ನ್ಯೂಝಿಲೆಂಡ್-ಪೆರು ಪಂದ್ಯ ಗೋಲುರಹಿತ ಡ್ರಾ

Update: 2017-11-11 18:22 GMT

ವೆಲ್ಲಿಂಗ್ಟನ್, ನ.11: ನ್ಯೂಝಿಲೆಂಡ್ ಹಾಗೂ ಪೆರು ನಡುವೆ ಶನಿವಾರ ವೆಲ್ಲಿಂಗ್ಟನ್ ರೀಜನಲ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ ಮೊದಲ ಪ್ಲೇ-ಆಫ್ ಪಂದ್ಯ ಗೋಲುರಹಿತ ಡ್ರಾನಲ್ಲಿ ಕೊನೆಗೊಂಡಿತು. ಇದರಿಂದಾಗಿ 36 ವರ್ಷಗಳ ಬಳಿಕ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಪೆರು ತಂಡದ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ.

ದಕ್ಷಿಣ ಅಮೆರಿಕದ 10ನೆ ರ್ಯಾಂಕಿನ ಪೆರು ತಂಡ 122ನೆ ರ್ಯಾಂಕಿನ ನ್ಯೂಝಿಲೆಂಡ್ ವಿರುದ್ಧ ಎರಡು ಬಾರಿ ಗೋಲು ಬಾರಿಸುವ ಅವಕಾಶ ಲಭಿಸಿದ್ದರೂ ಅದನ್ನು ಬಳಸಿಕೊಳ್ಳಲು ವಿಫಲವಾಯಿತು. ಪೆರು ನಾಯಕ ಪಾಲೊ ಗುರೆರೊ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಕಾರಣ ಅಮಾನತುಗೊಂಡಿದ್ದು, ಅವರ ಅನುಪಸ್ಥಿತಿಯು ತಂಡದ ಪ್ರದರ್ಶನದ ಮೇಲೆ ಪರಿಣಾಮಬೀರಿತು.

ನ್ಯೂಝಿಲೆಂಡ್ ತಂಡ ಆತ್ಮವಿಶ್ವಾಸದಿಂದ ಆಡಿತು. ಪೆರು ಆರನೆ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ಪಡೆದಿತ್ತು. ಆದರೆ ಕಿವೀಸ್ ಗೋಲ್‌ಕೀಪರ್ ಸ್ಟೆಫನ್ ಮರಿನೊವಿಕ್ ಪೆರುಗೆ ಗೋಲು ನಿರಾಕರಿಸಿದರು.

ಪೆರು ತಂಡ 1982ರ ಬಳಿಕ ಮೊದಲ ಬಾರಿ ವಿಶ್ವಕಪ್ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ. ಈ ಹಿಂದೆ 1930,1970,1978 ಹಾಗೂ 1982ರಲ್ಲಿ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಪೆರು ತಂಡ 1970ರಲ್ಲಿ ಕ್ವಾರ್ಟರ್‌ಫೈನಲ್ ತಲುಪಿತ್ತು. ನ್ಯೂಝಿಲೆಂಡ್ 1982 ಹಾಗೂ 2010ರಲ್ಲಿ ವಿಶ್ವಕಪ್‌ನಲ್ಲಿ ಆಡಿತ್ತು. ಉಭಯ ತಂಡಗಳು ನ.15 ರಂದು ಲಿಮಾದಲ್ಲಿ ಎರಡನೆ ಪ್ಲೇ-ಆಫ್ ಪಂದ್ಯವನ್ನು ಆಡಲಿವೆ. ಪ್ಲೇ-ಆಫ್‌ನಲ್ಲಿ ಜಯ ಸಾಧಿಸುವ ತಂಡ ರಶ್ಯದಲ್ಲಿ ಮುಂದಿನ ವರ್ಷ ನಡೆಯುವ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News