ಹರೀರಿ ಅಪಹರಣ: ಸ್ಪಷ್ಟೀಕರಣ ನೀಡುವಂತೆ ಸೌದಿಯನ್ನು ಕೋರಿದ ಲೆಬನಾನ್ ಅಧ್ಯಕ್ಷ

Update: 2017-11-12 14:14 GMT

ಬೆರೂತ್, ನ. 12: ಲೆಬನಾನ್ ಪ್ರಧಾನಿ ಸಆದ್ ಅಲ್-ಹರೀರಿ ಯಾಕೆ ತನ್ನ ಸ್ವದೇಶಕ್ಕೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಲೆಬನಾನ್ ಅಧ್ಯಕ್ಷ ಮೈಕಲ್ ಅವುನ್ ಶನಿವಾರ ಸೌದಿ ಅರೇಬಿಯವನ್ನು ಕೋರಿದ್ದಾರೆ.

ಲೆಬನಾನ್ ಪ್ರಧಾನಿ ಸೌದಿ ಅರೇಬಿಯ ಪ್ರವಾಸದಲ್ಲಿದ್ದ ವೇಳೆ ರಾಜೀನಾಮೆ ಘೋಷಿಸಿ ಅಚ್ಚರಿ ಹುಟ್ಟಿಸಿದ ಒಂದು ವಾರದ ಬಳಿಕ ಲೆಬನಾನ್ ಅಧ್ಯಕ್ಷರು ಈ ಕ್ರಮ ತೆಗೆದುಕೊಂಡಿದ್ದಾರೆ.

ಹರೀರಿಯನ್ನು ‘ಅಪಹರಿಸಲಾಗಿದೆ’ ಹಾಗೂ ಅವರಿಗೆ ರಾಜತಾಂತ್ರಿಕ ರಕ್ಷಣೆ ಕೊಡಬೇಕು ಎಂಬುದಾಗಿ ಅಧ್ಯಕ್ಷರು ವಿದೇಶಿ ರಾಯಭಾರಿಗಳಿಗೆ ಹೇಳಿದ್ದಾರೆ ಎಂದು ಲೆಬನಾನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

 ಹರೀರಿಯ ಅನಿರೀಕ್ಷಿತ ರಾಜೀನಾಮೆಯು ಸುನ್ನಿ ಸೌದಿ ಅರೇಬಿಯ ಮತ್ತು ಶಿಯಾ ಇರಾನ್ ನಡುವಿನ ಮೇಲಾಟವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸೌದಿ ಮತ್ತು ಇರಾನ್ ನಡುವಿನ ಶೀತಲ ಸಮರವು ಸಿರಿಯ, ಇರಾಕ್, ಯಮನ್ ಮತ್ತು ಬಹ್ರೈನ್ ದೇಶಗಳಲ್ಲಿ ಅರಾಜಕತೆಯನ್ನು ಸೃಷ್ಟಿಸಿವೆ.

‘‘ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿಲ್ಲದ ಪರಿಸ್ಥಿತಿಯಲ್ಲಿ ಇರುವುದನ್ನು ಲೆಬನಾನ್ ಒಪ್ಪುವುದಿಲ್ಲ’’ ಎಂದು ಲೆಬನಾನ್ ಅಧ್ಯಕ್ಷರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಸೌದಿ ಅರೇಬಿಯದ ಟಿವಿಯೊಂದರಲ್ಲಿ ಕಾಣಿಸಿಕೊಂಡು ರಾಜೀನಾಮೆ ಘೋಷಿಸಿದ ಬಳಿಕ, ಹರೀರಿಯ ಸ್ಥಿತಿಗತಿಯ ಬಗ್ಗೆ ಸಂಶಯಗಳಿರುವುದರಿಂದ ಅವರು ನೀಡುವ ಯಾವುದೇ ಹೇಳಿಕೆಗಳು ಅಥವಾ ಅವರು ತೆಗೆದುಕೊಳ್ಳುವ ಯಾವುದೇ ಕ್ರಮಗಳು ‘ನಿಜವನ್ನು ಹೇಳುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 3ರಂದು ಸೌದಿ ಅರೇಬಿಯಕ್ಕೆ ಹೋಗಿರುವ ಹರೀರಿಯನ್ನು ಆ ದೇಶ ಬಂಧಿಸಿಟ್ಟಿದೆ ಎಂಬುದಾಗಿ ಲೆಬನಾನ್ ಸರಕಾರ ಭಾವಿಸಿದೆ ಎಂದು ಸರಕಾರದ ಇಬ್ಬರು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News