×
Ad

ನ.16 ರಿಂದ ಆನ್‌ಲೈನ್ ಆಧಾರಿತ ಉದ್ಯೋಗ ಮೇಳ

Update: 2017-11-13 19:20 IST

ಬೆಂಗಳೂರು, ನ.13: ಬಿಗ್ ಜಾಬ್ಸ್ ಡೇಸ್ ಸಂಸ್ಥೆಯ ವತಿಯಿಂದ ವೀಡಿಯೊ ಆಧಾರಿತ ಆನ್‌ಲೈನ್ ಉದ್ಯೋಗ ಮೇಳವನ್ನು ನ.16 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಿಇಒ ಮೊಹಮ್ಮದ್ ಹಸೀವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಇದು ಅನೇಕ ವಿದ್ಯಾವಂತ ನಿರುದ್ಯೋಗಿಗಳಿಗೆ ಅನುಕೂಲವಾಗಲಿದೆ. ನಾವು ಇದನ್ನು ಆರಂಭ ಮಾಡುವ ಮೊದಲು ಅನೇಕ ಸಮೀಕ್ಷೆ ಮತ್ತು ಸಂಶೋಧನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಯಶಸ್ವಿಯಾದ ನಂತರ ಸಾರ್ವಜನಿಕವಾಗಿ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ದೇಶದಲ್ಲಿ ನಿರುದ್ಯೋಗ ಅತ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶದ ಲಕ್ಷಾಂತರ ಯುವಜನರು ಕೆಲಸ ಹುಡುಕಿಕೊಂಡು ನಗರಗಳ ಕಡೆ ಮುಖ ಮಾಡುತ್ತಿದ್ದಾರೆ. ಅನೇಕರು ಲಂಚ ನೀಡಲು ಸಾಧ್ಯವಾಗದೆ ಸಾಮರ್ಥ್ಯವಿದ್ದರೂ ಕೆಲಸ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಯುವಜನರಿಗೆ, ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಮೇಳದಲ್ಲಿ ಭಾಗವಹಿಸಲು ಯಾವುದೇ ಹಣದ ಖರ್ಚಿನ ಅಗತ್ಯವಿಲ್ಲ. ಕೇವಲ ಒಂದು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಸಾಕು. ನಾವು ಯಾವುದೇ ನೋಂದಣಿ ಶುಲ್ಕ ಪಡೆಯುವುದಿಲ್ಲ. ಹಾಗೂ ಇಲ್ಲಿ ಭಾಗವಹಿಸಲು ಪ್ರಯಾಣದ ವೆಚ್ಚ ಬೇಡ ಮತ್ತು ನಿರಾಸೆಯೂ ಇರುವುದಿಲ್ಲ ಎಂದು ತಿಳಿಸಿದರು.

ಆಸಕ್ತರು ಸಂಸ್ಥೆಯ ವೆಬ್‌ಸೈಟ್ www.zrmindzglobal.com ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದು. ಅನಂತರ ಪ್ರವೇಶ ಪರೀಕ್ಷೆ ನೀಡಲಾಗುತ್ತದೆ. ಒಂದು ನಿಗದಿತ ಆಯ್ಕೆಗೆ ಅರ್ಹವಾದ ಅಂಕಗಳನ್ನು ನೀಡಲಾಗುತ್ತದೆ. ಇದರಲ್ಲಿ ಅಂಕ ಪಡೆದವರನ್ನು ನೇರವಾಗಿ ಎಚ್‌ಆರ್‌ನೊಂದಿಗೆ ಆನ್‌ಲೈನ್ ಮೂಲಕ ನೇರವಾಗಿ ಸಂದರ್ಶನ ಮಾಡಿಸಲಾಗುತ್ತದೆ. ಇಲ್ಲಿ ಆಯ್ಕೆಯಾದವರನ್ನು ನೇರವಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದ ಅವರು, ಹೆಚ್ಚಿನ ಮಾಹಿತಿಗಾಗಿ 080-49202111 ಅಥವಾ 99866 61289 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News