ಕಡಲೇ ಕಾಯಿ ಬಳಸಿ ಬಡಜನರಿಗೆ ಬೆನ್ನೆಲುಬಾಗಿ ನಿಲ್ಲಿ: ಕೇಂದ್ರ ಸಚಿವ ಅನಂತಕುಮಾರ್
ಬೆಂಗಳೂರು, ನ.13: ಇಂದು ಕಡಲೆಕಾಯಿ ಬಳಕೆ ಕಡಿಮೆಯಾಗುತ್ತಿದೆ. ಫಾಮಾಯಿಲ್, ಡಾಲ್ಡಾ, ವನಸ್ಪತಿಗಳಿಗೆ ಜನರು ಮಾರು ಹೋಗಿದ್ದಾರೆ. ಕಡಲೆಕಾಯಿ ಅತ್ಯಂತ ಪೌಷ್ಟಿಕ, ಸ್ವಾದಿಷ್ಟವಾದ ಆಹಾರ. ಜನರು ಹೆಚ್ಚೆಚ್ಚು ಕಡಲೆಕಾಯಿ ಹಾಗೂ ಅದರ ಉತ್ಪನ್ನಗಳನ್ನು ಬಳಕೆ ಮಾಡುವ ಮೂಲಕ ಬಡ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ್ ಸಲಹೆ ನೀಡಿದ್ದಾರೆ.
ಕಡಲೆ ಕಾಯಿ ಪರಿಷೆಗೆ ಚಾಲನೆ ನೀಡಿ ಮಾತನಾಡಿದ ಅವರು, ವೃಷಭಾವತಿ ನದಿ ಉಗಮ ಸ್ಥಾನ ದೊಡ್ಡ ಬಸವಣ್ಣನ ಅಡಿದಾವರಿಗಳಲ್ಲಿದೆ ಎಂಬ ಪ್ರತೀತಿ ಇದೆ. ಆದರೆ, ವೃಷಭಾವತಿ ಇಂದು ಕೊಚ್ಚೆಮಯ ಚರಂಡಿಯಾಗಿ ಮಾರ್ಪಟ್ಟಿದೆ. ಹಾಗಾಗಿ ಈ ನದಿಯ ಪುನಶ್ಚೇತನ ಮಾಡಬೇಕಿದೆ. ರಾಜ್ಯ ಸರಕಾರ, ಬಿಬಿಎಂಪಿ ವೃಷಭಾವತಿ ನದಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ನೀಲಿನಕ್ಷೆ ಸಿದ್ಧಪಡಿಸಿ ನೀಡಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಚರ್ಚಿಸಿ ಪುನಶ್ಚೇತನಕ್ಕೆ ಅಗತ್ಯವಾಗಿರುವ ಅನುದಾನ ನೀಡಲು ಮನವಿ ಮಾಡಲಾಗುವುದು ಎಂದು ಹೇಳಿದರು.
ಮೇಯರ್ ಸಂಪತ್‌ರಾಜ್ ಮಾತನಾಡಿ, ಬಡವರ ಬಾದಾಮಿ ಕಡಲೆ ಕಾಯಿಯಲ್ಲಿ ರೈತರ ಶ್ರಮ ಅಡಗಿದೆ. ಇಂದು ಅಪೌಷ್ಠಿಕತೆ ಸಮಸ್ಯೆಯಾಗಿ ಕಾಡುತ್ತಿದೆ. ಅಪೌಷ್ಠಿಕತೆಗೆ ರೈತರು ಕೊಡುಗೆಯಾದ ಕಡಲೆಕಾಯಿ ಮದ್ದಾಗಿದೆ. ಮಕ್ಕಳಿಗೆ ಕಡಲೆಕಾಯಿ ಮಿಠಾಯಿ ತಿನ್ನಿಸಿದ್ದಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಬಹುದು. ಬೆಂಗಳೂರು ಐಟಿ ಸಿಟಿಯಾದರೂ ಮೂಲ ಸಂಸ್ಕೃತಿ ಮರೆಯಾಗಿಲ್ಲ. ಮುಂಬರುವ ಪರಿಷೆಗೆ ಎಲ್ಲಾ ಪಾಲಿಕೆ ಸದಸ್ಯರನ್ನು ಕರೆಸುವ ಆಲೋಚನೆ ಇದೆ ಎಂದರು.
