×
Ad

ಪ್ರತ್ಯೇಕ ಗಾಂಜಾ ಮಾರಾಟ ಪ್ರಕರಣ: 7 ಆರೋಪಿಗಳ ಬಂಧನ

Update: 2017-11-14 18:30 IST

ಬೆಂಗಳೂರು, ನ.14: ಮಾದಕ ವಸ್ತು ಮಾರಾಟ ಆರೋಪದ ಸಂಬಂಧ ಏಳು ಜನರನ್ನು ಬಂಧಿಸಿರುವ ಮೈಕೋ ಲೇಔಟ್ ಠಾಣಾ ಪೊಲೀಸರು ಒಟ್ಟು 22.250 ಕೆಜಿ ಗಾಂಜಾ ಹಾಗೂ 100 ಗ್ರಾಂ ಚರಸ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಬಿಹಾರ ಮೂಲದ ರಾಹುಲ್ ಕುಮಾರ್ ಯಾದವ್(24), ರಾಮ್‌ದೀನ್ ಜಾಧವ್(26), ಶ್ಯಾಮ್ ಕುಮಾರ್ ಯಾದವ್(21), ದಾನೇಶ್(23), ಅನೀಷ್(23) ಹಾಗೂ ಅಬ್ದುಲ್ ಆಸೀಸ್(25), ರಾಜೇಶ್(24) ಬಂಧಿತ ಆರೋಪಿಗಳೆಂದು ಹೇಳಿದರು.

ಬಿಟಿಎಂ 2ನೆ ಹಂತದ ಮಡಿವಾಳ ಕೆರೆಯ ಬಳಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಮುಂದಾಗಿದ್ದ ವೇಳೆ ದಾಳಿ ನಡೆಸಿದ ಮೈಕೋ ಲೇಔಟ್ ಠಾಣಾ ಪೊಲೀಸರು, ಬಿಹಾರ ಮೂಲದ ರಾಹುಲ್ ಕುಮಾರ್ ಯಾದವ್, ರಾಮ್‌ದೀನ್ ಜಾಧವ್, ಶ್ಯಾಮ್ ಕುಮಾರ್ ಯಾದವ್, ದಾನೇಶ್, ಅನೀಷ್ ಎಂಬವರನ್ನು ಬಂಧಿಸಿದ್ದಾರೆ ಎಂದರು.

ಆರೋಪಿಗಳಿಂದ 7.250 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ದಿಲೀಪ್ ಎಂಬ ವ್ಯಕ್ತಿಯ ಕಡೆಯಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ಅದನ್ನು ಚಿಕ್ಕ ಚಿಕ್ಕ ಪ್ಯಾಕೇಟ್‌ಗಳಾಗಿ ಮಾಡಿ ಬೀಡಾ ಮತ್ತು ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದರು.

ಮತ್ತೊಂದು ಪ್ರಕರಣದಲ್ಲಿ ಅಬ್ದುಲ್ ಆಸೀಸ್ ಮತ್ತು ರಾಜೇಶ್ ಎಂಬವರನ್ನು ಬಂಧಿಸಿರುವ ಮೈಕೋ ಲೇಔಟ್ ಪೊಲೀಸರು, 15.100 ಕೆಜಿ ಗಾಂಜಾ ಮತ್ತು 100 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ಬೆಳಕಿಗೆ ಎಂದಿದೆ ಎಂದು ಆಯುಕ್ತರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಗ್ನೇಗ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ, ಎಸಿಪಿ ಎಂ.ಎನ್.ಕರಿ ಬಸವನಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News