×
Ad

ಐಐಎಸ್ಸಿ ನಿರ್ದೇಶಕ ಅನುರಾಗ್ ಕುಮಾರ್ ವಜಾಗೆ ಆಗ್ರಹ

Update: 2017-11-13 22:13 IST

ಬೆಂಗಳೂರು, ನ.13: ದಲಿತ ವಿಜ್ಞಾನಿಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಐಎಸ್ಸಿ ನಲ್ಲಿ ದಲಿತ ವಿಜ್ಞಾನಿಗಳ ಮೇಲೆ ನಿರಂತರವಾದ ದೌರ್ಜನ್ಯ ನಡೆಸಲಾಗುತ್ತಿದೆ. ದಲಿತ ವಿಜ್ಞಾನಿಯಾದ ಡಾ.ಸಣ್ಣ ದುರ್ಗಪ್ಪ ಎಂಬವರನ್ನು ಅನುರಾಗ್ ಕುಮಾರ್ ಮಹಿಳೆಯನ್ನು ಕಳಿಸಿ ಹನಿಟ್ರಾಪ್ ಮಾಡಿಸಿ ಕಿರುಕುಳ, ದೌರ್ಜನ್ಯ ನಡೆಸಿದ್ದಾರೆ. ಜಾತಿ ನಿಂದನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಸುಳ್ಳು ಕೇಸುಗಳನ್ನು ದಾಖಲಿಸಿ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಆರೋಪಿಸಿದರು.

ಕಳೆದ 10 ವರ್ಷಗಳಿಂದ ಒಬ್ಬರೇ ಒಬ್ಬ ದಲಿತ ವಿಜ್ಞಾನಿಯನ್ನು ನೇಮಕ ಮಾಡಿಕೊಂಡಿಲ್ಲ ಎಂದ ಅವರು, ಈ ಇನ್‌ಸ್ಟಿಟ್ಯೂಟ್‌ನಲ್ಲಿ ದಿನದಿಂದ ದಿನಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹಲ್ಲೆ ನಡೆಸುವುದು, ಅನಗತ್ಯವಾಗಿ ನಿವೃತ್ತಿಗೊಳಿಸುವುದು, ಸುಳ್ಳು ಆರೋಪ ಮಾಡುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ದಲಿತ ವಿಜ್ಞಾನಿಗಳು ನರಳುತ್ತಿದ್ದು, ಇದಕ್ಕೆಲ್ಲಾ ಅನುರಾಗ್ ಕುಮಾರ್ ಕಾರಣ ಎಂದು ದೂರಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 501 ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕೇವಲ 6 ಜನರು ಮಾತ್ರ ದಲಿತರಿದ್ದು, ಉಳಿದ ಎಲ್ಲರೂ ಮೇಲ್ಜಾತಿಯವರಿದ್ದಾರೆ. ಇವರು ದಲಿತರಿಗೆ ಸಭೆಗಳಿಂದ ದೂರವಿಡುವುದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಿಂದ ದೂರವಿಡುವುದು, ಪ್ರಮುಖ ಪ್ರಾಜೆಕ್ಟ್‌ಗಳಿಂದ ದೂರ ಇಡುವುದು ಸೇರಿದಂತೆ ಅನೇಕ ರೀತಿಯ ಸಾಮಾಜಿಕ ಬಹಿಷ್ಕಾರದ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಅನಗತ್ಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಾ ಸಂತೋಷ ಪಡುತ್ತಿರುವ ಸಂಸ್ಥೆಯ ನಿರ್ದೇಶಕ ಅನುರಾಗ್ ಕುಮಾರ್‌ರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಹಾಗೂ ಅಗತ್ಯವಿರುವಷ್ಟು ದಲಿತ ವಿಜ್ಞಾನಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News