×
Ad

ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ದೌರ್ಜನ್ಯ ತಡೆಯಲು ಮೇಯರ್‌ಗೆ ಮನವಿ

Update: 2017-11-13 20:48 IST

ಬೆಂಗಳೂರು, ನ.13: ಬಿಬಿಎಂಪಿಯ ಪೌರಕಾರ್ಮಿಕರ ಮೇಲೆ ಗುತ್ತಿಗೆದಾರರಿಂದ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಂತೆ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಯ ಮುಖಂಡರು ಪಾಲಿಕೆ ಮೇಯರ್ ಆರ್.ಸಂಪತ್‌ರಾಜ್ ಅವರಿಗೆ ಮನವಿ ಮಾಡಿದರು.

ಸೋಮವಾರ ನಗರದ ಬಿಬಿಎಂಪಿಯ ಪೂರ್ವ ವಲಯದ ಕಚೇರಿಯಲ್ಲಿ ಮೇಯರ್ ಸಂಪತ್‌ರಾಜ್ ಅವರನ್ನು ಭೇಟಿ ಮಾಡಿದ ಸಂಘಟನೆಯ ಮುಖಂಡರು, ಕೆ.ಆರ್.ಪುರ ಹಾಗೂ ದಾಸರಹಳ್ಳಿಯಲ್ಲಿ ಮಹಿಳಾ ಗುತ್ತಿಗೆ ಪೌರಕಾರ್ಮಿಕರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿವೆ. ಈ ಕುರಿತು ಪಾಲಿಕೆ ಹಾಗೂ ಪೊಲೀಸರಿಗೆ ದೂರು ನೀಡಲಾಗಿದ್ದರೂ, ಕಳೆದ ಶುಕ್ರವಾರ ಬಾಣಸವಾಡಿಯಲ್ಲಿ ಮೂವರು ಮಹಿಳಾ ಕಾರ್ಮಿಕರನ್ನು ಕೊಠಡಿಯಲ್ಲಿ ಕೂಡಿಹಾಕಿ ತಳಿಸಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ದೇವಮ್ಮ, ಗುತ್ತಿಗೆದಾರರು ಒಂದು ವರ್ಷದಿಂದ ಪ್ರಮುಖ ಅಧಿಕಾರಿಗಳ ಮನೆಗಳಲ್ಲಿ ಮನೆ ಕೆಲಸಕ್ಕೆ ನಮ್ಮನ್ನು ನಿಯೋಜಿಸಿದ್ದಾರೆ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಬೇಕು. ಬಳಿಕ ಅಧಿಕಾರಿಗಳ ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆಯಬೇಕು ಎಂದು ದೂರಿದರು.

ಶುಕ್ರವಾರ ಅಧಿಕಾರಿಗಳ ಮನೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಟ್ಟೆಗಳನ್ನು ತೊಳೆಯಲು ನಿರಾಕರಿಸಿದ್ದಕ್ಕಾಗಿ ಕೊಠಡಿಯಲ್ಲಿ ಕೂಡಿಹಾಕಿ ಥಳಿಸಿದ್ದಾರೆ. ಇಷ್ಟಾದ ನಂತರವೂ ಗುತ್ತಿಗೆದಾರರು ನಾಳೆಯಿಂದ ಮನೆ ಕೆಲಸಕ್ಕೆ ಹೋಗಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದರು.

ಬಾಕಿ ಹಣ ಗುತ್ತಿಗೆದಾರರ ಜೇಬಿಗೆ: ರಾಜ್ಯ ಸರಕಾರ ಕಳೆದ ಹಲವು ತಿಂಗಳ ಹಿಂದೆ ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಟ ವೇತನ ನಿಗದಿಗೊಳಿಸಿ ಆದೇಶ ಹೊರಡಿಸಿದ್ದರೂ, ತಾಂತ್ರಿಕ ಕಾರಣಗಳಿಂದ ಕಾರ್ಮಿಕರಿಗೆ ಪರಿಷ್ಕೃತ ವೇತನ ಸಿಕ್ಕಿರಲಿಲ್ಲ. ಇತ್ತೀಚೆಗೆ ಕಾರ್ಮಿಕರಿಗೆ ಸರಕಾರದಿಂದ ಬಾಕಿ ಹಣ ಬಿಡುಗಡೆಯಾಗಿದ್ದು, ಕಾರ್ಮಿಕರಿಗೆ ಬಂದ ಹಣದಲ್ಲಿ ಅರ್ಧದಷ್ಟು ಹಣವನ್ನು ಗುತ್ತಿಗೆದಾರರು ಬಲವಂತವಾಗಿ ಕಾರ್ಮಿಕರಿಗೆ ಕಸಿದುಕೊಂಡಿದ್ದಾರೆಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News