ಚಳವಳಿಯ ಸಾಮುದಾಯಿಕ ಮಧ್ಯ ಪ್ರವೇಶ ಹಾಗೂ ನಿರ್ಣಯಗಳನ್ನು ರೂಪಿಸುವ ಮಟ್ಟದಲ್ಲಿಲ್ಲದಿರುವುದು ಚಳವಳಿಯ ಶಕ್ತಿ ಕುಂದಿರುವುದಕ್ಕೆ ನಿದರ್ಶನ ಎನ್ನುವ ಮಾತಿಗೂ ಅವಲೋಕನ ನಡೆಯಬೇಕಿದೆ.

ಸಾಹಿತ್ಯ ಮತ್ತು ಸಾಮುದಾಯಿಕ ಬದ್ಧತೆಯ ಕುರಿತು ಹೇಳುವಾಗ ‘‘ಸಾಹಿತ್ಯ ಎನ್ನುವುದು ವೈಯಕ್ತಿಕತೆಯ ವೈಭವೀಕರಣದಲ್ಲಿ ಮುಳುಗದೆ ತನ್ನೊಳಗೆ ಹಾಗೂ ತನ್ನ ಬೆನ್ನ ಹಿಂದೆ ಸದಾ ಜಾಗೃತವಾಗಬೇಕಾಗುತ್ತದೆ. ಹಾಗೆಯೇ ಸಮಾಜದಲ್ಲಿ ಶತಮಾನಗಳಿಂದ ಮರೆತ ಜನಗಳ ದನಿಯಾಗಬೇಕಾಗುತ್ತದೆ’’ ಎನ್ನುವುದರ ಮೂಲಕ ಸಾಹಿತ್ಯದ ಬದ್ಧ್ದತೆ ಎಂದರೆ ಅದು ಸಮಾಜ ಮುಖಿ ಚಿಂತನೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಈ ಎಲ್ಲಾ ಚಳವಳಿಗಳು ಪ್ರಾರಂಭದಲ್ಲಿ ಮುಖಾಮುಖಿಯಾದ ಸಮಸ್ಯೆಗಳು ಅಥವಾ ಸನ್ನಿವೇಶಗಳ ಇಂದಿನ ರೂಪ ಗಮನಿಸಿದರೆ ಅವು ಮತ್ತಷ್ಟು ಪರಿಣಾಮಕಾರಿ ಹಾಗೂ ಕ್ರಿಯಾಶೀಲವಾಗಿರುವುದನ್ನು ಗಮನಿಸಬಹುದು. ವಿಶ್ವವಿದ್ಯಾನಿಲಯಗಳಲ್ಲಿ, ವೈಜ್ಞಾನಿಕ ಕ್ಷೇತ್ರಗಳಲ್ಲಿ, ಸಾಹಿತ್ಯ ಕ್ಷೇತ್ರಗಳಲ್ಲಿ, ಯಾವ ರೀತಿಯ ಧ್ರುವೀಕರಣಗಳು ಸಂಭವಿಸುತ್ತಿವೆ ಅದರ ಹಿಂದೆ ಇರಬಹುದಾದ ಹುನ್ನಾರಗಳನ್ನು ಜನ ಪರ್ಯಾಯಗಳನ್ನು ಯೋಚಿಸುತ್ತಿರುವ ಇದೇ ಹೊತ್ತಿನಲ್ಲಿ ತಿಳಿಯಬೇಕಾದ ಆವಶ್ಯಕತೆ ಇದೆ ಅನ್ನಿಸುತ್ತದೆ. ಏಕತೆ, ಹಿಂದುತ್ವ, ರಾಷ್ಟ್ರೀಯತೆ ಇವುಗಳ ಮುಖಾಂತರವೇ ನಿರ್ಮಾಣ ಗೊಂಡಿರುವ ರಾಜಕೀಯ ಪ್ರಭುತ್ವ ಎಷ್ಟರ ಮಟ್ಟಿಗೆ ಭಾರತೀಯ ಅಸಮಾನತೆಗಳನ್ನು ತೊಡೆಯಬಲ್ಲದು ಎಂಬ ದೊಡ್ಡ ಪ್ರಶ್ನೆಯನ್ನು ಪುಸ್ತಕದ ಮೂಲಕ ಲೇಖಕರು ಕೇಳುತ್ತಾರೆ.