ಈ ವೇಳೆ ಶಾಸಕ ರವಿಸುಬ್ರಹ್ಮಣ್ಯ, ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಮಾಜಿ ಮೇಯರ್ ಕಟ್ಟೆ ಸತ್ಯ ನಾರಾಯಣ ಇನ್ನಿತರರು ಉಪಸ್ಥಿತರಿದ್ದರು.
ಕಡಲೆಕಾಯಿ ಪರಿಷೆ ನಡೆಯುವ ಬಸವನಗುಡಿಯಂತೂ ಅಪ್ಪಟ ಗ್ರಾಮೀಣ ಪ್ರದೇಶದಂತೆ ಕಾಣುತ್ತಿತ್ತು. ಕಣ್ಣು ಹಾಯಿಸಿದಷ್ಟು ದೂರ ರಸ್ತೆಯ ಇಕ್ಕೆಲ್ಲಗಳಲ್ಲಿ ರಾಶಿ ರಾಶಿ ಕಡಲೇಕಾಯಿ, ಹೆಜ್ಜೆ ಇಡಲಾಗದಷ್ಟು ಜನಸಾಗರ. ಸೇರಿಗೆ ಇಂತಿಷ್ಟು ರೂಪಾಯಿ ಎಂದು ವ್ಯಾಪಾರಿಗಳು ಕೂಗು, ಕೀ ಕೊಡುವ ಗೊಂಬೆಗಳಿಂದ ದೊಡ್ಡ ದೊಡ್ಡ ಟೆಡ್ಡಿ ಬೇರ್, ಆಕರ್ಷಕ ಬಲೂನುಗಳು, ತಬಲ, ಪೀಪಿಗಳು...
ಹಸಿಗಡಲೇಕಾಯಿ, ಬೇಯಿಸಿದ ಕಡಲೇ ಕೆಜಿ 20-30 ರೂ., ಕಡ್ಲೇಪುರಿ ಸೇರು 20-30 ಎಂದು ವ್ಯಾಪಾರಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಕಡಲೇಕಾಯಿ ಮತ್ತು ಕಡ್ಲೇಪುರಿ ಖರೀದಿ ಬಲು ಜೋರಾಗಿ ನಡೆಯುತ್ತಿತ್ತು. ಇಲ್ಲಿಗೆ ಬಂದ ಜನರು ಬೇರೆ ವಸ್ತುಗಳ ಖರೀದಿಯ ನಂತರ ಕೊನೆಯಲ್ಲಿ ಕಡಲೇಕಾಯಿ ಹಾಗೂ ಕಡ್ಲೇಪುರಿ ಕೊಳ್ಳುವುದು ಸಹಜವಾಗಿತ್ತು.
ಬೊಂಬಾಯಿ ಮಿಠಾಯಿ, ಬಜ್ಜಿ, ಬೊಂಡ, ಕಬ್ಬಿನ ಹಾಲು, ಗೋಬಿ ಮಂಚೂರಿ, ಬೇಲ್ ಪುರಿ, ಮಸಾಲೆಪುರಿ, ಬಣ್ಣ ಬಣ್ಣದ ಐಸ್ ಕ್ಯಾಂಡಿಗಳು ಬೇಕೆಂದು ಹಠ ಮಾಡುವ ಮಕ್ಕಳು, ಆ ಬಳೆ ಚೆಂದ, ಈ ಸರ ಚೆಂದ ಎಂದು ಆಲಂಕಾರಿಕಾ ಸಾಮಗ್ರಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದು ಅಪ್ಪಟ ಗ್ರಾಮೀಣ ಸೊಗಡಿನ ಕಡಲೇಕಾಯಿ ಪರಿಷೆಯಲ್ಲಿ ಕಂಡು ಬಂದಿತ್ತು.
