ಎಂ.ಎ ಖಾದರ್ ಹಿತ್ತಿಲು
ಮಂಗಳೂರು,ನ.27: ನಗರ ಹೊರವಲಯದ ಮಲ್ಲೂರು ನಿವಾಸಿಯಾಗಿದ್ದ ಸಮಾಜ ಸೇವಕ, ಎಂ.ಎ ಖಾದರ್ ಹಿತ್ತಿಲು (75) ಅಲ್ಪಕಾಲದ ಅನಾರೋಗ್ಯಕ್ಕೆ ತುತ್ತಾಗಿ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಮೃತರು ಅಗಲಿದ್ದಾರೆ.
ಪ್ರಸಕ್ತ ಅತ್ತಾವರದಲ್ಲಿ ವಾಸವಾಗಿದ್ದ ಖಾದರ್ ಮಂಗಳೂರು ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಖಾದರ್ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಸಜ್ಜನ, ಸಹೃದಯಿ, ಉತ್ತಮ ವ್ಯಕ್ತಿತ್ವದ ಮೃದು ಸ್ವಭಾವಿಯಾಗಿದ್ದರು.
ಮಲ್ಲೂರು ದೆಮ್ಮೆಲೆಯ ಬದ್ರಿಯಾ ಜುಮಾ ಮಸೀದಿಯಲ್ಲಿ ಹಲವು ವರ್ಷಗಳ ಕಾಲ ಉಪಾಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿದ್ದರಲ್ಲದೆ ಹಲವಾರು ಸಂಘ ಸಂಸ್ಥೆಗಳ ಮುಂಚೂಣಿ ನಾಯಕರಾಗಿ ಸೇವೆ ಸಲ್ಲಿಸಿದ್ದರು.
ಖಾದರ್ ಹಿತ್ತಿಲು ಅವರ ನಿಧನಕ್ಕೆ ಮಂಗಳೂರು ತಾಪಂ ಮಾಜಿ ಸದಸ್ಯ ಎನ್.ಇ. ಮುಹಮ್ಮದ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಂ.ಡಿ.ಅಬ್ದುಲ್ ರಹಿಮಾನ್, ಎನ್.ಎ. ಸತ್ತಾರ್ ಮಲ್ಲೂರು, ಡಿಸಿಸಿ ಉಪಾಧ್ಯಕ್ಷ ಟಿ.ಎಸ್. ಅಬ್ದುಲ್ಲಾ ಸಂತಾಪ ಸೂಚಿಸಿದ್ದಾರೆ.