ಈ ಅಧ್ಯಯನ ಮುಖ್ಯವಾಗಿ ‘‘ಚಳವಳಿ ಹಾಗೂ ಜಾಥಾಗಳನ್ನು ಅಭ್ಯಸಿಸಿರುವ’’ ಅದರ ಭಾಗವಾಗಿರುವ ಲೇಖಕರ ಒಟ್ಟಾರೆ ಗ್ರಹಿಕೆಯನ್ನು ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಮುಖಾಂತರವೇ ಚರ್ಚೆಗೆ ಒಳಪಡಿಸಿರುವುದು ಗಮನಾರ್ಹ ಸಂಗತಿ. ಚಳವಳಿ ಮತ್ತು ಜಾಥಾಗಳ ಇತಿಹಾಸದ ಜೊತೆಗೆ ಅವುಗಳ ಸೈದ್ಧಾಂತಿಕ, ತಾತ್ವಿಕ ವಿಚಾರಗಳು ಜನರಲ್ಲಿ ಬೆಳೆಸಿದಂತಹ ಹೊಸ ಪ್ರಜ್ಞೆಯ ಬಹುಮುಖ್ಯವಾದಂತಹ ಫಲಿತಾಂಶ ದಲಿತ ಚಳವಳಿ ದಲಿತರಲ್ಲಿ ಹುಟ್ಟಿಸಿದಂತಹ ಸ್ವಾಭಿಮಾನ ಮತ್ತು ಸಾಮಾಜಿಕ ಧೈರ್ಯ ಹಾಗೆಯೇ ರೈತ ಚಳವಳಿ ರೈತರಲ್ಲಿ ಹುಟ್ಟಿಸಿದ ಪ್ರಜ್ಞೆ ಮತ್ತು ಧೈರ್ಯ ಇವು ಆಧುನಿಕ ಶಿಕ್ಷಣದ ಸಾಕ್ಷರತೆಗಿಂತಲೂ ನೂರು ಪಟ್ಟು ಪರಿಣಾಮಕಾರಿಯಾದುದು ಅಂದರೆ ತಪ್ಪಲ್ಲ.

ಲೇಖಕರಿಗೆ ಭಾಷೆಯ ಬಳಕೆಯಲ್ಲಿ ಮತ್ತಷ್ಟು ಪರಿಣಾಮಕಾರಿ ಯಾಗುವ ಅನೇಕ ಅವಕಾಶಗಳು ಇತ್ತು ಅನಿಸುತ್ತದೆ. ಆದಾಗ್ಯೂ ಸರಳ ನುಡಿಯ ಮೂಲಕ ಓದಿಸಿಕೊಳ್ಳುವ ಕಥಾನಕ ಮಾದರಿ ಅದ್ಭುತವಾಗಿದೆ, ಇನ್ನುಳಿದಂತೆ ಕೆಲವು ಕಣ್ತಪ್ಪುಗಳ ಹೊರತಾಗಿ ಇದೊಂದು ಉತ್ತಮ ಸಂಶೋಧನಾ ಕೃತಿ.

ಹೊತ್ತಿಗೆ ಓದುವ ಹೊತ್ತು

ಒಂದು ಪ್ರಬಲ ವ್ಯವಸ್ಥೆಯ ವಿರುದ್ಧ್ದ ಜನಪರ್ಯಾಯಗಳನ್ನು ಕಟ್ಟುವ ಕಾಲವಿದು, ಜೀವವಿರೋಧಿ ಪ್ರಬಲ ವ್ಯವಸ್ಥೆಯನ್ನು ಎದುರಿಸಲು ಅನೇಕ ಸಣ್ಣ ಸಣ್ಣ ಮಾರ್ಗಗಳಲ್ಲಿ ಪರ್ಯಾಯಗಳು ಮುಂದುವರಿಯುತ್ತಿರುತ್ತವೆ. ಒಂದು ಇಡೀ ಹಾವನ್ನು ಇರುವೆಗಳ ಸಮೂಹ ತಿನ್ನುವಂತೆ, ಚಿಕ್ಕ ಚಿಕ್ಕ ಪರ್ಯಾಯಗಳು ತೀವ್ರವಾಗಿ ವಿರೋಧಿಸುತ್ತಲೇ ಆ ಪ್ರಬಲ ವ್ಯವಸ್ಥೆಯನ್ನು ನಿರ್ನಾಮದತ್ತ ಕೊಂಡೊಯ್ಯುತ್ತವೆ. ರಾಜಕೀಯ ಅಧಿಕಾರ, ಹಣಕಾಸು, ಇತ್ಯಾದಿಗಳು ಪ್ರಬಲ ವ್ಯವಸ್ಥೆಯನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡಿದರೂ ಪರ್ಯಾಯ ವ್ಯವಸ್ಥೆ ಬೆಂಕಿಯಲ್ಲಿ ಅರಳುವ ಹೂವಾಗಿರುತ್ತದೆ ಎನ್ನುವ ಆಶಯ ಪುಸ್ತಕದ್ದು.

Writer - ಆರ್. ಗೋಪಾಲಕೃಷ್ಣ

contributor

Editor - ಆರ್. ಗೋಪಾಲಕೃಷ್ಣ

contributor

Similar News