ಸರಕಾರಿ ಬಸ್ ಢಿಕ್ಕಿ: ವ್ಯಕ್ತಿ ಮೃತ್ಯು
ಬೆಂಗಳೂರು, ನ.13: ರಸ್ತೆ ದಾಟುತ್ತಿದ್ದ ವೇಳೆ ತಮಿಳುನಾಡಿನ ಸರಕಾರಿ ಬಸ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಇಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಸೂರು ರಸ್ತೆಯ ಕೋನೆಪ್ಪನ ಅಗ್ರಹಾರದ ಸ್ಪ್ರಿಂಗ್‌ಲೀಫ್ ಆಸ್ಪತ್ರೆ ಬಳಿ ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಮುನಿಯಪ್ಪ(55) ಎಂಬುವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಿಂದಶೆಟ್ಟಿಪಾಳ್ಯದ ನಿವಾಸಿಯಾದ ಮುನಿಯಪ್ಪಟಿಸಿಎಸ್ ಕಂಪೆನಿಯಲ್ಲಿ ಕಚೇರಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರವಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಬಸ್ ಅವರಿಗೆ ಢಿಕ್ಕಿ ಹೊಡೆದಿದ್ದು, ಬಸ್ ಗುದ್ದಿದ ರಭಸಕ್ಕೆ ಕೆಳಗೆ ಬಿದ್ದಿದ್ದರಿಂದ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಬಸ್ ಚಾಲಕನ್ನು ಬಂಧಿಸಿ, ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.