×
Ad

ಕೆಎಟಿ ಆದೇಶ ಕಳಂಕಿತವಾಗಿದೆ ಎಂಬ ಆರೋಪ ಒಪ್ಪಲು ಸಾಧ್ಯವೇ: ವಕೀಲರಿಂದ ಹೈಕೋರ್ಟ್‌ಗೆ ಪ್ರಶ್ನೆ

Update: 2017-11-13 21:02 IST

ಬೆಂಗಳೂರು, ನ.13: ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಆದೇಶ ಕಳಂಕಿತವಾಗಿದೆ ಎಂಬ ಆರೋಪವನ್ನು ಒಪ್ಪಲು ಸಾಧ್ಯವೇ ಎಂದು ವಕೀಲ ಬಿ.ಎಂ.ಅರುಣ್ ಹೈಕೋರ್ಟ್‌ಗೆ ಪ್ರಶ್ನಿಸಿದ್ದಾರೆ.

2011ರ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಆಯ್ಕೆಯಾದ ಎಲ್ಲ 362 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂಬ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶ ಪ್ರಶ್ನಿಸಿ ಅನುತ್ತೀರ್ಣ ಅಭ್ಯರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು(ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಮುಂದುವರಿಸಿತು.

ವಿಚಾರಣೆ ವೇಳೆ ಆಯ್ಕೆಯಾಗಿರುವ ಅಭ್ಯರ್ಥಿ ಸುಪ್ರಿಯಾ ಬಣಕಾರ್ ಪರ ವಾದ ಮಂಡಿಸಿದ ಅರುಣ್, ಅರ್ಜಿದಾರರು ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳ ಬಗ್ಗೆ ಅಗೌರವ ಭಾವನೆ ಮೂಡಿಸುವಂತಹ ಭಾಷೆ ಬಳಸಿದ್ದಾರೆ ಎಂದರು.

ಆಕ್ಷೇಪಾರ್ಹ ಭಾಷೆ ಬಳಸಿರುವ ಈ ಪಿಐಎಲ್ ಅರ್ಜಿದಾರರಾದ ರೇಣುಕಾಂಬಿಕೆ, ಆರ್.ಚಂದ್ರಕಾಂತ ಎಸ್.ಮಾಲಾಪುರ, ಮಾಲತೇಶ ಅಡಿವೆಪ್ಪ ಎಸ್.ದೊಡ್ಡಮನಿ, ಬಸವರಾಜ ಸಿದ್ದಪ್ಪ ದಾನೋಜಿ, ಡಿ.ಒ.ರಮೇಶ್, ರಘು ಕುಮಾರ್, ಎಸ್.ಪ್ರಮೀಳಾ, ಬಿ.ನಾಗರಾಜ, ಜಾನ್ ವಾಜ್, ಸೋಮಶೇಖರ್, ಹಕೀಂ ಫೈಸಲ್, ಟಿ.ಶ್ರೀನಿವಾಸ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಈಗಾಗಲೇ ಈ ಪಿಐಎಲ್‌ನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಮ್ಮ ಮಧ್ಯಂತರ ಅರ್ಜಿ ಹಿಂಪಡೆದಿದ್ದಾರೆ. ಮತ್ತೊಂದೆಡೆ ಡಾ.ಮೈತ್ರಿ ಅವರು ಕೆಎಟಿ ಆದೇಶವನ್ನು ಒಪ್ಪಿಕೊಂಡಿದ್ದಾರೆ. ಅವರು ಸರಕಾರಿ ನೌಕರರು. ಹೀಗಿರುವಾಗ ಮೈತ್ರಿ ಕೆಎಟಿ ಆದೇಶವನ್ನು ಹೇಗೆ ಪ್ರಶ್ನಿಸುತ್ತಾರೆ ಎಂದರು.

ಆಯ್ಕೆಯಾಗಿರುವ ಅಭ್ಯರ್ಥಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್, 1998ರಿಂದ ಕೆಪಿಎಸ್‌ಸಿಯಲ್ಲಿ ಯಾವುದೇ ಅಕ್ರಮ ನಡೆದ ಉದಾಹರಣೆಗಳಿಲ್ಲ. 2011ರ ಆಯ್ಕೆ ಬಗ್ಗೆ ಮಾತ್ರವೇ ಆರೋಪಗಳಿವೆ. 2014ರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ದೋಷಗಳಿಲ್ಲ ಎಂದು ಪ್ರತಿಪಾದಿಸಿದರು.

ದಿನದ ವಿಚಾರಣೆಯ ಕೊನೆಗೆ ಡಾ.ಮೈತ್ರಿ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ ಹೊಳ್ಳ, ಈ ಆಯ್ಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಿಐಡಿ ಮಧ್ಯಂತರ ವರದಿಯ ಆಧಾರವೊಂದೇ ಸಾಕು ಎಂದು ಪುನರುಚ್ಚರಿಸಿದರು. ವಿಚಾರಣೆಯನ್ನು ಮಂಗಳವಾರಕ್ಕೆ (ನ.14) ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News