ಪತ್ರಕರ್ತ ಬಿ.ಎಸ್ ಕುರ್ಕಾಲ್

Update: 2017-11-12 17:35 GMT

ಮುಂಬೈ, ನ.12: ಹಿರಿಯ ಶಿಕ್ಷಕ-ಪತ್ರಕರ್ತ-ಲಕ್ಷ್ಮೀ ಛಾಯಾ ವಿಚಾರ ವೇದಿಕೆ ಮುಂಬೈ ಸಂಚಾಲಕ, ಹಿರಿಯ ಹಾಡುಕವಿ ಎಂದೇ ಪ್ರಸಿದ್ಧರಾಗಿರುವ ಭುಜಂಗ ಶೆಟ್ಟಿ ಕುರ್ಕಾಲ್ (85) ಬೋರಿವಿಲಿ ಪೂರ್ವದ ಎಂ.ಜಿ ರೋಡ್,  ಧರಂ ಪ್ಯಾಲೇಸ್ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ, ಸಾಹಿತ್ಯಾಭಿಮಾನಿ, ಶಿಷ್ಯವರ್ಗವನ್ನು ಅಗಲಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಬಿಲ್ಲವರ ಅಸೋಸಿಯೇಶನ್ ಮುಂಬೈ ಮುಖವಾಣಿ ಅಕ್ಷಯ ಮಾಸಿಕ ಕೊಡಮಾಡಿದ ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ ‘ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2017’ಯೊಂದಿಗೆ ಗೌರವಿಸಲ್ಪಟ್ಟಿದ್ದರು.

 1932ರ ಜುಲೈ.17ರಂದು ಕುರ್ಕಾಲು ಗಣಪಯ್ಯ ಶೆಟ್ಟಿ ಮತ್ತು ಬೋಳ ಲಕ್ಷ್ಮಿ ಶೆಡ್ತಿ ದಂಪತಿಯ ಸುಪುತ್ರರಾಗಿ ಕುರ್ಕಾಲು ಅಲ್ಲಿನ  ಕುಂಜಾರುಗಿರಿಯಲ್ಲಿ ಜನಿಸಿದ್ದರು. ತಂದೆ ಅವರ ಗಿರಿಜಾ ಶಾಲೆಯಲ್ಲಿ ಅಕ್ಷರಾಭ್ಯಾಸ ಆರಂಭಿಸಿ ಮುಂದೆ ಇನ್ನಂಜೆಯ ಹೈಸ್ಕೂಲಿನಲ್ಲಿ ಕಲಿಕೆ ಪೂರೈಸಿ ತಮ್ಮದೇ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದ್ದರು.

1953ರಲ್ಲಿ ಮಂಗಳೂರುನ ಶಿಕ್ಷಕ ತರಬೇತಿ ಶಾಲೆಯಲ್ಲಿ ತರಬೇತುಗೊಂಡು ಮತ್ತೆ ಶಿಕ್ಷಕರಾಗಿ ಮುಂದುವರೆದರು. 1966ರಲ್ಲಿ ಮುಂಬೈ ಸೇರಿ ವಡಾಲ ಅಲ್ಲಿನ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ (ಎನ್‌ಕೆಇಎಸ್‌ಯಲ್ಲಿ ಹಗಲು ಶಿಕ್ಷಕರಾಗಿ, ರಾತ್ರಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿ ಎರಡೂ ಶಾಲೆಯಲ್ಲಿ ಸುಮಾರು ಎರಡೂವರೆ ದಶಕಗಳ ಕಾಲ ದೀರ್ಘಾವಧಿಯ ಶಿಕ್ಷಕರಾಗಿ ಸೇವೆಗೈದರು. ಬಿಲ್ಲವರ ಅಸೋಸಿಯೇಶನ್ ಆಕಾಶವಾಣಿ ಯಲ್ಲಿ ಸಾದರಪಡಿಸುತ್ತಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿ ಓರ್ವ ಅರ್ಥಧಾರಿಯಾಗಿ ಮೂರು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿ ಕುರ್ಕಾಲರು ಉತ್ತಮ ರಂಗಕರ್ಮಿ ಆಗಿದ್ದು, ಹಲವಾರು ನಾಟಕಗಳನ್ನು ನಿರ್ಮಿಸಿ ನಿರ್ದೇಶಿಸಿ ಅಭಿನಯಿಸಿ ಬಾರೀ ಜನಮನ್ನಣೆಗೆ ಪಾತ್ರರಾಗಿದ್ದರು.

