ಏಕ ರೂಪದ ಸಂಸ್ಕೃತಿ, ಆಹಾರ ಪದ್ಧತಿಗೆ ಜೆಪಿ ಉತ್ತರ ಸ್ಪಷ್ಟ: ಡಾ.ವಸುಂಧರಾ ಭೂಪತಿ
ಬೆಂಗಳೂರು, ನ.12: ಆಹಾರ, ಭಾಷೆ ಹಾಗೂ ಸಂಸ್ಕೃತಿಯ ಮೇಲೆ ನಿರ್ಬಂಧ ಹಾಗೂ ನಿಷೇಧಗಳನ್ನು ಹೇರುತ್ತಿರುವಾಗಲೇ ಲೋಕನಾಯಕ ಜಯಪ್ರಕಾಶ ನಾರಾಯಣ ಅವರಿಗೆ ಸಂಬಂಧಿಸಿದ ಕೃತಿ ಬಿಡುಗಡೆಯಾಗಿ ರಾಜಕೀಯ ನಾಯಕರು ಹೇಗೆ ಇರಬೇಕೆಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ರವಾನಿಸಲಿದೆ ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ.
ರವಿವಾರ ಸ್ವಾತಂತ್ರ ಉದ್ಯಾನವನದಲ್ಲಿ ಭಾರತಯಾತ್ರಾ ಕೇಂದ್ರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಆಯೋಜಿಸಿದ್ದ ಬಿ.ಎಂ.ಚಂದ್ರಶೇಖರಯ್ಯ ಬರೆದಿರುವ ಲೋಕನಾಯಕ ಜಯಪ್ರಕಾಶ ನಾರಾಯಣ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಚಿಂತಕಿ ಗೌರಿ ಲಂಕೇಶ್, ಸಾಹಿತಿ ಎಂ.ಎಂ.ಕಲಬುರಗಿ ಅವರ ಹತ್ಯೆಗಳು ನಡೆದು ಹಲವು ತಿಂಗಳುಗಳು ಕಳೆದರೂ ರಾಜ್ಯ ಸರಕಾರ ಹಂತಕರನ್ನು ಇನ್ನೂ ಪತ್ತೆ ಹಚ್ಚಿಲ್ಲ. ಇದರ ನಡುವೆಯೇ ಏಕ ರೂಪದ ಸಂಸ್ಕೃತಿ, ಆಹಾರ ಪದ್ಧತಿಯನ್ನು ಹೇರಲಾಗುತ್ತಿದೆ. ಈ ಎಲ್ಲವನ್ನು ತಡೆಗಟ್ಟಲು ಹಾಗೂ ರಾಜಕೀಯ ನಾಯಕರು ಹೇಗೆ ಇರಬೇಕೆಂಬುದರ ಬಗ್ಗೆ ಸ್ಪಷ್ಟ ಪಡಿಸಲು ಜೆಪಿ ಅವರಿಗೆ ಸಂಬಂಧಿಸಿದ ಕೃತಿ ಬಿಡುಗಡೆಯಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.
ಹಿರಿಯ ಕವಿ ಪ್ರೊ.ಎಲ್.ಎನ್.ಮುಕುಂದರಾಜ್ ಮಾತನಾಡಿ, ಜೆಪಿ ಅವರಿಗೆ ಪ್ರಧಾನಿ, ರಾಷ್ಟ್ರಪತಿಯಾಗುವ ಅವಕಾಶಗಳು ಬಂದರೂ ನಿರಾಕರಿಸಿದರು. ಆದರೆ, ಅವರು ಮಾಜಿ ಅನ್ನಿಸಿಕೊಳ್ಳದೆ ಲೋಕನಾಯಕಾಗಿಯೆ ಉಳಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.