ಬಸವನಗುಡಿಯ ರಾಮಕೃಷ್ಣ ಆಶ್ರಮದಿಂದ ಗೋವರ್ಧನ ಗಿರಿ ದೇವಸ್ಥಾನದಿಂದ ಆಚೆಗೂ, ಬ್ಯೂಗಲ್‌ರಾಕ್‌ನಿಂದ ಡಿ.ವಿ.ಜಿ.ರಸ್ತೆವರೆಗೆ, ಗೋಕುಲ ಇನ್‌ಸ್ಟಿಟ್ಯೂಟ್‌ನಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ, ಮೌಂಟ್‌ಜಾಯ್ ರಸ್ತೆಯಿಂದ ಹನುಮಂತನಗರದವರೆಗೆ ತರೇಹವಾರಿ ಮಳಿಗೆಗಳು ಜನರನ್ನು ಆಕರ್ಷಿಸುತ್ತಿದ್ದವು. ಆಶ್ರಮ ಬಸ್ ನಿಲ್ದಾಣದಲ್ಲಿ ಗೃಹ ಆಲಂಕಾರಿಕ ಸಾಮಗ್ರಿಗಳು, ಕಂಬಳಿಗಳ ಕಾರುಬಾರು ಮೊದಲ ಸಾಲಿನ ಮಳಿಗೆಗಳಲ್ಲಿ ಜೋರಾಗಿದ್ದವು. ರಿಂಗ್ ಹಾಕುವ ಆಟ, ಚೆಂಡುಗಳನ್ನು ಹಾಕಿ ಅಂಕ ಗಳಿಸಿ ಉಡುಗೊರೆ ಪಡೆಯುವ ಆಟ, ರಂಗೋಲಿ ಆಟ, ಬಳೆ ಹಾಕುವ ಆಟಗಳನ್ನು ಜಾತ್ರೆಗೆ ಬಂದ ಜನರು ಆಡಿ ಸಂತಸಪಟ್ಟರು.
ಸಂಚಾರ ವ್ಯತ್ಯಯ: ಪರಿಷೆಗಾಗಿ ರಾಮಕೃಷ್ಣ ಆಶ್ರಮದಿಂದ ಎನ್.ಆರ್. ಕಾಲನಿ, ಗಣೇಶಭವನದವರೆಗೂ ವ್ಯಾಪಾರಿಗಳು ಮಳಿಗೆಗಳನ್ನು ತೆರೆದಿರುವುದರಿಂದ ಆಶ್ರಮ ವೃತ್ತದಿಂದ ಬಸವನಗುಡಿಯ ರಸ್ತೆಯ ಕಡೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ಹನುಮಂತನಗರದ ಮೂಲಕ ಸಾಗಿ ಹೋಗಲು ಅವಕಾಶ ಕಲ್ಪಿಸಲಾಗಿತ್ತು.
ಮೆಟ್ರೋ ಫುಲ್: ನಾಗಸಂದ್ರದಿಂದ ಯಲಚೇನಹಳ್ಳಿ ಕಡೆಗೆ ಮೆಟ್ರೋ ಸೇವೆ ಕಾರ್ಯಾರಂಭ ಮಾಡಿರುವುದರಿಂದ ನ್ಯಾಷನಲ್ ಕಾಲೇಜಿನಲ್ಲಿ ನಿಲ್ದಾಣ ನಿರ್ಮಿಸಲಾಗಿದೆ. ಆದುದರಿಂದಾಗಿ ಸಾವಿರಾರು ಜನರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದರಿಂದ ಮೆಟ್ರೋ ತುಂಬಿ ತುಳುಕುತ್ತಿತ್ತು.