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ‘ಪತ್ರಪುಷ್ಪ’ಮಾಸಿಕದ ಸಂಪಾದಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದ ಇವರು ಕಾವ್ಯ, ಚುಟುಕು, ಶಿಶುಗೀತೆ, ಅಂಕಣಬರಹ, ನಾಟಕ, ವ್ಯಕ್ತಿಚಿತ್ರ, ರಸಚಿತ್ರ, ಚಿತ್ರಕಥಾ, ಮುಂತಾದ ಪ್ರಕಾರಗಳಲ್ಲಿ ಸುಮಾರು 26ಕ್ಕೂ ಮಿಕ್ಕಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಸುಮಾರು 10ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ.

ಕುರ್ಕಾಲರ ಗೌರವ ಗ್ರಂಥ ನಿಧಿಯಿಂದ ಈವರೆಗೆ ವಿವಿಧ ಲೇಖಕರ 8ಕೃತಿಗಳು ಪ್ರಕಟವಾಗಿವೆ. ಇವರ ಕುರಿತು 3 ಅಭಿನಂದನಾ, ಒಂದು ಅಧ್ಯಯನ ಕೃತಿ ಪ್ರಕಟವಾಗಿವೆ. ಇನ್ನೂ ಹತ್ತಾರು ಕೃತಿಗಳು ಪ್ರಕಟಣೆಯ ಹಾದಿಯಲ್ಲಿ ಅಚ್ಚಿನ ಮನೆಯಲ್ಲಿದೆ. ಕುರ್ಕಾಲರ ಸಾಹಿತ್ಯ ಅವರ ವ್ಯಕ್ತಿತ್ವದ ಪ್ರತಿಬಿಂಬ ಎಂದರೆ ತಪ್ಪಲ್ಲ. ಇವರು ಸ್ಥಾಪಿಸಿರುವ ಲಕ್ಷ್ಮಿ  ಛಾಯಾ ವಿಚಾರ ವೇದಿಕೆಯಿಂದ ಅನೇಕ ಹಿರಿಯ ಕನ್ನಡಿಗರು ಗೌರವಿಸಲ್ಪಟ್ಟಿದ್ದಾರೆ. ಕುರ್ಕಾಲರು ತಮ್ಮ ಪತ್ನಿ ದಿ. ಜಯಂತಿ ಕುರ್ಕಾಲರ ಹೆಸರಿನಲ್ಲಿ ಕೊಡಮಾಡುವ ಸಾಹಿತ್ಯ ಪ್ರಶಸ್ತಿಗಳಿಂದ 22 ಮಂದಿ ಸಾಹಿತಿಗಳು ಸನ್ಮಾನಿಸಲ್ಪಟ್ಟಿದ್ದಾರೆ. ಕುರ್ಕಾಲ್ ಅಭಿಮಾನಿ ಬಳಗ, ನೂರಾರು ವಿದ್ಯಾರ್ಥಿಗಳು, ಅಪಾರ ಸಂಖ್ಯೆಯ ಹಿತೈಷಿಗಳು ಅವರ 77ರ ಸಂಭ್ರಮ ಆಚರಿಸಿಗಿರಿಜಾತ ಗೌರವ ಗ್ರಂಥ ಸಮರ್ಪಿಸಿ ಗೌರವಿಸಿದ್ದರು.

ಅನೇಕ ವರ್ಷಗಳಿಂದ ಚೆಂಬೂರು ಗೋವಂಡಿಯ ಸ್ವನಿವಾಸದಲ್ಲೇ ವಾಸ್ತವ್ಯವಾಗಿದ್ದರೂ ಸದ್ಯ ನಿವೃತ್ತ ಜೀವನವಾಗಿಸಿ ಬೋರಿವಿಲಿ ಪೂರ್ವದ ಶಾಂತಿವನ್‌ನ ಧರಂ ಪ್ಯಾಲೇಸ್ ನಿವಾಸದಲ್ಲಿ ಸುಪುತ್ರನ ಜೊತೆ ವಾಸವಾಗಿದ್ದರು. ಸಂಜೆ ವೇಳೆಗೆ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು ರಾತ್ರಿ (ನ.12 ) ಬೋರಿವಿಲಿಯ ರುದ್ರಭೂಮಿಯಲ್ಲಿ  ಅಂತ್ಯಕ್ರಿಯೆ  ನೆರವೇರಿಸಲಾಯಿತು.

ಸಂತಾಪ:
ಬಿ.ಎಸ್ ಕುರ್ಕಾಲ್ ನಿಧನಕ್ಕೆ ಅವರ ಪರಮಶಿಷ್ಯರಲ್ಲೋರ್ವ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯ ರಘುನಂದನ ಕಾಮತ್, ಬಿಲ್ಲವರ ಅಸೋಸಿಯೇಶನ್‌ನ ರೂವಾರಿ ಜಯ ಸಿ.ಸುವರ್ಣ, ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಹಿರಿಯ ಪತ್ರಕರ್ತ ಎಂ.ಬಿ ಕುಕ್ಯಾನ್, ಡಾ ವ್ಯಾಸರಾವ್ ನಿಂಜೂರು, ಸಾಹಿತಿ, ವಿದ್ವಾಂಸ, ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ ತುಕರಾಮ ಪೂಜಾರಿ, ನ್ಯಾ ಬಿ.ಮೊಯಿದ್ಧೀನ್ ಮುಂಡ್ಕೂರು, ಡಾ ಸುನೀತಾ ಎಂ.ಶೆಟ್ಟಿ, ಚಂದ್ರಶೇಖರ ಪಾಲೆತ್ತಾಡಿ, ನ್ಯಾವಸಂತ ಎಸ್.ಕಲಕೋಟಿ, ಡಾ ಕರುಣಾಕರ ಶೆಟ್ಟಿ ಪಣಿಯೂರು, ಸಾ.ದಯಾ, ನ್ಯಾ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಪೇತೆಮನೆ ಪ್ರಕಾಶ್ ಶೆಟ್ಟಿ, ಡಾ ಜಿ.ಡಿ ಜೋಶಿ, ಡಾ ಆಶಾಲತಾ ಸುವರ್ಣ, ಸಾ.ದಯಾ, ಕಡಂದಲೆ ಸುರೇಶ್ ಭಂಡಾರಿ, ಡಾ ವಿಶ್ವನಾಥ ಕಾರ್ನಾಡ್, ಕೆ.ಮಂಜುನಾಥಯ್ಯ, ಡಾ ಮಂಜುನಾಥ್, ಡಾ ಜಿ.ಎನ್ ಉಪಾಧ್ಯ, ಹೆಚ್.ಬಿಎಲ್ ರಾವ್, ಶಿಮುಂಜೆ ಪರಾರಿ, ಮೋಹನ್ ಮಾರ್ನಾಡ್, ರಾಮಮೋಹನ ಶೆಟ್ಟಿ ಬಳ್ಕುಂಜೆ, ಎಸ್.ಕೆ ಸುಂದರ್, ಡಾ ಈಶ್ವರ ಅಲೆವೂರು, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ಹರೀಶ್ ಹೆಜ್ಮಾಡಿ, ಪಂ ನವೀನ್‌ಚಂದ್ರ ಆರ್.ಸನೀಲ್ ಸೇರಿದಂತೆ ಅನೇಕ ಗಣ್ಯರು ಹಾಗೂ ಮಹಾನಗರದಲ್ಲಿನ ಬಹುತೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ತುಳು ಕನ್ನಡಾಭಿಮಾನಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